Advertisement

ಸಾಗರೋತ್ತರ ಭಾರತೀಯರ ಬೃಹತ್‌ ಸಾಗರ

08:58 AM Sep 24, 2019 | sudhir |

ನೌಕರಿ, ವ್ಯಾಪಾರ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಾರಣಗಳಿಗಾಗಿ ತಮ್ಮ ದೇಶ ತೊರೆದು ವಿದೇಶದಲ್ಲಿ ನೆಲೆಸಿರುವ ಜನರಲ್ಲಿ ಭಾರತೀಯರ ಸಂಖ್ಯೆ ಪ್ರಪಂಚದಲ್ಲೇ ಅತ್ಯಧಿಕ ಎಂದು ಹೇಳುತ್ತಿದೆ ವಿಶ್ವಸಂಸ್ಥೆಯ ಒಂದು ವರದಿ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಅಂತಾರಾಷ್ಟ್ರೀಯ ವಲಸಿಗರ ಪ್ರಮಾಣ-2019 ಅನ್ನು ಬಿಡುಗಡೆ ಮಾಡಿದ್ದು, ಅದರನ್ವಯ ಜಾಗತಿಕವಾಗಿ ವಲಸಿಗರ ಸಂಖ್ಯೆ 27.2 ಕೋಟಿ ತಲುಪಿದೆ ಎಂದು ಅಂದಾಜಿಸಲಾಗಿದೆ. ಇದ ರಲ್ಲಿ 1.75 ಕೋಟಿ ಭಾರತೀಯರು ವಿದೇಶಗಳಲ್ಲಿ ನೆಲೆಸುವುದರೊಂದಿಗೆ ಭಾರತ ಅತಿ ಹೆಚ್ಚು ಅಂತಾರಾಷ್ಟ್ರೀಯ ವಲಸಿಗರ ಮೂಲ ದೇಶ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಮೆಕ್ಸಿಕೋ ಇದ್ದು 1.20 ಕೋಟಿ ಮೆಕ್ಸಿಕನ್‌ ವಲಸಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ನಂತರದ ಸ್ಥಾನದಲ್ಲಿ ಚೀನ (1.08 ಕೋಟಿ), ರಷ್ಯಾ (1.5 ಕೋಟಿ), ಸಿರಿಯಾ (82 ಲಕ್ಷ), ಬಾಂಗ್ಲಾದೇಶ (78 ಲಕ್ಷ), ಪಾಕಿಸ್ಥಾನ (63 ಲಕ್ಷ ) ಇವೆ.

Advertisement

ಭಾರತದಲ್ಲಿದ್ದಾರೆ 51 ಲಕ್ಷ ವಲಸಿಗರು 
ಭಾರತದಲ್ಲಿ 51.54 ಲಕ್ಷ ಅಂತಾರಾಷ್ಟ್ರೀಯ ವಲಸಿಗರು ಇದ್ದಾರೆ. 1990ರಲ್ಲಿ ಇವರ ಸಂಖ್ಯೆ 76 ಲಕ್ಷದಷ್ಟಿತ್ತು, ಹಲವು ಕಾರಣಗಳಿಂದಾಗಿ ಒಂದೂವರೆ ದಶಕದಿಂದ ಇವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇನ್ನು ಭಾರತದಲ್ಲಿ 2.7 ಲಕ್ಷ ನಿರಾಶ್ರಿತರೂ ಇದ್ದಾರೆ ಎಂದು ಈ ವರದಿ ಹೇಳುತ್ತದೆ. ಇವರ ಪ್ರಮಾಣ ಭಾರತಲ್ಲಿರುವ ವಿದೇಶಿಯರಲ್ಲಿ 4 ಪ್ರತಿಶತದಷ್ಟಿದೆ. ಭಾರತದಲ್ಲಿ ಕ್ರಮವಾಗಿ ಬಾಂಗ್ಲಾದೇಶ, ಪಾಕಿಸ್ಥಾನ, ನೇಪಾಳದ ನಿರಾಶ್ರಿತರ ಪ್ರಮಾಣ ಅಧಿಕವಿದೆ. ಈ ನಿರಾಶ್ರಿತರಲ್ಲಿ ಮಹಿಳೆಯರ ಸಂಖ್ಯೆ 48.8 ಪ್ರತಿಶತದಷ್ಟಿದೆ ಎನ್ನುತ್ತದೆ ಈ ವರದಿ.

ಅಮೆರಿಕದಲ್ಲೇ ಹೆಚ್ಚು ವಿದೇಶಿಗರು
ವಲಸಿಗರಿಂದಲೇ ನಿರ್ಮಾಣವಾದ ರಾಷ್ಟ್ರ ಅಮೆರಿಕದಲ್ಲಿ ಸಹಜವಾಗಿಯೇ ವಲಸಿಗರ ಸಂಖ್ಯೆ ಅಧಿಕವಾಗಿದೆ. ಒಟ್ಟು 5.10 ಕೋಟಿ ವಿವಿಧ ದೇಶಿಯರು ಅಮೆರಿಕದಲ್ಲಿ ಇದ್ದಾರೆ. ತದ ನಂತರದ ಸ್ಥಾನದಲ್ಲಿ ಜರ್ಮನಿ (1.30 ಕೋಟಿ ವಲಸಿಗರು) ಮತ್ತು ಸೌದಿ ಅರೇಬಿಯಾ (1.20 ವಲಸಿಗರು)ಇವೆ.

ಸಾಗರೋತ್ತರ ಭಾರತೀಯರು…
ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಸಾಗರೋತ್ತರ ಭಾರತೀಯರತ್ತ ಹೆಚ್ಚು ಗಮನ ಹರಿಸಿದ್ದಾರೆ. ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮವೂ ಇಂಥ ಪ್ರಯತ್ನಗಳಲ್ಲಿ ಒಂದು. ಗಮನಾರ್ಹ ಸಂಗತಿಯೆಂದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯರನ್ನು ಲಯಬೆಲಿಟಿ ಎಂದು ನೋಡುವ ಬದಲು ಒಂದು ಅಸೆಟ್‌ ಎಂದು ನೋಡಲಾರಂಭಿಸಿರುವುದು. ಕಾಂಗ್ರೆಸ್‌ಗಿಂತ ಬಿಜೆಪಿಯೇ ಮೊದಲಿನಿಂದಲೂ ವಿದೇಶದಲ್ಲಿರುವ ಭಾರತೀಯರ ನಡುವೆ ಸಕ್ರಿಯವಾಗಿ ಇದೆ. ವಾಜಪೇಯಿಯವರು ಸಾಗರೋತ್ತರ ಭಾರತೀಯರ ಸೇವೆಯನ್ನು ಗುರುತಿಸಲು ಪ್ರವಾಸಿ ಭಾರತೀಯ ದಿವಸ್‌ ಆರಂಭಿಸಿದ್ದು ಇದಕ್ಕೊಂದು ಉದಾಹರಣೆ.

ವಲಸಿಗ ಭಾರತೀಯರ ಹಣದ ಹರಿವು
2018ರ ವಿಶ್ವಬ್ಯಾಂಕ್‌ ವರದಿಯ ಪ್ರಕಾರ, ಆ ವರ್ಷವೊಂದರಲ್ಲೇ ಎನ್‌ಆರ್‌ಐಗಳು ತಮ್ಮ ತಾಯ್ನಾಡಿಗೆ 80 ಶತಕೋಟಿ ಡಾಲರ್‌ ಹಣ ಕಳುಹಿಸಿದ್ದಾರೆ (ಹೂಡಿಕೆ ಒಳಗೊಂಡಂತೆ)! ಈ ಒಳಹರಿವು ಜಗತ್ತಿನಲ್ಲೇ ಅತ್ಯಧಿಕ ಎಂದು ಹೇಳಿತ್ತು ಈ ವರದಿ. 2016ರಲ್ಲಿ ಸಾಗರೋತ್ತರ ಭಾರತೀಯರಿಂದಾಗಿ ದೇಶದೆಡೆಗೆ 62.7 ಶತಕೋಟಿ ಡಾಲರ್‌ನಷ್ಟು ಹಣ ವಿವಿಧ ರೂಪದಲ್ಲಿ ಹರಿದುಬಂದಿದ್ದರೆ, 2017ರಲ್ಲಿ ಈ ಮೊತ್ತ 65.3 ಶತಕೋಟಿ ಡಾಲರ್‌ ತಲುಪಿತ್ತು.
“”ಕೆಲ ವರ್ಷಗಳಿಂದ ವಿದೇಶದ ಉದ್ಯಮ ವಲಯದಲ್ಲಿ ಉದ್ಯೋಗ ಕಡಿತ ಪ್ರಮಾಣವು ಹೆಚ್ಚುತ್ತಿದೆ. ಈ ಕಾರಣದಿಂದಾಗಿ, ಭವಿಷ್ಯದ ಅಗತ್ಯಗಳಿಗಾಗಿ ಅನಿವಾಸಿ ಭಾರತೀಯರು ತಮ್ಮ ಖರ್ಚು ಕಡಿಮೆ ಮಾಡಿ, ಹೆಚ್ಚು ಹಣ ಉಳಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ” ಎನ್ನುತ್ತಾರೆ ಹಣಕಾಸು ಸಲಹೆಗಾರ, ಪ್ಲ್ರಾನ್‌ ಅಹೆಡ್‌ ವೆಲ್ತ್‌ ಸಂಸ್ಥೆಯ ಸ್ಥಾಪಕ ವಿಶಾಲ್‌ ಧವನ್‌. ವಿಶಾಲ್‌ ಧವನ್‌ ಅವರಿಗೆ ಅನೇಕ ಅನಿವಾಸಿ ಭಾರತೀಯ ಕ್ಲೈಂಟ್‌ಗಳಿದ್ದಾರೆ. ಇನ್ನು ಹಣದ ಹರಿವಿನ ವಿಚಾರಕ್ಕೆ ಬಂದರೆ, ಸಾಗರೋತ್ತರ ಭಾರತೀಯರ ಹೂಡಿಕೆ ರೀತಿಯಲ್ಲೂ ಇತ್ತೀಚೆಗೆ ಬದಲಾವಣೆ ಕಂಡುಬರುತ್ತಿದೆ.

Advertisement

ಮೊದಲೆಲ್ಲ ಅವರು ತಮ್ಮ ದುಡಿಮೆಯನ್ನು ಭಾರತದ ಎನ್‌ಆರ್‌ಐ ಠೇವಣಿಗಳಲ್ಲಿ, ಮೂಚುವಲ್‌ ಫ‌ಂಡ್‌ಗಳಲ್ಲಿ ಮತ್ತು ರಿಯಲ್‌ ಎಸ್ಟೇಟ್‌ಗಳಲ್ಲಿ ಹೆಚ್ಚಾಗಿ ಹೂಡುತ್ತಿದ್ದರು. “”ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ರಿಯಲ್‌ ಎಸ್ಟೇಟ್‌ ಉದ್ಯಮದ ಕುಂಠಿತ ನಡಿಗೆ ಮತ್ತು ನಿಧಾನಗತಿಯ ಆರ್ಥಿಕತೆಯನ್ನು ನೋಡಿ, ಅವರು ತಮ್ಮ ಹೂಡಿಕೆಯನ್ನು ಸಮಪಾಲು ಮಾಡಿದ್ದಾರೆ. ಅಂದರೆ, ಭಾರತದಲ್ಲಿ ಹೂಡುವಷ್ಟೇ ವಿದೇಶಗಳಲ್ಲೂ ಇನ್ವೆಸ್ಟ್‌ ಮಾಡಲಾರಂಭಿಸಿದ್ದಾರೆ. ಇದರ ಹೊರತಾಗಿಯೂ ತಮ್ಮ ಕೌಟುಂಬಿಕ ಅಗತ್ಯಗಳನ್ನು ಪೂರೈಸಲು ಅವರು ನಿರಂತರವಾಗಿ ಮನೆಗೆ ಹಣ ಕಳುಹಿಸುವುದನ್ನು ನಿಲ್ಲಿಸಿಲ್ಲ ಎನ್ನುತ್ತಾರೆ ಧವನ್‌.

Advertisement

Udayavani is now on Telegram. Click here to join our channel and stay updated with the latest news.

Next