Advertisement

ಮಂಗಳೂರು ರೈಲು ನಿಲ್ದಾಣದಲ್ಲಿ ಹಾರಾಡುತ್ತಿದೆ ಬೃಹತ್‌ ರಾಷ್ಟ್ರಧ್ವಜ

01:39 AM Mar 27, 2021 | Team Udayavani |

ಮಹಾನಗರ : ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬೃಹತ್‌ ಗಾತ್ರದ ರಾಷ್ಟ್ರಧ್ವಜ ದಿನದ 24 ಗಂಟೆಯೂ ಹಾರಾಡುತ್ತಿದೆ. ರಾಷ್ಟ್ರಭಕ್ತಿಯನ್ನು ಉದ್ದೀಪನ ಗೊಳಿಸುವ ಭಾರತೀಯ ರೈಲ್ವೇಯ ಉಪಕ್ರಮದಂತೆ ಈ ಬೃಹತ್‌ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಮುಂಭಾಗದ ವಾಹನ ನಿಲುಗಡೆ ಸಮೀಪ ಅಳವಡಿಸಿರುವ ಸುಮಾರು 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಈ ಬೃಹತ್‌ ರಾಷ್ಟ್ರಧ್ವಜ ಹಾರಾಡುತ್ತಿದ್ದು, 30 ಅಡಿ ಅಗಲ ಹಾಗೂ 20 ಅಡಿ ಎತ್ತರವಿದೆ. ರಾತ್ರಿ ಹೊತ್ತಿನಲ್ಲಿ ರಾಷ್ಟ್ರಧ್ವಜ ಸುಂದರವಾಗಿ ಶೋಭಿಸುವ ನಿಟ್ಟಿನಲ್ಲಿ ಬೆಳಕಿನ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗಿದೆ. ಇದಕ್ಕಾಗಿ ಪೂರಕ ಬೆಳಕಿನ ಉಪಕರಣಗಳನ್ನು ಧ್ವಜಸ್ತಂಭದ ಸುತ್ತ ಅಳವಡಿಸಲಾಗಿದೆ. ದೇಶದ ನಾಗರಿಕರಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಸಚಿವಾಲಯ 2018ರಲ್ಲಿ ದೇಶಾದ್ಯಂತ ಆಯ್ದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬೃಹತ್‌ ರಾಷ್ಟ್ರಧ್ವಜ ಹಾರಿಸುವ ನಿರ್ಧಾರ ಕೈಗೊಂಡಿತ್ತು. ಇದರಂತೆ ಇದೀಗ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲೂ ಬೃಹತ್‌ ರಾಷ್ಟ್ರಧ್ವಜವನ್ನು ಹಾರಿಸ ಲಾಗಿದೆ. ಪಾಲಕ್ಕಾಡ್‌ ರೈಲ್ವೇ ವಿಭಾಗ ದಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಬೃಹತ್‌ ರಾಷ್ಟ್ರಧ್ವಜ ಹಾರಾ ಡುತ್ತಿರುವ ಎರಡನೇ ನಿಲ್ದಾಣವಾಗಿದೆ. ಕೋಝಿಕೋಡ್‌ ರೈಲು ನಿಲ್ದಾಣದಲ್ಲಿ ಈಗಾಗಲೇ ಬೃಹತ್‌ ರಾಷ್ಟ್ರಧ್ವಜ ಹಾರಾಡುತ್ತಿದೆ.

ದಿನದ 24 ಗಂಟೆ ಈ ಧ್ವಜ ಹಾರಾಡಲಿದೆ
100 ಅಡಿ ಎತ್ತರದಲ್ಲಿ 30 ಅಡಿ ಅಗಲ ಹಾಗೂ 20 ಅಡಿ ಎತ್ತರದ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಸಾಮಾನ್ಯವಾಗಿ ರಾಷ್ಟ್ರಧ್ವಜವನ್ನು ಪ್ರತೀ ದಿನ ಬೆಳಗ್ಗೆ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡಬೇಕಿದೆ. ಆದರೆ ನೂತನ ಧ್ವಜಸ್ತಂಭದಲ್ಲಿ ಹಾರಿಸಿರುವ ಬೃಹತ್‌ ರಾಷ್ಟ್ರಧ್ವಜವನ್ನು ಪ್ರತಿದಿನ ಆರೋಹಣ, ಅವರೋಹಣ ಮಾಡಬೇಕಿಲ್ಲ. ಹೀಗಾಗಿ, ದಿನದ 24 ಗಂಟೆಯೂ ಈ ಧ್ವಜ ಹಾರಾಡಲಿದೆ.
-ಎಂ.ಕೆ. ಗೋಪಿನಾಥ್‌, ಸಾರ್ವಜನಿಕ ಸಂಪರ್ಕಾಧಿಕಾರಿ, ಪಾಲಕ್ಕಾಡ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next