ಕಡೂರು: ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಜನಸಂಖ್ಯೆಯೂ ಹೆಚ್ಚುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಬೃಹತ್ ಉದ್ಯಾನವನ ನಿರ್ಮಾಣದ ಅವಶ್ಯಕತೆ ಇರುವುದರಿಂದ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಪಟ್ಟಣದ ಪುರಸಭೆಯ ಪಂಪ್‌ಹೌಸ್‌ನ ಮುಂಭಾಗದ ಜಾಗದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ ಜನತೆಗೆ ವಾಯು ವಿಹಾರಕ್ಕಾಗಿ ಇಂದು ಉತ್ತಮ ಉದ್ಯಾನವನ ಅತ್ಯವಶ್ಯಕವಾಗಿ ಬೇಕಾಗಿತ್ತು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಪಂಪ್‌ಹೌಸ್ ಮುಂದೆ ಇರುವ ಈ ಜಾಗದಲ್ಲಿ ಉದ್ಯಾನವನನಿರ್ಮಾಣವಾಗಲಿದೆ. ಇದಕ್ಕೆ ಬೇಕಾದ ಸಹಕಾರವನ್ನು ಪುರಸಭೆಗೆ ನೀಡಲು ತಾವು ಸಿದ್ಧ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಾಗರಿಕರಿಗೆ ವಾಯುವಿಹಾರಕ್ಕಾಗಿ ಒಂದು ಬೃಹತ್ ಉದ್ಯಾನವನ ನಿರ್ಮಾಣಕ್ಕಾಗಿ ಪುರಸಭೆಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಹಾಗೂ ಶಾಸಕ ಬೆಳ್ಳಿಪ್ರಕಾಶ್ ಅವರ ಸಲಹೆ, ಸಹಕಾರ ಪಡೆದು ಸುಮಾರು 36 ಲಕ್ಷ ರೂ.ಗಳಲ್ಲಿ ಕಾಮಗಾರಿ ನಡೆಸಲು ಈಗಾಗಲೇ 29 ಲಕ್ಷ ರೂ.ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.
6 ಎಕರೆ ಭೂಮಿಯಲ್ಲಿ ಬೃಹತ್ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಪಾರ್ಕ್ ಒಳಭಾಗದಲ್ಲಿ ಸುತ್ತಲೂ ದೀಪ ಅಳವಡಿಸಲು 9 ಲಕ್ಷ ರೂ.ಗಳು ವೆಚ್ಚವಾಗಲಿದೆ ಎಂದರು.
ಉಪಾಧ್ಯಕ್ಷೆ ವಿಜಯ ಚಿನ್ನರಾಜ್, ಸದಸ್ಯರಾದ ಸಂದೇಶ್‌ಕುಮಾರ್ (ಸುಬ್ಬಣ್ಣ), ಮಂಜುಳಾ ಚಂದ್ರು, ಯತಿರಾಜ್, ಗೋವಿಂದರಾಜ್, ಸುಧಾ ಉಮೇಶ್, ತೋಟದ ಮನೆ ಮೋಹನ್, ಪುಷ್ಪಾ ಮಂಜುನಾಥ್, ಜ್ಯೋತಿ ಆನಂದ್, ಮೋಹನ್, ಹಾಲಮ್ಮ, ಯಾಸೀನ್, ಮಂಡಿ ಇಕ್ಬಾಲ್ ಮತ್ತು ಕಾಂತರಾಜ್, ಮಂಜುನಾಥ್ ಪಂಗ್ಲಿ, ಶಂಕರ್, ಪುರಸಭೆ ಮುಖ್ಯಾ ಧಿಕಾರಿ ಎಚ್. ಎನ್. ಮಂಜುನಾಥ್, ವೃತ್ತ ನಿರೀಕ್ಷಕ ಮಂಜುನಾಥ್, ಗುತ್ತಿಗೆದಾರ ಬಿಕಾಂ ಶ್ರೀನಿವಾಸ್ ಮತ್ತಿತರರು ಇದ್ದರು.