Advertisement

ಬಾಯ್ದೆರೆದಿವೆ ಬೃಹತ್‌ ಹೊಂಡಗಳು

11:52 PM Jul 25, 2019 | mahesh |

ಬಂಟ್ವಾಳ: ಸಾಮಾನ್ಯವಾಗಿ ಹೆದ್ದಾರಿಯೆಂದರೆ ಸುಸಜ್ಜಿತ ವಾಗಿದ್ದು, ಪ್ರಯಾಣವೂ ಹೆಚ್ಚು ಅನುಕೂಲಕರ ವಾಗಿರುತ್ತದೆ. ಆದರೆ ಬಿ.ಸಿ. ರೋಡ್‌-ಮಾಣಿ ರಾ.ಹೆ. ಹೆದ್ದಾರಿ – 75ರ ಪ್ರಯಾಣ ಇದಕ್ಕೆ ಅಪವಾದವಾಗಿದೆ. ಹೆದ್ದಾರಿಯ ಬಿ.ಸಿ. ರೋಡ್‌-ಮೆಲ್ಕಾರ್‌ ಮಧ್ಯೆ ಮರಣ ಗುಂಡಿಗಳೇ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

Advertisement

ಈ ಬಾರಿ ಮಳೆ ಕಡಿಮೆಯಿದ್ದರೂ ಹೆದ್ದಾರಿಯ ಹೊಂಡಗಳಿಗೇನು ಕೊರತೆ ಯಾಗಿಲ್ಲ. ಬಿ.ಸಿ. ರೋಡ್‌, ಪಾಣೆ ಮಂಗಳೂರು, ಮೆಲ್ಕಾರ್‌ ಹೀಗೆ ಪ್ರತಿ ಜಂಕ್ಷನ್‌ಗಳಲ್ಲೂ ಬೃಹತ್‌ ಗಾತ್ರದ ಹೊಂಡಗಳಿದ್ದು, ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಹಾಗೂ ಸಣ್ಣ ವಾಹನಗಳ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.

ಈ ಹಿಂದೆ ಹೆದ್ದಾರಿಯ ಹೊಂಡ ಗಳನ್ನು ಮುಚ್ಚಲಾಗಿತ್ತಾದರೂ ಅಲ್ಪ ಮಳೆಯಲ್ಲೇ ಹೊಂಡಗಳು ಸೃಷ್ಟಿ ಯಾಗಿವೆ. ವಾಹನಗಳು ಬೃಹತ್‌ ಹೊಂಡಕ್ಕೆ ಇಳಿದೇ ಸಾಗುವುದರಿಂದ ದಿನದಿಂದ ದಿನಕ್ಕೆ ಹೊಂಡಗಳ ಗಾತ್ರವೂ ಹೆಚ್ಚುತ್ತಿದೆ. ಹೀಗಾಗಿ ಈಗಲೇ ತಾತ್ಕಾಲಿಕ ಪರಿಹಾರ ನೀಡದೇ ಇದ್ದರೆ ಮುಂದಿನ ದಿನಗಳಲ್ಲಿ ವಾಹನ ಸಂಚಾರವೇ ದುಸ್ತರ ಎನಿಸುವ ಸಾಧ್ಯತೆಯೂ ಇದೆ.

ಎಚ್ಚರ ತಪ್ಪಿದರೆ ಅಪಾಯ
ಹೆದ್ದಾರಿಯಲ್ಲಿ ವಾಹನಗಳು ವೇಗ ವಾಗಿ ಸಾಗಿ ಹೊಂಡಗಳನ್ನು ಕಂಡು ಏಕಾಏಕಿ ಬ್ರೇಕ್‌ ಹಾಕುತ್ತವೆ. ಈ ಸಂದರ್ಭ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುವ ಸಾಧ್ಯತೆ ಇದ್ದು, ಹಿಂದಿನಿಂದ ಮತ್ತೂಂದು ವಾಹನ ವೇಗವಾಗಿ ಬಂದರೆ ಅಪಾಯ ಭೀತಿಯಿದೆ. ಹೊಂಡದಲ್ಲಿ ನೀರು ತುಂಬಿ ಹೊಂಡ ಇರುವುದು ಗಮನಕ್ಕೇ ಬಾರದೇ ಇದ್ದಾಗಲೂ ಅಪಾಯ ಸಾಧ್ಯತೆ ಇದೆ.

ಆಟೋ ರಿಕ್ಷಾ, ಕಾರಿನಂತಹ ಸಣ್ಣ ವಾಹನಗಳು ಒಮ್ಮೆ ಹೊಂಡಕ್ಕೆ ಇಳಿದರೆ ಮೇಲೆ ಬರಲು ಹರಸಾಹಸ ಪಡಬೇಕಿದೆ. ಇನ್ನು ವಾಹನಗಳು ಸಾಗುವ ಸಂದರ್ಭ ಹೊಂಡಗಳ ಪಕ್ಕದಲ್ಲಿ ಪಾದಾಚಾರಿಗಳು ನಿಂತಿದ್ದರೆ ಅವರಿಗೆ ಕೆಸರಿನ ಅಭಿಷೇಕವಾಗುವು ದರಲ್ಲಿ ಸಂಶಯವಿಲ್ಲ.

Advertisement

ಪೈಪ್‌ಲೈನ್‌ ಲೀಕೇಜ್‌?
ಹೆದ್ದಾರಿಗಳಲ್ಲಿ ಕಾಣಿಸಿಕೊಂಡಿರುವ ಹೊಂಡಗಳ ಕುರಿತು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರಾ. ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳ ಜತೆ ಮಾತನಾಡಿದ ವೇಳೆ ಬಿ.ಸಿ. ರೋಡ್‌ನ‌ ಹೆದ್ದಾರಿಯಲ್ಲಿ ಹೊಂಡ ಕಾಣಿಸಿಕೊಳ್ಳುವುದಕ್ಕೆ ನೀರು ಪೂರೈಕೆಯ ಪೈಪ್‌ನಲ್ಲಿ ಸೋರುವಿಕೆ ಕಾರಣ ಎಂದು ಹೇಳಿದ್ದಾರೆ.

ಬಿ.ಸಿ. ರೋಡ್‌ನ‌ಲ್ಲಿ ಹೆದ್ದಾರಿಯ ತಳಭಾಗದಲ್ಲಿ ಕರ್ನಾಟಕ ಅರ್ಬನ್‌ ವಾಟರ್‌ ಸಪ್ಲೈ ಬೋರ್ಡ್‌ನ ಪೈಪ್‌ಲೈನ್‌ ಹಾದುಹೋಗಿದ್ದು, ಹೀಗಾಗಿ ಅದರ ಸೋರುವಿಕೆಯಿಂದ ಹೊಂಡ ಸಮಸ್ಯೆ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಆದರೆ ಇತರ ಭಾಗಗಳಲ್ಲಿ ಹೊಂಡಗಳಿರುವ ಪ್ರದೇಶದಲ್ಲಿ ಯಾವುದೇ ಪೈಪ್‌ಲೈನ್‌ ಇಲ್ಲವಾಗಿದ್ದು, ಆದರೂ ಹೊಂಡಗಳು ಕಾಣಿಸಿಕೊಂಡಿವೆ. ಹೊಂಡಗಳು ಕಾಣಿಸಿಕೊಂಡಿರುವ ಬಹುತೇಕ ಪ್ರದೇಶವು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ಕಾರಣದಿಂದ ಪುರಸಭೆಯು ಎನ್‌ಎಚ್‌ಎಐನ ಜತೆಗೆ ನೀರು ಪೂರೈಕೆ ನಿಗಮಕ್ಕೂ ನೋಟಿಸ್‌ ನೀಡುವುದಕ್ಕೆ ಚಿಂತನೆ ನಡೆಸಿದೆ. ಸ್ಥಳೀಯಾಡಳಿತ ಒತ್ತಡ ಹೇರಿದರೆ ಹೊಂಡಗಳಿಗೂ ಮುಕ್ತಿ ಸಿಗಬಹುದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನೋಟಿಸ್‌ ನೀಡುತ್ತೇವೆ
ಹೆದ್ದಾರಿ ಹೊಂಡಗಳಿಂದ ಅಪಾಯದ ಸಾಧ್ಯತೆಯಿದ್ದು, ಹೀಗಾಗಿ ದುರಸ್ತಿಗಾಗಿ ಸಂಬಂಧಪಟ್ಟವರಿಗೆ ಪುರಸಭೆಯಿಂದ ನೋಟಿಸ್‌ ನೀಡಲಾಗುವುದು. ಜತೆಗೆ ಎನ್‌ಎಚ್‌ಎಐನವರು ನೀರು ಪೂರೈಕೆಯ ಪೈಪ್‌ ಸೋರುವುದರಿಂದ ಹೊಂಡ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದು, ಹೀಗಾಗಿ ನಗರ ನೀರು ಪೂರೈಕೆ ನಿಗಮಕ್ಕೂ ನೋಟಿಸ್‌ ನೀಡಲಾಗುವುದು.
 - ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next