Advertisement

ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಭಾರೀ ಕುಸಿತ

07:06 AM Jul 03, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಕಾರ್ಯಾರಂಭವಾಗಿ ತಿಂಗಳು ಕಳೆದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಮುಗಿಸಿದ್ದಾರೆ.

Advertisement

ಆದರೆ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ವರ್ಷ ಬರೋಬ್ಬರಿ 1,969 ಮಕ್ಕಳು ಕಡಿಮೆಯಾಗಿದ್ದಾರೆ.

2 ಸಾವಿರ ವಿದ್ಯಾರ್ಥಿಗಳು ಕಡಿಮೆ: ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ನೇ ತರಗತಿಗೆ 3,267 ಬಾಲಕರು ಹಾಗೂ 23,788 ಬಾಲಕಿಯರು ಸೇರಿ ಒಟ್ಟು 7,055 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ 2019-20ನೇ ಸಾಲಿನಲ್ಲಿ ಜಿಲ್ಲಾದ್ಯಂತ ಬಾಲಕ, ಬಾಲಕಿಯರು ಸೇರಿ ಒಟ್ಟು 5,086 ಮಂದಿ ಮಾತ್ರವೇ ದಾಖಲಾಗಿದ್ದು, ಒಂದೇ ವರ್ಷದಲ್ಲಿ ಎರಡು ಸಾವಿರ ಸಮೀಪದಷ್ಟು ವಿದ್ಯಾರ್ಥಿಗಳು ಕಡಿಮೆಯಾಗಿರುವುದು ಜಿಲ್ಲೆಯ ಪ್ರಾಥಮಿಕ ಶಾಲೆಗಳ ಅಸ್ತಿತ್ವವನ್ನು ಅಲುಗಾಡಿಸುವಂತೆ ಮಾಡಿದೆ.

ಶಿಕ್ಷಣ ಇಲಾಖೆ ಚಿಂತೆಗೀಡು: ಈಗಾಗಲೇ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಹಾಗೂ ಶಿಕ್ಷಕರ ಕೊರತೆಯಿಂದ ಪ್ರಾಥಮಿಕ ಶಾಲೆಗಳು ಅವಸಾನದ ಅಂಚಿಗೆ ಬಂದು ತಲುಪಿವೆ. ಇದರ ಜೊತೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪೈಪೋಟಿಗೆ ಹಾದಿಬೀದಿಗಳಲ್ಲಿ ತಲೆ ಎತ್ತುತ್ತಿರುವ ಆಂಗ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಪೋಷಕರನ್ನು ತಮ್ಮತ್ತ ಸೆಳೆಯುತ್ತಿರುವ ಪರಿಣಾಮ ಜಿಲ್ಲೆಯ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿರುವುದು ಶಿಕ್ಷಣ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ತಾಲೂಕುವಾರು ಮಾಹಿತಿ
ಬಾಗೇಪಲ್ಲಿ: ಕಳೆದ 2018-19 ನೇ ಸಾಲಿನಲ್ಲಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 495 ಬಾಲಕರು, 597 ಮಂದಿ ಬಾಲಕಿಯರು ಸೇರಿ ಒಟ್ಟು 1,092 ಮಂದಿ ದಾಖಲಾಗಿದ್ದರು. ಆದರೆ ಈ ವರ್ಷಲ್ಲಿ ಬರೀ 635 ಮಕ್ಕಳು ಮಾತ್ರ ದಾಖಲಾಗಿದ್ದಾರೆ.

Advertisement

ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಕಳೆದ ವರ್ಷ 485 ಬಾಲಕರು, 584 ಬಾಲಕಿಯರು ಸೇರಿ ಒಟ್ಟು 1,069 ಮಕ್ಕಳು 1 ನೇ ತರಗತಿಗೆ ದಾಖಲಾಗಿದ್ದರು. ಆದರೆ ಈ ವರ್ಷ ಬಾಲಕ, ಬಾಲಕಿಯರು ಸೇರಿ ಒಟ್ಟು 1,109 ಮಂದಿ ದಾಖಲಾಗಿದ್ದಾರೆ.

ಚಿಂತಾಮಣಿ: ತಾಲೂಕಿನಲ್ಲಿ ಕಳೆದ ವರ್ಷ 603 ಬಾಲಕರು, 731 ಬಾಲಕಿಯರು ಸೇರಿ ಒಟ್ಟು 1,334 ಮಂದಿ ದಾಖಲಾಗಿದ್ದರು. ಈ ವರ್ಷ 1085 ಮಂದಿ ಮಾತ್ರ ದಾಖಲಾಗಿದ್ದಾರೆ.

ಗೌರಿಬಿದನೂರು: ತಾಲೂಕಿನಲ್ಲಿ ಕಳೆದ ವರ್ಷ 899 ಬಾಲಕರು, 975 ಮಂದಿ ಬಾಲಕಿಯರು ಸೇರಿ ಒಟ್ಟು 1,874 ಮಂದಿ ದಾಖಲಾಗಿದ್ದು ಈ ವರ್ಷ 729 ಮಂದಿ ಮಾತ್ರ ದಾಖಲಾಗಿದ್ದಾರೆ.

ಗುಡಿಬಂಡೆ: ತಾಲೂಕಿನಲ್ಲಿ ಕಳೆದ ವರ್ಷ 175 ಬಾಲಕರು, 213 ಮಂದಿ ಬಾಲಕಿಯರು ಸೇರಿ ಒಟ್ಟು 388 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದು, ಈ ವರ್ಷದಲ್ಲಿ ಕೇವಲ 260 ಮಂದಿ ಮಾತ್ರ ದಾಖಲಾಗಿದ್ದಾರೆ.

ಶಿಡ್ಲಘಟ್ಟ: ತಾಲೂಕಿನಲ್ಲಿ ಕಳೆದ ವರ್ಷ 610 ಬಾಲಕರು, 688 ಬಾಲಕಿಯರು ಸೇರಿ ಒಟ್ಟು 1,298 ಮಂದಿ ದಾಖಲಾಗಿದ್ದರು. ಈ ವರ್ಷ 1268 ಮಂದಿ ಮಾತ್ರ ದಾಖಲಾಗಿದ್ದಾರೆ.

10 ಅಂಕಿ ದಾಟದ ಶಾಲೆಗಳು ಸಾಕಷ್ಟು: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಈ ವರ್ಷ ಕೂಡ ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10 ಅಂಕಿ ಕೂಡ ದಾಟದೇ ಇರುವ ಶಾಲೆಗಳು ಸಾಕಷ್ಟಿವೆ.

ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರಿನ ಹಲವು ಗಡಿ ಭಾಗಗಳಲ್ಲಿ ಕೆಲ ಶಾಲೆಗಳಲ್ಲಿ 5 , 6, 10, 15, 20 ಮಕ್ಕಳು ಮಾತ್ರ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಆಂಗ್ಲ ಮಾಧ್ಯಮದ ಭೂತಕ್ಕೆ ಸಿಲುಕಿ ಮಕ್ಕಳ ಸಂಖ್ಯೆ ಕೊರತೆ ಎದುರಿಸಿ ಅಸ್ತಿತ್ವಕ್ಕಕ್ಕಾಗಿ ಹರಸಾಹಸ ಪಡುವಂತಾಗಿದೆ.

ಗಂಭೀರ ಚಿಂತನೆ ನಡೆಸಬೇಕಿದೆ: ಒಟ್ಟಿನಲ್ಲಿ ಮೊದಲೇ ಶಿಕ್ಷಕರ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳು ದಾಖಲುಗೊಳ್ಳದೇ ಕಳೆದ ವರ್ಷಕ್ಕಿಂತ 2000 ಮಕ್ಕಳು ಕಡಿಮೆ ಆಗಿರುವುದು ಶಿಕ್ಷಣ ಇಲಾಖೆ ಮಾತ್ರವಲ್ಲದೇ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಬೇಕಿದೆ.

ಈ ವರ್ಷ ಸರ್ಕಾರ ಜಿಲ್ಲೆಯಲ್ಲಿ 5 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳೆಂದು ಹಾಗೂ 20 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಿದರೂ ಕೂಡ ಗ್ರಾಮೀಣ ಭಾಗದ ಜನ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಪ್ರಾಥಮಿಕ ಶಾಲೆಗಳಿಗೆ ಸೇರಿಸದಿರುವುದು ಎದ್ದು ಕಾಣುತ್ತಿದೆ.

1ನೇ ತರಗತಿಗೆ ದಾಖಲಾದ ಮಕ್ಕಳ ವಿವರ
ತಾಲೂಕು 2018-19 2019-20 ಕೊರತೆ
ಬಾಗೇಪಲ್ಲಿ 1,092 635 – 457
ಚಿಕ್ಕಬಳ್ಳಾಪುರ 1,069 1,109 + 40
ಚಿಂತಾಮಣಿ 1,334 1,085 -249
ಗೌರಿಬಿದನೂರು 1,874 729 -1145
ಗುಡಿಬಂಡೆ 388 260 -128
ಶಿಡ್ಲಘಟ್ಟ 1,298 1,268 -30
ಒಟ್ಟು 7,055 5,086 1,969

ಮಕ್ಕಳ ಸಂಖ್ಯೆ ಕುಸಿತಕ್ಕೆ ದಂಗಾದ ಡಿಡಿಪಿಐ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿದು ಈ ವರ್ಷ 2,000 ದಷ್ಟು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಉದಯವಾಣಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪ್ರತಿಕ್ರಿಯೆ ಕೇಳಿದಾಗ ಅವರೇ ದಂಗಾದರು.

ಇಷ್ಟೊಂದು ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದು ಗಂಭೀರ ವಿಚಾರ. ಖಾಸಗಿ ಶಾಲೆಗಳ ಹೆಚ್ಚಳದಿಂದ ಮಕ್ಕಳ ದಾಖಲಾತಿ ಕಡಿಮೆ ಆಗಿರಬಹುದು ಎಂದು ಒಪ್ಪಿಕೊಂಡರು. ಆದರೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ದಾಖಲಾತಿ ಕುಸಿದಿರುವ ಬಗ್ಗೆ ಇಲಾಖೆ ಚಿಂತನೆ ನಡೆಸಲಿದೆ ಎಂದರು.

ಮಕ್ಕಳ ಸಂಖ್ಯೆ ಕುಸಿತ: ಗೌರಿಬಿದನೂರು, ಬಾಗೇಪಲ್ಲಿ ಮುಂದು; ಬಾಲ್ಯ ವಿವಾಹ ಪ್ರಕರಣ ಸೇರಿದಂತೆ ಹಲವು ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲೂ ಜಿಲ್ಲೆಗೆ ಕೊನೆಯಲ್ಲಿರುವ ಗೌರಿಬಿದನೂರು ತಾಲೂಕು ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿ ಆಗುವ ಮಕ್ಕಳ ಸಂಖ್ಯೆ ಕುಸಿತದಲ್ಲಿ ಮೊದಲ ಸ್ಥಾನ ಇದ್ದು, ಇದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್‌.ಹೆಚ್‌.ಶಿವಶಂಕರರೆಡ್ಡಿ ಪ್ರತಿನಿಧಿಸುವ ಕ್ಷೇತ್ರ ಎನ್ನುವುದು ಗಮನಾರ್ಹ ಸಂಗತಿ.

ಕಳೆದ ವರ್ಷ ಗೌರಿಬಿದನೂರು ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಒಟ್ಟು 1,874 ಮಕ್ಕಳು ದಾಖಲಾಗಿದ್ದು, ಈ ವರ್ಷ ಬರೀ 729 ಮಂದಿ ಮಾತ್ರ ದಾಖಲಾಗಿದ್ದಾರೆ. ಬರೋಬ್ಬರಿ 1,145 ಮಂದಿ ಮಕ್ಕಳ ಹಾಜರಾತಿ ಈ ವರ್ಷ ಕುಸಿದಿದೆ. ಇನ್ನೂ ಎರಡನೇ ಸ್ಥಾನದಲ್ಲಿ ಜಿಲ್ಲೆಯ ಅತಿ ಹಿಂದುಳಿದ ತಾಲೂಕಾದ ಬಾಗೇಪಲ್ಲಿ ಇದೆ. ಕಳೆದ ವರ್ಷ ಈ ತಾಲೂಕಿನಲ್ಲಿ ಒಟ್ಟು 1,092 ಮಂದಿ ದಾಖಲಾಗಿದ್ದರೆ, ಈ ವರ್ಷ ಬರೀ 635 ಮಂದಿ ದಾಖಲಾಗಿ ಒಟ್ಟು 457 ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಎಫೆಕ್ಟ್: 10ಕ್ಕೆ ದಾಖಲೆಯ ದಾಖಲು; 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶ ಉತ್ತಮವಾಗಿ ಬಂದ ಪರಿಣಾಮ 2019-20ನೇ ಸಾಲಿಗೆ ಹತ್ತನೇ ತರಗತಿಗಳಿಗೆ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗಿರುವುದು ತುಸು ಸಮಾಧಾನ ತಂದಿದೆ. ಜಿಲ್ಲೆಯಲ್ಲಿನ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಳೆದ ವರ್ಷ ಒಟ್ಟು 6,943 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು. ಆದರೆ ಈ ವರ್ಷ ಅದರ ಸಂಖ್ಯೆ 10,000 ದಾಟಿದೆ.

ಕಳೆದ ಬಾರಿ 10ನೇ ತರಗತಿಗೆ ಬಾಗೇಪಲ್ಲಿಯಲ್ಲಿ 1,56 ಮಂದಿ ದಾಖಲಾಗಿದ್ದರೆ ಈ ವರ್ಷ 1,657 ದಾಖಲಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಳೆದ ವರ್ಷ 1,012, ಈ ವರ್ಷ 2,281, ಚಿಂತಾಮಣಿಯಲ್ಲಿ ಕಳೆದ ವರ್ಷ 1,405 ಈ ವರ್ಷ 2,473, ಗೌರಿಬಿದನೂರಲ್ಲಿ 1,768, ಈ ವರ್ಷ 1,397, ಗುಡಿಬಂಡೆಯಲ್ಲಿ ಕಳೆದ ವರ್ಷ 631, ಈ ವರ್ಷ 662, ಶಿಡ್ಲಘಟ್ಟದಲ್ಲಿ ಕಳೆದ ವರ್ಷ ಬರೀ 871, ಈ ವರ್ಷ 2,025 ಮಂದಿ ಎಸ್ಸೆಸ್ಸೆಲ್ಸಿ ದಾಖಲಾಗಿದ್ದಾರೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next