Advertisement

ಚೀನಾದಲ್ಲಿ ಮಿಂಚಿದ ಹುಬ್ಬಳ್ಳಿ ಯುವತಿ

04:43 PM Jul 14, 2018 | |

ಹುಬ್ಬಳ್ಳಿ: ನಗರದ ಯುವತಿಯೊಬ್ಬರು ಚೀನಾದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಭರತನಾಟ್ಯ ಪ್ರದರ್ಶಿಸಿ ಭೇಷ್‌ ಎನಿಸಿಕೊಂಡಿದ್ದಾರೆ. ಮೂರುಸಾವಿರ ಮಠದ ಮಹಿಳಾ ಕಾಲೇಜಿನ ಬಿಎ ಹಿಂದೂಸ್ಥಾನಿ ಸಂಗೀತ ಅಂತಿಮ ವರ್ಷದ ವಿದ್ಯಾರ್ಥಿನಿ ಸೌಜನ್ಯ ಕುಲಕರ್ಣಿ ಚೀನಾದಲ್ಲಿ ‘ಮಹಿಷಾಸುರ ಮರ್ದಿನಿ’ ಭರತನಾಟ್ಯ ಪ್ರದರ್ಶಿಸಿ ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾರೆ. ಭಾರತದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಶ್ರೇಯಸ್ಸು ಇವರದು. 

Advertisement

ಚೀನಾದಲ್ಲಿ ಜು. 3ರಿಂದ 10ರ ವರೆಗೆ ನಡೆದ ಇಂಟರ್‌ನ್ಯಾಷನಲ್‌ ಯುಥ್‌ ಡೆಲಿಗೇಶನ್‌ ಪ್ರೋಗ್ರಾಮ್‌ನಲ್ಲಿ ಪಾಲ್ಗೊಂಡ ಸೌಜನ್ಯ ಅಲ್ಲಿನ ಬೀಜಿಂಗ್‌, ಕನ್ಮಿಂಗ್‌ ಹಾಗೂ ಗ್ಯಾಂಜ್‌ಜಾನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ಯಾಂಗ್‌ಜಾನ್‌ನ ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀನಾ ಕಲಾವಿದರು ಅಲ್ಲಿನ ಜಾನಪದ ಕಲೆ ಪ್ರದರ್ಶನ ಮಾಡಿದರೆ, ಸೌಜನ್ಯ ನಮ್ಮ ಪ್ರಾಚೀನ ಕಲೆ ಭರತನಾಟ್ಯ ಪ್ರದರ್ಶಿಸಿದರು.

ಭರತನಾಟ್ಯ ಪ್ರದರ್ಶನದ ನಂತರ ಕಲೆ ಹಾಗೂ ಥೀಮ್‌ ಕುರಿತು ಅನುವಾದಕರ ನೆರವಿನಿಂದ ವಿವರಿಸಿದರು. ಕಲಾ ಪ್ರದರ್ಶನದಿಂದಾಗಿ ಜೂಲಿ, ರೇನಾ ಸೇರಿದಂತೆ ಹಲವು ಚೀನಿ ಸ್ನೇಹಿತೆಯರನ್ನೂ ಸಂಪಾದಿಸಿದರು. ಸಂಗೀತವನ್ನೂ ಕಲಿಯುತ್ತಿರುವುದರಿಂದ ಸೌಜನ್ಯ ಅವರಿಗೆ 2 ನಿಮಿಷಗಳ ಕಾಲ ಗಾಯನಕ್ಕೆ ಅವಕಾಶ ಲಭಿಸತ್ತು. ಹಿಂದೂಸ್ಥಾನಿ ಸಂಗೀತವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಚಿತ್ತ ಸೆಳೆದರು.

ಸವಾಲಿನ ಮೆಟ್ಟಿಲು: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗುವುದು ಸುಲಭವಾಗಿರಲಿಲ್ಲ. ಕಾಲೇಜು, ವಿಶ್ವವಿದ್ಯಾಲಯ, ದಕ್ಷಿಣ ವಲಯ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವುದು ದೊಡ್ಡ ಸವಾಲಾಗಿತ್ತು. ಆದರೆ ಆತ್ಮಸ್ಥೈರ್ಯದಿಂದ ಸೌಜನ್ಯ ಅವಕಾಶ ಪಡೆದಿದ್ದರು. ಸೌಜನ್ಯ ಅವರ ತಾಯಿ ರೂಪಾ ಕುಲಕರ್ಣಿ ಅಂಗವಿಕಲರಾಗಿದ್ದು, ರೈಲ್ವೆ ಉದ್ಯೋಗಿಯಾಗಿದ್ದಾರೆ. ಪತಿ ತೀರಿ ಹೋಗಿದ್ದರಿಂದ ಅವರೇ ತಂದೆ ಹಾಗೂ ತಾಯಿಯಾಗಿ ಮಗಳನ್ನು ಬೆಳೆಸುತ್ತಿದ್ದಾರೆ. ಸಾಧನೆ ಮಾಡಲು ಮಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ಬಹುಮುಖ ಪ್ರತಿಭೆ: ನೃತ್ಯಪಟು ಹಾಗೂ ಗಾಯಕಿಯಾಗಿರುವ ಸೌಜನ್ಯ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌) ಕಾರ್ಯಕರ್ತೆಯೂ ಹೌದು. ಜ. 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡ ಅವರು ಜ. 27 ಹಾಗೂ 28ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಎದುರು ಭರತನಾಟ್ಯ ಪ್ರದರ್ಶನ ನೀಡಿ ಶಭಾಷ್‌ ಎನಿಸಿಕೊಂಡಿದ್ದಾರೆ.

Advertisement

ಭರತನಾಟ್ಯ ಕಲಿಯಲು ಚೀನಿಯರ ಆಸಕ್ತಿ
ಚೀನಾದಲ್ಲಿ ಬಾಲಿವುಡ್‌ ಹಾಡುಗಳಿಗಿಂತ ಆಸಕ್ತಿಯಿಂದ ಶಾಸ್ತ್ರೀಯ ಸಂಗೀತ ಆಲಿಸುತ್ತಾರೆ. ಭರತನಾಟ್ಯಕ್ಕೆ ಈ ಮಟ್ಟಿಗೆ ಅಭಿಮಾನಿಗಳಿದ್ದಾರೆ ಎಂಬುದು ಗೊತ್ತಿರಲಿಲ್ಲ. ಪ್ರದರ್ಶನದ ನಂತರ ಅನೇಕರು ಬಂದು ಭರತನಾಟ್ಯದ ಬಗ್ಗೆ ಕೇಳಿ ತಿಳಿದುಕೊಂಡರು. ಕೆಲ ಯುವತಿಯರು ಕಲಿಯಲು ಆಸಕ್ತಿ ತೋರಿಸಿದರು. ಅನುವಾದಕರ ನೆರವಿನಿಂದ ಸಂವಾದ ಸಾಧ್ಯವಾಯಿತು ಎಂದು ಸೌಜನ್ಯ ಕುಲಕರ್ಣಿ ಹೇಳುತ್ತಾರೆ.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಕೇವಲ ಕಲಾ ಪ್ರದರ್ಶನಕ್ಕೆ ಮಾತ್ರವಲ್ಲ, ದೇಶದ ಸಂಸ್ಕೃತಿ, ಸಂಪ್ರದಾಯ, ಆಹಾರ, ವಿಹಾರ, ವೈವಿಧ್ಯತೆ, ವಿಶೇಷತೆ ತಿಳಿದುಕೊಳ್ಳಲು ಪೂರಕವಾಗುತ್ತವೆ. ಕಾಲೇಜಿನ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಹಕಾರ ಹಾಗೂ ತಾಯಿಯ ಪ್ರೋತ್ಸಾಹವೇ ಇದಕ್ಕೆ ಕಾರಣ.
ಸೌಜನ್ಯ ಕುಲಕರ್ಣಿ

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next