Advertisement

ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಬೃಹತ್‌ ಸಮಾವೇಶ  

08:34 PM Feb 04, 2021 | Team Udayavani |

ಹೊಸಪೇಟೆ: ಕುರುಬ ಸಮಾಜ ಎಸ್ಟಿ ಮೀಸಲು ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಫೆ. 7ರಂದು ಕಾಗಿನೆಲೆ ಕನಕ ಗುರುಪೀಠದ ಜ. ಶ್ರೀನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಂಗಳೂರಿನ ನೆಲಮಂಗಲದ ಮೈದಾನದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ ಎಂದು ಕುರುಬ ಸಮಾಜದ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಎ. ರಾಮಲಿಂಗಪ್ಪ, ಸಮಿತಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಅಯ್ನಾಳಿ ತಿಮ್ಮಪ್ಪ ತಿಳಿಸಿದರು.

Advertisement

ನಗರದ ಅಮರಾವತಿ ಅತಿಥಿಗೃಹದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾನಾ  ಭಾಗಗಳಿಂದ 10 ಲಕ್ಷಕ್ಕೂ ಅಧಿ ಕ ಕುರುಬ ಸಮಾಜ ಬಾಂಧವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳ್ಳಾರಿ, ಹೊಸಪೇಟೆ, ಹೂವಿನಹಡಗಲಿ, ಸಂಡೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಬಸ್‌ ಹಾಗೂ ಟ್ರ್ಯಾಕ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಿಂದ 10 ಸಾವಿರ ಜನ ಸಮಾವೇಶಕ್ಕೆ ತೆರಳಲಿದ್ದಾರೆ ಎಂದರು.

ಕುರುಬ ಸಮಾಜದ ಶ್ರೇಯೋಭಿವೃದ್ಧಿಗೆ ಸರಕಾರ ಎಸ್ಟಿ ಮೀಸಲು ಒದಗಿಸಬೇಕು. ಈಗ ವಾಲ್ಮೀಕಿ ಸಮಾಜ ಶೇ. 7.5ರ  ಮೀಸಲಿಗೆ ಆಗ್ರಹಿಸುತ್ತಿದೆ. ಈ ಮೀಸಲು ಒದಗಿಸಿ, ಕುರುಬ ಸಮಾಜ ಹಾಗೂ ಒಬಿಸಿಯಲ್ಲಿರುವ ಇತರೆ ಸಮಾಜಗಳ ಮೀಸಲನ್ನು ಎಸ್ಟಿಯಲ್ಲಿ  ಸೇರಿಸಿ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಬೆಂಬಲ: ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸೋ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲವೂ ಇದೆ. ಸ್ವಾಮೀಜಿಯವರೇ ನೇರ ಸಿದ್ದರಾಮಯ್ಯನವರ ಬಳಿ ಮಾತನಾಡಿದ್ದಾರೆ. ಎಸ್ಟಿ ಮೀಸಲು ದೊರತರೆ ನನಗೆ ಖುಷಿಯಾಗುತ್ತದೆ ಅಂತ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಅವರು ಹೋರಾಟಕ್ಕೆ ಬರದೇ ಇರಬಹುದು. ಅವರ ಬೆಂಬಲ ನಮಗೆ ಇದೆ ಎಂದು ಸ್ಪಷ್ಟಪಡಿಸಿದರು. ಈಗ ಶಾಸಕರು, ಸ್ವಾಮೀಜಿ ಗಟ್ಟಿ ಇದ್ದಾರೆ.ಹೋರಾಟ ಮಾಡೋ ಶಕ್ತಿ ಇದೆ. ಹೀಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ ನಡೆಯುತ್ತಿದೆ ಎಂದರು.

ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮಾ ನಾಯ್ಕ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಸೇರಿದಂತೆ ಕುರುಬ ಸಮಾಜದ ಸಂಘಸಂಸ್ಥೆಗಳು ಹಾಗೂ ದಾನಿಗಳು ಬಸ್‌ ವ್ಯವಸ್ಥೆ ಮಾಡುತ್ತಿದ್ದಾರೆ. ಪಕತೀತ ಹೋರಾಟವಾಗಿದ್ದು, ರಾಣೆಬೆನ್ನೂರಿನಲ್ಲಿ ಬಿಜೆಪಿ ಶಾಸಕ ಅರುಣಕುಮಾರ ಕೂಡ ಬಸ್‌ ವ್ಯವಸ್ಥೆ ಮಾಡಿದ್ದಾರೆ. ಎಲ್ಲ ಕಡೆಯೂ ಬೆಂಬಲ  ವ್ಯಕ್ತವಾಗಿದೆ. ಇದೊಂದು ನೈಜ ಹೋರಾಟವಾಗಿದ್ದು ಸರಕಾರ ಮೀಸಲು ಒದಗಿಸಬೇಕು ಎಂದು ಆಗ್ರಹಿಸಿದರು.

Advertisement

ಇದನ್ನೂ ಓದಿ :ವಾಸವೇ ಇಲ್ಲದವರ ಹೆಸರು ಮತದಾರ ಪಟ್ಟಿಯಲ್ಲೇಕೆ ?

ನಗರಸಭೆ ಮಾಜಿ ಸದಸ್ಯ ಚಿದಾನಂದಪ್ಪ ಮಾತನಾಡಿ, ಸಮಾಜ ತೀರಾ ಹಿಂದುಳಿದಿದೆ. ಇದು ರಾಜಕೀಯ ಹೋರಾಟವಲ್ಲ. ಇದು  ಸಮಾಜದ ಹೋರಾಟವಾಗಿದ್ದು, ಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ ನಡೆಸಲಾಗುತ್ತಿದೆ. ಹೀಗಾಗಿ ಇದಕ್ಕೆ ಮೂರು ಪಕ್ಷಗಳ ನಾಯಕರ ಬೆಂಬಲವೂ ಇದೆ. ಈ ಹೋರಾಟವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸಬೇಕು ಎಂದರು. ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸವನಗೌಡ, ಮುಖಂಡರಾದ ಗೋಪಾಲಕೃಷ್ಣ, ಗಂಟೆ ಸೋಮು, ರಾಮನಗೌಡ, ಎಚ್‌. ಮಹೇಶ್‌, ವೀರೇಶ್‌, ಹನುಮೇಶ್‌, ಈರಣ್ಣ, ಪ್ರಕಾಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next