Advertisement

ಹುಬ್ಬಳ್ಳಿ: ಸಚಿವರೆದುರು ನೇಕಾರರ ಸಮಸ್ಯೆಗಳ ಅನಾವರಣ

05:46 PM Jul 03, 2023 | Team Udayavani |

ಹುಬ್ಬಳ್ಳಿ: ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೇಕಾರರು ಸಮಸ್ಯೆಗಳ ಸುರಿಮಳೆಗೈದರು. ಕೈ ಮಗ್ಗ ನೇಕಾರರಿಗೆ ಇಲಾಖೆಯ ಅಧಿಕಾರಿಗಳಿಂದ ಸಹಕಾರವಿಲ್ಲ. ನೇಕಾರರ ಹೆಸರಲ್ಲಿ ನಕಲಿಗಳು ಯೋಜನೆ ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುವ ದೂರುಗಳು ವ್ಯಕ್ತವಾದವು.

Advertisement

ರವಿವಾರ ವಿದ್ಯಾನಗರದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಭಾಗದ ನೇಕಾರರ ಸಮಸ್ಯೆ ಹಾಗೂ ವಾಸ್ತವ ಅರಿಯಲು ಸಚಿವ ಶಿವಾನಂದ ಪಾಟೀಲ ಅವರು ಸಭೆ ಆಹ್ವಾನಿಸಿದ್ದರು. ಈ ಭಾಗದ ಜಿಲ್ಲೆಗಳಿಂದ ಆಗಮಿಸಿದ್ದ ನೇಕಾರರ ಮುಖಂಡರು, ಸಂಸ್ಥೆಗಳು ಪ್ರಮುಖರಿಗೆ ತಮ್ಮ ಸಮಸ್ಯೆ, ಬೇಡಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಸಭೆಯುದ್ದಕ್ಕೂ ನೇಕಾರರು ಅನುಭವಿಸುತ್ತಿರುವ ಸಮಸ್ಯೆಗಳು, ಅರ್ಹ ನೇಕಾರಿಗೆ ಎಟುಕದ ಸರಕಾರಿ ಯೋಜನೆ, ಸೌಲಭ್ಯಗಳ ಬಗ್ಗೆ ಪ್ರಸ್ತಾಪ ಮಾಡಿದರು.

ಪ್ರತಿಯೊಂದು ಸಮಸ್ಯೆಯ ಕುರಿತು ಸಚಿವರು ಸ್ಥಳದಲ್ಲಿಯೇ ಇಲಾಖೆ ಅಧಿಕಾರಿಗಳಿಂದ ಉತ್ತರ, ಸಮಜಾಯಿಷಿ, ಪರಿಹಾರ, ಭರವಸೆ ನೀಡುವ ಕೆಲಸ ಮಾಡಿದರು. ಆದರೆ ಕೆಲ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ದೊರೆಯಿತು. ಇನ್ನೂ ಕೆಲವೊಂದು ವಿಷಯಗಳಲ್ಲಿ ಅಧಿಕಾರಿಗಳ, ಇಲಾಖೆ ವೈಫಲ್ಯ ಕಂಡುಬಂದ ಕಡೆ ಅಧಿಕಾರಿಗಳಿಗೆ ಎಚ್ಚರಿಕೆ ಹಾಗೂ ಸೂಚನೆ ನೀಡುವ ಕೆಲಸ ಸಚಿವರಿಂದ ನಡೆಯಿತು.

10 ಲಕ್ಷ ರೂ. ಪರಿಹಾರ ನೀಡಿ: ಬೆಳಗಾವಿಯ ನೇಕಾರರ ಪ್ರಮುಖರಾದ ಶಿವಲಿಂಗ ಟರ್ಕಿ ಮಾತನಾಡಿ, ನೇಕಾರರಿಗೆ ಕಾರ್ಮಿಕ ಇಲಾಖೆಯಲ್ಲಿರುವಂತೆ ಕಟ್ಟಡ
ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವ ಮಾದರಿಯಲ್ಲಿ ನೀಡಬೇಕು. ನೇಕಾರರ ಸಮಗ್ರ ಅಭಿವೃದ್ಧಿಗೆ 1500 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಬೇಕು. 20 ಎಚ್‌ಪಿ ವರೆಗೂ ಉಚಿತ ವಿದ್ಯುತ್‌ ಕಲ್ಪಿಸಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. 42 ಕುಟುಂಬಗಳ ಪೈಕಿ 25 ಕುಟುಂಬಗಳಿಗೆ 5 ಲಕ್ಷ ರೂ. ನೀಡಲಾಗಿದೆ. ರಾಜ್ಯದಲ್ಲಿ ನೇಕಾರರ ವೃತ್ತಿ, ಬದುಕು ಸರಿಯಿಲ್ಲದ ಕಾರಣದಿಂದಾಗಿ ರಾಜ್ಯದಲ್ಲಿರುವ ಜವಳಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ.ಆದರೆ ಅಕ್ಕಪಕ್ಕದ ರಾಜ್ಯದಲ್ಲಿ ಈ ವಿಷಯಕ್ಕೆ ಸಾಕಷ್ಟು ಬೇಡಿಕೆಯಿದೆ. ನೇಕಾರರ ಬದುಕು ಉತ್ತಮಗೊಂಡರೆ ಮಾತ್ರ ಈ ಕಾಲೇಜುಗಳಿಗೆ ಬೇಡಿಕೆ ಬರಲಿದೆ ಎಂದರು.

ಜವಳಿ ಅಭಿವೃದ್ಧಿ ಇಲಾಖೆ ಆಯುಕ್ತ ಕುಮಾರ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ಜಂಟಿ ನಿರ್ದೇಶಕ ಬಿ.ಆರ್‌. ಯೋಗೀಶ, ಸಿಬ್ಬಂದಿ ಹಾಗೂ ಆಡಳಿತ ವ್ಯವಸ್ಥಾಪಕ ರವಿ ಹೂಲಗಿ, ಹತ್ತಿ ಉತ್ಪಾದನೆ ವ್ಯವಸ್ಥಾಪಕ ಎ.ಐ. ಸಣಕಲ್ಲ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೇಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನೇಕಾರರು ಪಾಲ್ಗೊಂಡಿದ್ದರು.

Advertisement

ಸಮಗ್ರ ತನಿಖೆಗೆ ಆದೇಶಿಸಿ
ಶಿಗ್ಲಿಯ ವಿರೂಪಾಕ್ಷಪ್ಪ ಶಿರಹಟ್ಟಿ ಮಾತನಾಡಿ, ಕೆಲ ನಕಲಿಗಳು ನೇಕಾರರ ವೃತ್ತಿಯನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ಇಲಾಖೆ ಅಧಿಕಾರಿಗಳು ಬೆಂಬಲ ಹಾಗೂ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ತಲತಲಾಂತರದಿಂದ ನೇಕಾರಿಕೆ
ಮಾಡಿಕೊಂಡು ಬಂದವರಿಗೆ ಸರಕಾರಿ ಯೋಜನೆಗಳು ದೊರೆಯದಂತಾಗಿದೆ. ಶೇ.50 ಹಾಗೂ ಶೇ.90ರ ಸಬ್ಸಿಡಿ ಯೋಜನೆ ಕುರಿತು ಸಚಿವರು ಸಮಗ್ರ ತನಿಖೆ ಆದೇಶಿಸಿದರೆ ಅಧಿಕಾರಿಗಳು ಹಾಗೂ ನಕಲಿ ನೇಕಾರರು ಮಾಡಿರುವ ಹಗರಣಗಳು ಬಯಲಿಗೆ ಬರಲಿವೆ. ನೇಕಾರರ ಸಮೀಕ್ಷೆಯಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡರೆ ಮಾತ್ರ ಯಶಸ್ವಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next