ಹೊಸದಿಲ್ಲಿ: ಸೌರವ್ಯೂಹದ ಅತೀ ದೊಡ್ಡ ಗ್ರಹ ಗುರು. ಗುರು ಗ್ರಹಕ್ಕಿಂತಲೂ 13 ಪಟ್ಟು ದೊಡ್ಡದಾಗಿರುವ ಮತ್ತು ದಟ್ಟವಾಗಿರುವಂಥ ಸೌರವ್ಯೂಹದಿಂದ ಹೊರಗಿನ ಅನ್ಯಗ್ರಹವೊಂದು ಪತ್ತೆಯಾಗಿದೆ.
ವಿಶೇಷವೆಂದರೆ ಇದನ್ನು ಪತ್ತೆ ಹಚ್ಚಿರುವುದು ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (ಪಿಆರ್‌ಎಲ್)ಯ ಪ್ರೊ| ಅಭಿಜಿತ್ ಚಕ್ರವರ್ತಿ ನೇತೃತ್ವದ ಅಂತಾ ರಾಷ್ಟ್ರೀಯ ವಿಜ್ಞಾನಿಗಳ ತಂಡ.
ಇದು ಭಾರತದಲ್ಲಿ ಮತ್ತು ಪಿಆರ್‌ಎಲ್ ವಿಜ್ಞಾನಿಗಳು ಆವಿಷ್ಕರಿಸಿರುವ ಮೂರನೇ ಸೌರಾತೀತ ಗ್ರಹವಾಗಿದೆ. ಭಾರತ, ಜರ್ಮನಿ, ಸ್ವಿಜರ್ಲೆಂಡ್ ಮತ್ತು ಯುಎಸ್‌ಎ ವಿಜ್ಞಾನಿಗಳು ಜಂಟಿಯಾಗಿ ಸ್ವದೇಶಿ ಪಿಆರ್‌ಎಲ್ ಸುಧಾರಿತ ರೇಡಿಯಲ್ ವೆಲೋಸಿಟಿ ಅಬು-ಸ್ಕೈ ಸರ್ಟ್ ಸ್ಪೆಕ್ಟ್ರೋಗ್ರಾಫ್ (ಪರಸ್) ಬಳಸಿ ಈ ಗ್ರಹದ ದ್ರವ್ಯರಾಶಿಯನ್ನು ಅಳೆದಿದ್ದಾರೆ.
ವಿಶೇಷವೇನು?
ಈ ಸೌರಾತೀತ ಗ್ರಹವು ಟಿಒಐ4603 ಅಥವಾ ಎಚ್‌ಡಿ 245134 ಎಂಬ ನಕ್ಷತ್ರದ ಕಕ್ಷೆಯಲ್ಲಿ ಸುತ್ತುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ಟಿಒಐ 4603ವಿ ಎಂದು ನಾಮಕರಣ ಮಾಡಲಾಗಿದೆ. ಇದು ಭೂಮಿಯಿಂದ 731 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಪ್ರತೀ 7.24 ದಿನಗಳಿಗೆ ಒಮ್ಮೆ ತನ್ನ ನಕ್ಷತ್ರಕ್ಕೆ ಸುತ್ತುಬರುತ್ತಿದೆ. ಪ್ರಖರ ತಾಪಮಾನ ಹೊಂದಿದ್ದು, 1,396 ಡಿ.ಸೆ. ಉಷ್ಣತೆ ಇದೆ.