ಬೆಂಗಳೂರು/ಹುಬ್ಬಳ್ಳಿ/ಮಂಗಳೂರು: ಚೀನಾದಲ್ಲಿ ಟೆಕ್ಕಿಯಾಗಿದ್ದು, ಇತ್ತೀಚೆಗಷ್ಟೇ ಮರಳಿದ್ದ ಹುಬ್ಬಳ್ಳಿಯ ನಿವಾಸಿಯೊಬ್ಬರಿಗೆ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿತ್ತಾದರೂ, ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಇಲ್ಲಿನ ಕೇಶ್ವಾಪುರ ನಿವಾಸಿ ಸಂದೀಪ ಕೆಳಸಂಗದ ಅವರು ಜ್ವರ-ಕಫದಿಂದ ಬಳಲಿ ಕಿಮ್ಸ್ ಗೆ ದಾಖಲಾಗಿದ್ದರು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಇವರು ಚೀನಾದಲ್ಲಿ ಕೆಲಸ ಮಾಡುತ್ತಿದ್ದರು.
ಜ.18ರಂದು ಚೀನಾದಿಂದ ಮುಂಬೈಗೆ ಆಗಮಿಸಿ ನಂತರ ಹುಬ್ಬಳ್ಳಿಗೆ ಬಂದಿದ್ದರು. ತೀವ್ರ ಜ್ವರ ಮತ್ತು ಕಫದಿಂದ ಬಳಲಿ ಭಾನುವಾರ ಸಂಜೆ ಕಿಮ್ಸ್‌ಗೆ ದಾಖಲಾಗಿದ್ದರು. ಇವರ ರಕ್ತದ ಮಾದರಿ ಸಂಗ್ರಹಿಸಿ, ತಪಾಸಣೆಗಾಗಿ ಬೆಂಗಳೂರಿನ ವೈರಾಲಜಿ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ನೆಗೆಟಿವ್ ಎಂದು ಕಂಡು ಬಂದಿದೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|ಅರುಣಕುಮಾರ ಸಿ.ತಿಳಿಸಿದ್ದಾರೆ.
9,296 ಮಂದಿಯ ತಪಾಸಣೆ: ಈವರೆಗೆ, ಚೀನಾ ಸೇರಿದಂತೆ ಸೋಂಕು ಹೆಚ್ಚಿರುವ ದೇಶಗಳಿಂದ ಬಂದಿರುವ ಪ್ರಯಾಣಿಕರ ಪೈಕಿ 81 ಮಂದಿಯನ್ನು ಗುರುತಿಸಲಾಗಿದ್ದು, ಆ ಪೈಕಿ 69 ಮಂದಿಯನ್ನು ಶಂಕಿತರು ಎಂದು ನಿರ್ಧರಿಸಿ ರಕ್ತ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 44 ಮಂದಿಯ ರಕ್ತ ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಬಾಕಿ ಉಳಿದವರ ವರದಿ ಬರಬೇಕಿದೆ. ಸದ್ಯ 58 ಮಂದಿಯ ಬಗ್ಗೆ ಮನೆಯಲ್ಲಿಯೇ ನಿಗಾ ವಹಿಸಲಾಗಿದೆ.
ಉಳಿದಂತೆ, ನಾಲ್ವರು ವಿದೇಶಿಗರು ಚೀನಾಕ್ಕೆ ಮರಳಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಇಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾ ಹಾಗೂ ಸೋಂಕು ಹೆಚ್ಚಿರುವ ದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದ್ದು, ಜ.21ರಿಂದ ಇಲ್ಲಿಯವರೆಗೂ 9,296 ಮಂದಿ ತಪಾಸಣೆಗೆ ಒಳಗಾಗಿದ್ದಾರೆ.
ಆರೋಗ್ಯ ಇಲಾಖೆಯ 104 ಸಹಾಯವಾಣಿ ಯಲ್ಲಿ ಕೊರೊನಾ ಮಾಹಿತಿ ಲಭ್ಯವಿದೆ. ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಮೂರಾಗಿದ್ದು, ಆ ರಾಜ್ಯಕ್ಕೆ ಹೊಂದಿಕೊಂಡಿ ರುವ ಕರ್ನಾ ಟಕದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.