Advertisement

ಮಂಗಳೂರಲ್ಲಿ ಹುಬ್ಬಳ್ಳಿ ಸ್ಪೆಷಲ್‌ ರೊಟ್ಟಿ ಖಾನಾವಳಿ

10:39 PM Aug 18, 2019 | Sriram |

ಮಂಗಳೂರಿನ ಬಹುತೇಕ ಹೋಟೆಲ್‌ಗ‌ಳಲ್ಲಿ ಅಕ್ಕಿ ರೊಟ್ಟಿ, ಬನ್ಸ್‌, ಗೋಳಿಬಜಿ, ಪಡ್ಡು, ಹಾಲು ಬಾಯಿ, ಕೊಟ್ಟೆ ಕಡುಬು, ಇಡ್ಲಿ, ಶಿರಾ, ಉಪ್ಪಿಟ್ಟು … ಹೀಗೆ ಕೆಲವು ತಿಂಡಿಗಳು ಕಾಮನ್‌ ಆಗಿ ಸಿಗುತ್ತವೆ. ಆದರೆ, ಮುದ್ದೆ, ಜೋಳದ ರೊಟ್ಟಿ ಹೋಟೆಲ್‌ಗ‌ಳು ಬಹಳ ಕಡಿಮೆ. ಉತ್ತರ ಕರ್ನಾಟಕ, ಹಳೇಮೈಸೂರು ಭಾಗದ ಜನ ಮಂಗಳೂರಿಗೆ ಬಂದು ಮುದ್ದೆ, ಜೋಳದ ರೊಟ್ಟಿ ಊಟ ಎಲ್ಲಿ ಸಿಗುತ್ತೆ ಅಂತ ಕೇಳಿದ್ರೆ, ಆ ಬಗೆಯ ಊಟ, ತಿಂಡಿ ಸಿಗುವುದು ಸ್ವಲ್ಪ ಕಡಿಮೆ. ಅಂತಹವರಿಗಾಗಿಯೇ ಮಂಗಳೂರಿನ ದೇರಳಕಟ್ಟೆಯಲ್ಲಿ ಸಿದ್ಧರೂಡ ರೊಟ್ಟಿ ಖಾನಾವಳಿ ಇದೆ. ಇಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ಊಟ ವಿಶೇಷ.

Advertisement

ಮೂಲತಃ ಹುಬ್ಬಳ್ಳಿಯ ಸಮೀಪದ ಹಿರೆಹೊನ್ನೇಹಳ್ಳಿ ಗ್ರಾಮದ ಪ್ರಭುಲಿಂಗ ಹಾಗೂ ಈರಮ್ಮ ಈ ಖಾನಾವಳಿಯ ಮಾಲೀಕರು. ಹುಬ್ಬಳ್ಳಿಯ ಉಪ್ಪಿನಕಾಯಿ ಫ್ಯಾಕ್ಟರಿ ನೌಕರರಿಗೆ ಇದ್ದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗ ಮಂಗಳೂರಿನಲ್ಲಿರುವ ತಮ್ಮದೇ ಊರಿನ ಬಸಪ್ಪ ಅವರ ಆಶೀರ್ವಾದ್‌ ರೊಟ್ಟಿ ಮನೆಗೆ ಕೆಲಸಕ್ಕೆ ಸೇರಿಕೊಂಡರು.

ಸ್ವಲ್ಪ ದಿನಗಳ ಬಸಪ್ಪನವರು ಹೋಟೆಲ್‌ ನಡೆಸಲಾಗದೇ ಮುಚ್ಚಿದರು. ಆದರೆ, ಈ ಹೋಟೆಲ್‌ನ ರುಚಿ ಕಂಡಿದ್ದ ಕೆ.ಎಸ್‌.ಹೆಗ್ಡೆ ಹಾಗೂ ಎನಪೋಯ್‌ ಆಸ್ಪತ್ರೆಯ ವೈದ್ಯರು, ರೋಗಿಗಳು, ಉತ್ತರ ಕರ್ನಾಟಕ, ಇತರೆ ಜಿಲ್ಲೆಗಳ ಜನರು, ನೀವೇ ಚೆನ್ನಾಗಿ ಅಡುಗೆ ಮಾಡುತ್ತೀರಿ, ಹೋಟೆಲ್‌ ಮುಂದುವರಿಸಿಕೊಂಡು ಹೋಗಿ ಎಂದು ಹೇಳಿದ್ದರಿಂದ, ಮತ್ತೆ ಸಿದ್ಧರೂಡ ರೊಟ್ಟಿ ಖಾನಾವಳಿ ಎಂದು ಹೆಸರಿಟ್ಟು ಮುಂದುವರಿಸಿದ್ದಾರೆ. ಮೊದಲಿಗೆ ಗಂಡ, ಹೆಂಡತಿ ಇಬ್ಬರೇ ಖಾನಾವಳಿ ನೋಡಿಕೊಳ್ಳುತ್ತಿದ್ದರು. ನಂತರ ಗ್ರಾಹಕರ ಸಂಖ್ಯೆ ಜಾಸ್ತಿಯಾದ ಕಾರಣ ಜೊತೆಗೆ ಮಗಳು, ಮಗ, ತಮ್ಮನನ್ನು ಸೇರಿಸಿಕೊಂಡಿದ್ದಾರೆ.

ರಾಗಿ ಮುದ್ದೆ, ಜೋಳದ ರೊಟ್ಟಿ ವಿಶೇಷ:
ಇಲ್ಲಿನ ಕೆ.ಎಸ್‌. ಹೆಗ್ಡೆ, ಎನಾಪೋಯ್‌ ಆಸ್ಪತ್ರೆಗಳಿಗೆ ಉತ್ತರ ಕರ್ನಾಟಕ, ಇತರೆ ಭಾಗದಿಂದ ಬರುವ ಜಿಲ್ಲೆಯ ಜನ ಜೋಳದ ರೊಟ್ಟಿ, ರಾಗಿ ಮುದ್ದೆಯನ್ನು ಹೆಚ್ಚಾಗಿ ಕೇಳ್ತಾರೆ. ಇದರ ಜೊತೆಗೆ ರೋಗಿಗಳಿಗೆ ರಾಗಿ ಗಂಜಿ, ರವೆ ಗಂಜಿ ಕೂಡ ದೊರೆಯುತ್ತದೆ.

ದೋಸೆ, ಹೋಳಿಗೆ ಮಾಡಬೇಕೆಂಬ ಆಸೆ:
ಖಾನಾವಳಿ ಸ್ವಲ್ಪ ಚಿಕ್ಕದಾಗಿರುವ ಕಾರಣ ಹೆಚ್ಚು ಸಾಮಗ್ರಿ ತುಂಬಿಕೊಳ್ಳಲು ಆಗಲ್ಲ. ಸದ್ಯ ಬಾಡಿಗೆ ಕಟ್ಟಡದಲ್ಲಿದ್ದೇವೆ. ಮನೆ ಮಾಲೀಕರು ಸ್ವಲ್ಪ ಜಾಗ ಮಾಡಿಕೊಟ್ಟರೆ ಸೋಮವಾರದಂದು ಶೇಂಗಾ, ಎಳ್ಳು, ತೊಗರಿ ಬೇಳೆ ಹೋಳಿಗೆ ಜೊತೆಗೆ ಸಂಜೆ ವೇಳೆ ದೋಸೆ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಈರಮ್ಮ.

Advertisement

ಬದುಕು ಕಟ್ಟಿಕೊಟ್ಟ ಖಾನಾವಳಿ:
ಫ್ಯಾಕ್ಟರಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿಕೊಂಡಿದ್ದ ಪ್ರಭುಲಿಂಗ ಹಾಗೂ ಈರಮ್ಮಗೆ ಸರಿಯಾದ ಕೆಲಸ ಇಲ್ಲದೆ, ಬದುಕು ಕಷ್ಟವಾಗಿತ್ತು. ಕೈಯಲ್ಲಿ ಕಸುಬಿದ್ದರೂ ಹೋಟೆಲ್‌ ಮಾಡಲು ಸೂಕ್ತ ಅವಕಾಶ ಸಿಕ್ಕಿರಲ್ಲಿಲ್ಲ. ತಮ್ಮೂರಿನವರೇ ಆದ ಬಸಪ್ಪ ತಮ್ಮ ಹೋಟೆಲ್‌ ಬಿಟ್ಟುಕೊಟ್ಟಿದ್ದರಿಂದ ಈಗ ಒಂದು ಕಡೆ ಬದುಕು ಕಟ್ಟಿಕೊಂಡಿದ್ದಾರೆ.

ಖಾನಾವಳಿ ಸಮಯ:
ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ವಾರದ ರಜೆ ಇಲ್ಲ.

ಖಾನಾವಳಿ ವಿಳಾಸ:
ಕೆ.ಎಸ್‌.ಹೆಗ್ಡೆ ಹಾಸ್ಪಿಟಲ್‌ ಎದುರು, ದೇರಳಕಟ್ಟೆ, ಮಂಗಳೂರು.

ಬೆಳಗ್ಗಿನ ತಿಂಡಿ:
ಬೋಂಡಾ ಬಜ್ಜಿ(4ಕ್ಕೆ 20 ರೂ.), ಈರುಳ್ಳಿ ಬಜ್ಜಿ, ಅವಲಕ್ಕಿ, ಉಪ್ಪಿಟ್ಟು, ಪೂರಿ(2ಕ್ಕೆ 20 ರೂ.), ಪ್ಲೇಟ್‌ಇಡ್ಲಿ(2ಕ್ಕೆ 20 ರೂ.), ಅಕ್ಕಿ ಪಡ್ಡು ಸಿಗುತ್ತದೆ. ಎಲ್ಲ ತಿಂಡಿಗಳ ದರ 20 ರು.

ಮಧ್ಯಾಹ್ನದ ಊಟ:
ರಾಗಿ ಮುದ್ದೆ, ಚಪಾತಿ, ಜೋಳದ ರೊಟ್ಟಿ ಊಟ ಸಿಗುತ್ತದೆ. ಎರಡು ಜೋಳದ ರೊಟ್ಟಿ ಅಥವಾ ಎರಡು ಚಪಾತಿ ಜೊತೆಗೆ ಕಾಳುಪಲ್ಯ, ತರಕಾರಿ ಪಲ್ಯ, ಮೊಸರು, ಚಟ್ನಿ, ರೈಸ್‌, ಸಾಂಬಾರ್‌, ಉಪ್ಪಿನಕಾಯಿ (ದರ 60 ರೂ.), ಮುದ್ದೆ – ಸಾಂಬಾರ್‌(20 ರೂ.), ಮುದ್ದೆ ಜೊತೆಗೆ ಎರಡು ಥರದ ಪಲ್ಯ, ಮೊಸರು, ಚಟ್ನಿ, ಸಾಂಬಾರ್‌(30 ರೂ.). ರೊಟ್ಟಿ, ಚಪಾತಿ (ಒಂದಕ್ಕೆ 10 ರೂ.). ರೈಸ್‌ ಜೊತೆಗೆ ಎರಡು ಥರದ ಪಲ್ಯ, ಮೊಸರು, ಉಪ್ಪಿನಕಾಯಿ, ಸಾಂಬಾರ್‌ ತಗೆದುಕೊಂಡರೆ 40 ರೂ..

ಭೋಗೇಶ ಆರ್‌.ಮೇಲುಕುಂಟೆ
– ಫೋಟೋ ಕೃಪೆ: ಬೆಳ್ಳಾರೆ ಶಿವಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next