Advertisement

ಹಿರಿಯ ರಂಗಕರ್ಮಿಗಳಿಗೆ ರಂಗಸೌರಭ ಗರಿ

03:56 PM Apr 01, 2019 | Naveen |

ಹುಬ್ಬಳ್ಳಿ: ಸುನಿಧಿ ಕಲಾಸೌರಭದ ವತಿಯಿಂದ ಮೂವರು ಹಿರಿಯ ಕಲಾವಿದರಿಗೆ ರಂಗಸೌರಭ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿ ನಟಿ ಪುಷ್ಪಲತಾ ಅಣ್ಣಿಗೇರಿ, ನಾಟಕಕಾರ ಡಾ| ನಿಂಗು ಸೊಲಗಿ ಹಾಗೂ ಪ್ರಸಾಧನ ಕಲಾವಿದ ಕೊಂಡಯ್ಯ ವೆಂಕಟಾಪುರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ| ಗೋವಿಂದ ಮಣ್ಣೂರ ಮಾತನಾಡಿ, ರಂಗಭೂಮಿಯನ್ನು ಪ್ರೋತ್ಸಾಹಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲಾ ಮಂದಿರಗಳನ್ನು ವರ್ಷಕ್ಕೆ ಕನಿಷ್ಠ 25 ನಾಟಕಗಳಿಗೆ ಉಚಿತವಾಗಿ ನೀಡಬೇಕು ಎಂದರು. ವೃತ್ತಿ ರಂಗಭೂಮಿ ಬಡವಾಗುತ್ತಿದೆ. ಕಂಪನಿ ನಾಟಕಗಳು ಪ್ರೇಕ್ಷಕರ ಕೊರತೆ ಎದುರಿಸುತ್ತಿವೆ. ನಾಟಕಗಳ ವೀಕ್ಷಣೆ ಹೆಚ್ಚಾದರೆ ಬಡ ಕಲಾವಿದರು ಬದುಕಲು ಸಾಧ್ಯವಾಗುತ್ತದೆ. ಒಂದು ನಾಟಕ ಪ್ರದರ್ಶನ ಮಾಡಲು ಸುಮಾರು 1 ಲಕ್ಷ ರೂ. ಬೇಕು. ಪ್ರೇಕ್ಷಕರು ಕಲೆಗೆ ಪ್ರೋತ್ಸಾಹಿಸುವುದು ಅಗತ್ಯ ಎಂದು ತಿಳಿಸಿದರು.

ರಂಗಭೂಮಿಯನ್ನು ಸಕ್ರಿಯವಾಗಿಡಬೇಕೆಂಬ ಉದ್ದೇಶದಿಂದ 1962ರಿಂದ ವಿಶ್ವ ರಂಗಭೂಮಿ ದಿನಾಚರಣೆ ಮಾಡಲಾಗುತ್ತಿದೆ. ವೃತ್ತಿ ರಂಗಭೂಮಿಯಲ್ಲಿ ಮಿಂಚಿದ ಕಲಾವಿದರನ್ನು ಗುರುತಿಸಿ ಗೌರವಿಸುವುದು ಅವಶ್ಯಕ ಎಂದು ಹೇಳಿದರು. ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ| ಎಂ.ಜಿ. ಹಿರೇಮಠ, ಶಶಾಂಕ ಏಕಬೋಟೆ, ದೇವೇಂದ್ರಪ್ಪ ಮಾಳಗಿ ಇದ್ದರು. ಪದ್ಮಪ್ರಿಯಾ ಚಿಲ್ಲಾಳ ಪ್ರಾರ್ಥಿಸಿದರು. ವೀಣಾ ಆಠವಲೆ ನಿರೂಪಿಸಿದರು. ಮೋಹನ ಏಕಬೋಟೆ ಅವರ ಸ್ಮರಣಾರ್ಥ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next