Advertisement

ಹುಬ್ಬಳ್ಳಿ: ಮಹಿಳಾ ನಿಲಯದಲ್ಲಿ ಮೊಳಗಿದ ಮಂಗಲ ವಾದ್ಯ

06:00 PM Jun 29, 2023 | Team Udayavani |

ಹುಬ್ಬಳ್ಳಿ: ಮನೆಯವರಿಂದ ದೂರವಾಗಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿಯರಿಬ್ಬರು ವೈವಾಹಿಕ ಜೀವನಕ್ಕೆ
ಕಾಲಿಟ್ಟರು. ನಿಲಯದ ಅಧಿಕಾರಿಗಳು, ರೋಟರಿ ಕ್ಲಬ್‌ನ ಸದಸ್ಯರು ಕುಟುಂಬಸ್ಥರ ಸ್ಥಾನದಲ್ಲಿ ನಿಂತು ವಧುಗಳನ್ನು ಧಾರೆ
ಎರೆದುಕೊಟ್ಟರು.

Advertisement

ಬುಧವಾರ ಇಂತಹ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದು ಇಲ್ಲಿನ ಪತ್ರಕರ್ತರ ನಗರದಲ್ಲಿರುವ ಸರಕಾರಿ ರಾಜ್ಯ ಮಹಿಳಾ ನಿಲಯ. ಇಲ್ಲಿ ಆಶ್ರಯ ಪಡೆದಿದ್ದ ತನು ಹಾಗೂ ಆರತಿ ನವ ಜೀವನಕ್ಕೆ ಕಾಲಿಟ್ಟರು. ಅನಾಥರಾಗಿ ಬೆಳೆದ ಇಬ್ಬರ ಪಾಲಿಗೆ ಮಹಿಳಾ ನಿಲಯ ಹಾಗೂ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿಯ ಸದಸ್ಯರು ಕುಟುಂಬಸ್ಥರ ಸ್ಥಾನದಲ್ಲಿ ನಿಂತು ಮದುವೆ
ಕಾರ್ಯ ನಡೆಸಿಕೊಟ್ಟರು. ಮಹಿಳಾ ನಿಲಯದಲ್ಲಿ ಸಂಭ್ರಮ ಮಾಡಿತ್ತು. ಹಿಂದೂ ಸಮುದಾಯದ ಸಂಪ್ರದಾಯ ಪ್ರಕಾರ
ಸಕಲ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿಸಲಾಯಿತು.

ಬೆಳಗಾವಿಯ ಸುಳೆಬಾವಿಯ ಮಂಜುನಾಥ ಉಪರಿ ಅವರು ತನು ಅವರನ್ನು ವರಿಸಿದರು. ಇನ್ನು ಸವದತ್ತಿಯ ಯಲ್ಲಪ್ಪ ಇಂಚಲ ಅವರು ಆರತಿ ಅವರಿಗೆ ಜೀವನ ನೀಡಿದರು. ಹಿರಿಯರ ಸಮ್ಮುಖದಲ್ಲಿ ಎರಡು ಜೋಡಿಗಳು ಹೊಸ ಬಾಳಿಗೆ ಪಾದಾರ್ಪಣೆ ಮಾಡಿದರು. ಮಂಜುನಾಥ ಉಪರಿ ಅವರು ನೇಕಾರಿಕೆ ಉದ್ಯಮ ಮಾಡುತ್ತಿದ್ದು, ಯಲ್ಲಪ್ಪ ಅವರು ಟ್ಯಾಕ್ಸಿ ಏಜೆನ್ಸಿ ನಡೆಸುತ್ತಿದ್ದಾರೆ.

ಮಹಿಳಾ ನಿಲಯದ ಅಧೀಕ್ಷಕಿ ಶಾರದಾ ನಾಡಗೌಡ ಮಾತನಾಡಿ, 18 ರಿಂದ 85 ವರ್ಷನವರು 60ಕ್ಕೂ ಹೆಚ್ಚು ಮಹಿಳೆಯರು
ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಪುನರ್ವಸತಿ, ಶಿಕ್ಷಣ, ಉದ್ಯೋಗ ಹಾಗೂ ಮದುವೆ ಮಾಡಿಕೊಡಲಾಗುತ್ತದೆ.
ಮದುವೆಯಾದ ಮಹಿಳೆಯರಿಗೆ ಸರ್ಕಾರದಿಂದ 20 ಸಾವಿರ ಪ್ರೋತ್ಸಾಹ ಧನ ಬರುತ್ತದೆ. ಅದನ್ನು ಬ್ಯಾಂಕ್‌ನಲ್ಲಿ ಯುವತಿ ಹಾಗೂ ನಿಲಯದ ಅಧೀಕ್ಷಕರ ಹೆಸರಿನಲ್ಲಿ ಎಫ್‌ಡಿ ಇಡಲಾಗುವುದು. ಮೂರು ವರ್ಷದ ಬಳಿಕ ಆ ಹಣವನ್ನು ಯುವತಿಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಅಧ್ಯಕ್ಷ ಜಿತೇಶ ಪಾಂಚಾಲ ಮಾತನಾಡಿ, ಸರಕಾರಿ ರಾಜ್ಯ ಮಹಿಳಾ ನಿಲಯಕ್ಕೆ ಅಗತ್ಯ ವಸ್ತುಗಳನ್ನು ನೀಡುವ ಉದ್ದೇಶವಿತ್ತು. ಈ ಕಾರಣಕ್ಕಾಗಿ ನಿಲಯಕ್ಕೆ ಆಗಮಿಸಿ ಸಂದರ್ಭದಲ್ಲಿ ಇಲ್ಲಿನ ಮದುವೆ ಇರುವುದು
ಗೊತ್ತಾಗಿತ್ತು. ಹೀಗಾಗಿ ಕ್ಲಬ್‌ ವತಿಯಿಂದ ಮದುವೆಗೆ ಬೇಕಾದ ಅಲ್ಪ ನೆರವು ಮಾಡಿದ್ದೇವೆ. ಎರಡೂ ಜೋಡಿಯ ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಮ್ಮ ಪುಣ್ಯ ಎಂದರು. ವಿವಾಹ ಸಮಾರಂಭದಲ್ಲಿ ರೋಟರಿ ಕ್ಲಬ್‌ ಸಂವಹನ ಸೇವಾ ನಿರ್ದೇಶಕ ರಿಯಾಜ್‌ ಬಸರಿ, ಕ್ಲಬ್‌ ನಿರ್ದೇಶಕ ಹೇಮಾಲ ಶಾ, ಕಾರ್ಯದರ್ಶಿ ಡಿ. ಮೋಹಿತ, ಉದ್ಯಮಿ ಎಂ.ವಿ. ಕರಮರಿ
ಸೇರಿದಂತೆ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next