Advertisement

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಭಾರೀ ಅವ್ಯವಹಾರ

05:44 PM Nov 28, 2019 | Team Udayavani |

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. 6 ವರ್ಷದಿಂದ ಜಿಲ್ಲೆಯಲ್ಲೇ ಠಿಕಾಣಿ ಹೂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರನ್ನು ಅಮಾನತಿನಲ್ಲಿಟ್ಟು ಸಿಬಿಐ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸೊಗಡು ಎಸ್‌. ಶಿವಣ್ಣ ಒತ್ತಾಯಿಸಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಅಸಮರ್ಪಕ ಅವೈಜ್ಞಾನಿಕ, ಸಾರ್ವಜನಿಕರಿಗೆ ಉಪಯೋಗವಿಲ್ಲದ ಕಾಮಗಾರಿಗಳು ನಡೆಯುತ್ತಿದ್ದು, ಕಳಪೆಯಿಂದ ಕೂಡಿವೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಕಂಟ್ರಾಕ್ಟರ್‌, ಎಂಜಿನಿಯರ್‌ ಆಗಲೀ, ಇಲಾಖಾ ಎಂಜಿನಿಯರ್‌ ಇರುವುದಿಲ್ಲ, ಸ್ಮಾರ್ಟ್‌ಸಿಟಿ ನಿಯಮಾವಳಿ ಅನ್ವಯ ಕಾಮಗಾರಿ ಮೇಲ್ವಿಚಾರಣೆ ನಡೆಯುತ್ತಿಲ್ಲ, ಗಾಂಧಿನಗರ, ಎಸ್‌. ಎಸ್‌.ಪುರಂ, ಸಿದ್ಧಗಂಗಾ ಬಡಾವಣೆ, ಕೆ.ಆರ್‌. ಬಡಾವಣೆ, ಎಂ.ಜಿ. ರಸ್ತೆ, ಶ್ರೀರಾಮ ನಗರ, ಅಗ್ರಹಾರ, ಚಿಕ್ಕಪೇಟೆ, ಸಂತೆಪೇಟೆ, ವಿನಾಯಕ ನಗರ,ಮಂಡಿಪೇಟೆ, ಬಾಳನಕಟ್ಟೆ, ಬಸ್ಟ್ಯಾಂಡ್‌ ಪ್ರದೇಶಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಭ್ರಷ್ಟಾಚಾರದ ಸಾಧ್ಯತೆ: ನಗರದ ಸರ್ಕಾರಿ ಜ್ಯೂನಿಯರ್‌ ಕಾಲೇಜು ಆಟದ ಮೈದಾನದ ಪಾರ್ಕ್‌ ಕೆಲಸ, ವಿಶ್ವವಿದ್ಯಾನಿಲಯ ಪಾರ್ಕ್‌ ಪ್ರದೇಶದ ಕಾಮಗಾರಿ, ಯುಜಿಡಿ ಹಾಗೂ 24×7 ಕುಡಿಯುವ ನೀರು ಸರಬರಾಜು ಯೋಜನೆ, ಬುಗುಡನಹಳ್ಳಿ ಕೆರೆಅಭಿವೃದ್ಧಿ ಸರಿಯಾಗಿ ನಡೆಯುತ್ತಿಲ್ಲ, ಭ್ರಷ್ಟಾಚಾರನಡೆದಿರುವ ಸಾಧ್ಯತೆ ಇದೆ. ಸ್ಮಾರ್ಟ್‌ಸಿಟಿ ಯೋಜನೆ ಉಸ್ತುವಾರಿ ಸಮಿತಿ ಕೇಂದ್ರದ ಮಾರ್ಗಸೂಚಿ ಯನ್ವಯ ರಚಿತವಾಗಬೇಕು. ನಗರದಲ್ಲಿನ ತಾಂತ್ರಿಕ ಕಾಲೇಜಿನ ಕಾಮಗಾರಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು, ಚಾರ್ಟೆಡ್‌ ಅಸೋಸಿಯೇಷನ್‌ ಮುಖ್ಯಸ್ಥರು, ಕಾನೂನು ತಜ್ಞರು, ಸಾಮಾಜಿಕ ಆರ್ಥಿಕ ಪ್ರಜ್ಞೆಯುಳ್ಳವರನ್ನು ಸದಸ್ಯರನ್ನಾಗಿ ಮಾಡಬೇಕು. ಪ್ರತಿ ಕಾಮಗಾರಿಗಳ ಸೋಶಿಯಲ್‌ ಆಡಿಟ್‌ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯುತ್ತಿಲ್ಲ ಎಂದು ಹೇಳಿದರು.

ಮನೆ ಮನೆಗಳಿಗೆ ಗ್ಯಾಸ್‌ ಸಂಪರ್ಕ ನೀಡುವ ಕಾಮಗಾರಿಗಳಲ್ಲಿ ಗುಣಮಟ್ಟದ ಸಾಮಗ್ರಿ ಬಳಸುತ್ತಿಲ್ಲ. ರಸ್ತೆ ಅಗೆಯುವ ಬದಲು ಹಾರಿಜೆಂಟಲ್‌ ಡ್ರಿಲ್ಲಿಂಗ್‌ ಮೂಲಕ ಮಾಡಿದ್ದರೆ ಬಡಾವಣೆಯಲ್ಲಿನ ಚಿಕ್ಕ ರಸ್ತೆಗಳಲ್ಲಿ ಓಡಾಡಲು ತೊಂದರೆಯಾಗುತ್ತಿರಲಿಲ್ಲ. ಬಡಾವಣೆ ಧೂಳುಮಯ ಆಗುತ್ತಿರಲಿಲ್ಲ. ತುಮಕೂರು ನಗರ ಧೂಳುಮಯವಾಗಿದೆ. ಯಾವ ರಸ್ತೆಯಲ್ಲೂ ನಾಗರಿಕರು ಓಡಾಡಲು ಆಗುತ್ತಿಲ್ಲ. ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಜಾಸ್ತಿಯಾಗುತ್ತಿದ್ದಾರೆ. ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ. ನಗರದ ಫ‌ುಟ್‌ಪಾತ್‌ಗಳಲ್ಲಿ ಕೆಲ ಪಾಲಿಕೆ ಸದಸ್ಯರು ಅಂಗಡಿ ಬಾಡಿಗೆ ನೀಡಿದ್ದಾರೆ. ಕೆಲವರು ತಮ್ಮ ಹೆಸರಿಗೆ ಹರಾಜು ಮಾಡಿಕೊಂಡು ಅಧಿಕ ಮೊತ್ತಕ್ಕೆ ಬೇರೆಯ ವರಿಗೆ ಬಾಡಿಗೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಅಮಾನಿಕೆರೆ ಏರಿ ದುರಸ್ತಿ ಕಳಪೆ: ನೀರು ಕೊಳವೆ ಮಾರ್ಗ ಹಾಕುತ್ತಿರುವ ಸ್ಥಳಗಳಲ್ಲಿ ಮುಂಜಾಗ್ರತೆ ಕ್ರಮತೆಗೆದುಕೊಳ್ಳದೆ ಹಳ್ಳ ತೆಗೆದಿದ್ದು, ಮುಂದಾಗುವ ಅವಘಡಗಳಿಗೆ ನಗರಪಾಲಿಕೆ, ನಗರ ನೀರು ಸರಬರಾಜು ಮಂಡಳಿ ಹೊಣೆಗಾರರಾಗಬೇಕಾಗುತ್ತದೆ. ಮಹಾತ್ಮ ಗಾಂಧಿ ಕ್ರೀಡಾಂಗಣ ನವೀಕರಣ ಮಾಡಿ ಹಾಗೆ ಉಳಿಸಬೇಕಾಗಿತ್ತು. ಅಲ್ಲಿ ಮಾಡುತ್ತಿರುವ ಖರ್ಚಿಗೆ ಬೇರೆಡೆ 20 ಎಕರೆ ಜಾಗ ಖರೀದಿಸಿ ಎಲ್ಲಾ ಕ್ರೀಡೆಗಳಿಗೆ ಅವಕಾಶ ಕಲ್ಪಿಸ ಬಹುದಿತ್ತು. ನಗರದ ಅಮಾನಿಕೆರೆ ಏರಿ ದುರಸ್ತಿ ಕಳಪೆ ಯಾಗಿದೆ ಎಂದು ದೂರಿದರು.

Advertisement

100 ಕೋಟಿ ರೂ. ಮೊತ್ತದ ರಿಂಗ್‌ರಸ್ತೆ ಕಾಮಗಾರಿ ಪ್ರದೇಶದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶವಾಗಿದ್ದು,ತೇವಾಂಶ ಭರಿತವಾಗಿರುವುದರಿಂದ ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕಾಗಿದ್ದು, ಅದರಂತೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಬುಗುಡನಹಳ್ಳಿ ಕೆರೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಹೂಳೆತ್ತದೇ ಬಿಲ್‌ ಮಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಬಿಲ್‌ ಸಂದಾಯ ಮಾಡ ಬಾರದು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಎಂ.ಬಿ ನಂದೀಶ್‌, ಕೆ.ಪಿ ಮಹೇಶ್‌, ರಂಗನಾಯಕ, ಜಯಸಿಂಹರಾವ್‌, ನಂಜುಂಡಪ್ಪ, ಆಟೋ ನವೀನ್‌, ಬನಶಂಕರಿ ಬಾಬು, ಚಂದ್ರಪ್ಪ, ಮಧನ್‌ಸಿಂಗ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next