Advertisement

ಹುಬ್ಬಳ್ಳಿ-ವಾರಾಣಸಿ, ಹುಬ್ಬಳ್ಳಿ-ಮೈಸೂರು ರೈಲುಗಳಿಗೆ ಚಾಲನೆ

04:41 PM May 24, 2017 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ವಾರಾಣಸಿ ಹಾಗೂ ಹುಬ್ಬಳ್ಳಿ-ಮೈಸೂರು ನೂತನ ರೈಲುಗಳ ಸಂಚಾರಕ್ಕೆ ರೈಲ್ವೆ ಸಚಿವ ಸುರೇಶ ಪ್ರಭು ಅವರು ಹೊಸದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರೆ, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಂಸದ ಪ್ರಹ್ಲಾದ ಜೋಶಿ ಹಾಗೂ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿದರು. 

Advertisement

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ರೈಲ್ವೆ ಸಚಿವ ಸುರೇಶ ಪ್ರಭು, ಹುಬ್ಬಳ್ಳಿ-ಮೈಸೂರು ನಡುವಿನ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಹಾಗೂ ಹುಬ್ಬಳ್ಳಿ-ವಾರಾಣಸಿ ರೈಲು ಸಂಪರ್ಕ, ಪ್ರವಾಸೋದ್ಯಮ ದೃಷ್ಟಿಯಿಂದ ಮಹತ್ವ ಪಡೆದಿವೆ ಎಂದರು. ಹುಬ್ಬಳ್ಳಿ ವಾಣಿಜ್ಯ ದೃಷ್ಟಿಯಿಂದ ಮಹತ್ವದ ಕೇಂದ್ರವಾಗಿದ್ದು, ಅಲ್ಲಿಂದ ಎರಡು ನೂತನ ರೈಲುಗಳ ಸಂಚಾರ ವ್ಯಾಪಾರ, ವಹಿವಾಟು ದೃಷ್ಟಿಯಿಂದ ಪ್ರಯೋಜನಕಾರಿ ಆಗಲಿದೆ. 

ಆದಷ್ಟು ಶೀಘ್ರ ತಾವು ಹುಬ್ಬಳ್ಳಿಗೆ ಭೇಟಿ ನೀಡುವುದಾಗಿ ಹೇಳಿದ ಸಚಿವರು, ಧಾರವಾಡ ಹಾಗೂ ಮೈಸೂರಿನ ಸಾಂಸ್ಕೃತಿಕ ಸೊಬಗಿನ ಮಹತ್ವವನ್ನು ಸ್ಮರಿಸಿ ಜೈ ಕರ್ನಾಟಕ ಎಂದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಒಂದೇ ನಿಲ್ದಾಣದಲ್ಲಿ ಎರಡು ರೈಲುಗಳು ಏಕಕಾಲಕ್ಕೆ ಉದ್ಘಾಟನೆಗೊಳ್ಳುತ್ತಿರುವುದು ಅಪರೂಪ ಹಾಗೂ ಹುಬ್ಬಳ್ಳಿಗೆ ಇದು ಮೊದಲ ಕಾರ್ಯಕ್ರಮ ಎಂದರು. 

ಹುಬ್ಬಳ್ಳಿ-ವಾರಾಣಸಿ ರೈಲು ಸಂಚಾರ ಬಹು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಅದು ಈಡೇರಿದೆ. ಕಳೆದ 20 ವರ್ಷಗಳಲ್ಲಿ ರಾಜ್ಯಕ್ಕೆ ರೈಲ್ವೆ ಅನುದಾನ ಹೋಲಿಸಿದರೆ ಸುಮಾರು 4-5ಪಟ್ಟು ಹೆಚ್ಚು ಬಂದಿದ್ದು, ಸರಿಸುಮಾರು 5 ಸಾವಿರ ಕೋಟಿ ರೂ.ನಷ್ಟು ಅನುದಾನ ರಾಜ್ಯಕ್ಕೆ ಬಂದಿದೆ ಎಂದರು. 

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿಯಲ್ಲಿ ಪ್ಲಾಟ್‌ಫಾರಂಗಳ ಸಂಖ್ಯೆ ಹೆಚ್ಚಬೇಕಿದೆ. ರೈಲ್ವೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ರಾಜ್ಯಕ್ಕೆ ಹೆಚ್ಚಿನ ರೈಲ್ವೆ ಸೌಲಭ್ಯ ದೊರೆತಿವೆ. ವಿಜಯಪುರ-ಮಂಗಳೂರು ನಡುವೆ ರೈಲ್ವೆ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದರು. 

Advertisement

ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಪ್ರಾಸ್ತಾವಿಕ ಮಾತನಾಡಿ, ಪ್ರತಿ ಶುಕ್ರವಾರ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ- ವಾರಾಣಸಿ ರೈಲು ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸುಮಾರು 350 ಕಿ.ಮೀ.ದೂರ ಸಂಚರಿಸಲಿದೆ. ಅದೇ ರೀತಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೂಂದು ರೈಲು ಸೌಲಭ್ಯ ಆರಂಭ ಪ್ರವಾಸಿಗರಿಗೆ ಹೆಚ್ಚು ಸವಲತ್ತು ಸಿಕ್ಕಂತಾಗಿದೆ ಎಂದರು. 

ಮಹಾಪೌರ ಡಿ.ಕೆ.ಚವ್ಹಾಣ ಮಾತನಾಡಿ, ಹುಬ್ಬಳ್ಳಿ-ಮಂಗಳೂರು ನಡುವೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರು, ಉಪಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ, ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಎ.ಕೆ.ಜೈನ್‌, ಡಿಸಿಪಿ ಜಿನೇಂದ್ರ ಖಣಗಾವಿ ಇನ್ನಿತರರು ಇದ್ದರು.

ನಿಗದಿಯಂತೆ ರೈಲ್ವೆ ಸಚಿವ ಸುರೇಶ ಪ್ರಭು ಅವರು ಮಧ್ಯಾಹ್ನ 3:00 ಗಂಟೆಗೆ ವಿಡಿಯೋ ಮೂಲಕ ಎರಡು ನೂತನ ರೈಲುಗಳಿಗೆ ಚಾಲನೆನೀಡಬೇಕಿತ್ತು. ನಂತರ ಅದನ್ನು 3:45ಗಂಟೆಗೆ ಮುಂದೂಡಿದ್ದಾಗಿ ಹೇಳಲಾಯಿತು. 4:30ಗಂಟೆ ಸುಮಾರಿಗೆ ಸಚಿವರು ಎರಡೂ ರೈಲುಗಳಿಗೆ ಚಾಲನೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next