Advertisement

ವೇದಾಂತ-ವೀರಶೈವ ಎರಡೂ ಒಂದೇ

01:22 PM Nov 07, 2019 | Naveen |

ಹುಬ್ಬಳ್ಳಿ: ವೇದಾಂತ ಹಾಗೂ ವೀರಶೈವ ಬೇರೆಯಲ್ಲ, ಸಮಾಜದಲ್ಲಿ ಕೂಡಿಸುವ ಹಾಗೂ ಕತ್ತರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಒಂದು ವೇದಿಕೆಯಲ್ಲಿ ಮೂರು ಪರಂಪರೆಯ ಮಠಾಧೀಶರು ಇರುವುದು ಕೂಡಿಸುವ ತ್ರಿವೇಣಿ ಸಂಗಮವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಇಲ್ಲಿನ ಶ್ರೀ ಸಿದ್ಧಾರೂಢ ಮಠದ ಆವಣರದಲ್ಲಿ ಬುಧವಾರ ರಾತ್ರಿ ನಡೆದ ಶ್ರೀ ಶಾಂತಾಶ್ರಮದ ಅಭಿನವ ಶಿವಪುತ್ರ ಸ್ವಾಮೀಜಿಯವರ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇದಾಂತ, ಸಿದ್ಧಾಂತ, ಆರೂಢ, ವೀರಶೈವ, ಪಂಚಪೀಠ ಬೇರೆ ಎಂದು ವಾದಿಸುವವರು ಇದ್ದಾರೆ. ಆದರೆ ಒಳಹೊಕ್ಕು ನೋಡಿದಾಗ ಇವೆಲ್ಲವೂ ಒಂದೇ ಎಂಬುವುದು ಅರಿವಾಗುತ್ತದೆ. ಆರೂಢ ಪರಂಪರೆಗೆ ಸಾಹಿತ್ಯ ನೀಡಿದ ಶ್ರೀ ನಿಜಗುಣ ಶರಣರು ಅದ್ವೈತ ಉಲ್ಲೇಖೀಸುವಾಗ ಕೈಲವ್ಯದ ಕುರಿಯಾಗಿ ಹೇಳಿದ್ದಾರೆ. ವೀರಶಿವಯೋಗ ಪ್ರತಿಪಾದನೆಯೂ ಇದೆ. ಹೀಗಾಗಿ ವೇದಾಂತ ಮತ್ತು ವೀರಶೈವ ಬೇರೆಯಲ್ಲ ಎಂದರು.

ನಮ್ಮಲ್ಲಿಯೂ ಕೆಲ ಪರಂಪರೆ 63 ಇದ್ದರೆ ಇನ್ನು ಉಳಿದವು 36 ಇವೆ. ಇವುಗಳನ್ನು ಒಂದುಗೂಡಿಸುವ ಕೆಲಸ ಶಾಂತಾಶ್ರಮದ ಶ್ರೀಗಳಿಂದ ಆಗಿದೆ. ಇದೊಂದು ಕೂಡಿಸುವ ಹಾಗೂ ಜೋಡಿಸುವ ಕಾರ್ಯಕ್ರಮವಾಗಿದ್ದು, ಬಹುದೊಡ್ಡ ಎತ್ತರದಲ್ಲಿ ನಿಲ್ಲುತ್ತದೆ. ಆದರೆ ಸಮಾಜದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಕತ್ತರಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅವು ಬಹುಬೇಗ ಚಿಕ್ಕದಾಗುತ್ತವೆ. ಸಮಾಜವೂ ಕೂಡ ಕೂಡಿಸುವ, ಜೋಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದರು.

ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಎಲ್ಲಾ ಪರಂಪರೆಯ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕೂಡಿಸಿರುವ ಕೀರ್ತಿ ಅಭಿನವ ಶಿವಪುತ್ರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಒಂದೇ ವೇದಿಕೆಯಲ್ಲಿ ಎಲ್ಲಾ ಸ್ವಾಮೀಜಿಗಳನ್ನು ಹಿಂದೆಂದೂ ನೋಡಿರಲಿಕ್ಕಿಲ್ಲ. ಇಷ್ಟೊಂದು ಶರಣರು ಒಂದೇ ವೇದಿಕೆಯಲ್ಲಿ ಇರುವುದಕ್ಕೆ ಅಭಿನವ ಶಿವಪುತ್ರ ಸ್ವಾಮೀಜಿಗಳ ಮೇಲಿನ ಪ್ರೀತಿಯೇ ಕಾರಣ ಎಂದರು.

ಕಾಶೀ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಸಿದ್ಧಾರೂಢರ ಸನ್ನಿದಾನದಲ್ಲಿ ಮೊಳಗುವ ನಾಮಸ್ಮರಣೆಯ ಪ್ರಭಾವವೇ ಎಲ್ಲಾ ಪರಂಪರೆಯ ಸ್ವಾಮೀಜಿಗಳ ಸಮಾಗಮಕ್ಕೆ ಕಾರಣವಾಗಿದೆ. ವೇದಾಂತ ಹೇಳ್ಳೋದು ಸುಲಭ. ಆದರೆ ಜೀವನದಲ್ಲಿ ಅಳವಡಿಸಿಕೊಂಡು ಅನುಸುರಿಸುವುದು ಕಷ್ಟವಾಗಿದೆ. ಇಲ್ಲಿ ವೇದಾಂತ ಹಾಗೂ ಸಿದ್ಧಾಂತದ ಸಂಗಮವಾಗಿದೆ ಎಂದು ಹೇಳಿದರು.

Advertisement

ಮೈಸೂರಿನ ಜಗದ್ಗುರು ಡಾ| ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಜಗತ್ತು ಭಾರತದ ಕಡೆಗೆ ನೋಡುತ್ತದೆ ಎಂದರೆ ಅದು ಆಧ್ಯಾತ್ಮಕ್ಕೆ ಇರುವ ಶಕ್ತಿ. ಈ ಶಕ್ತಿಯಿಂದಲೇ ಭಾರತ ಗುರುವಿನ ಸ್ಥಾನದಲ್ಲಿ ಇದೆ. ದೇಶದ ಹತ್ತು ಹಲವು ವಿಚಾರಗಳನ್ನು ವಿದೇಶಿಗರು ಅನುಸರಿಸುತ್ತಾರೆ. ಅಂತಹ ಸತ್ವಭರಿತ ರಾಷ್ಟ್ರ ನಮ್ಮದು. ಶ್ರೀಮಂತರಲ್ಲದಿದ್ದರೂ ಇನ್ನೊಬ್ಬರನ್ನು ನೋಡಿ ಖುಷಿ ಪಡುವ ಭಾವನೆ ಇರುವುದು ಭಾರತೀಯರಲ್ಲಿ ಮಾತ್ರ ಎಂದರು.

ನರಸೀಪುರ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಗುರು-ಶಿಷ್ಯರ ಪರಂಪರೆ ಇಂದಿಗೂ ಗಟ್ಟಿಯಾಗಿ ಮುಂದುವರೆಯುತ್ತದೆ. ಧರ್ಮ, ಸಂಸ್ಕೃತಿ ಉಳಿಯಲು ಈ ಪರಂಪರೆ ಅಗತ್ಯವಾಗಿದೆ. ಸಮಾಜ ಕೆಟ್ಟ ದಾರಿ ಹಿಡಿದಾಗ ಮಹಾತ್ಮರ ಜನನವಾಗಿ ಉತ್ತಮ ಮಾರ್ಗದತ್ತ ಕೊಂಡೊಯ್ಯುವ ಕೆಲಸ ಹಿಂದೆ ಆಗಿದೆ. ಮುಂದೆಯೂ ಆಗುತ್ತದೆ. ಆರೂಢ ಪರಂಪರೆ ಎಲ್ಲಾ ಜಾತಿಯವರನ್ನು ಸನ್ಯಾಸ ದೀಕ್ಷೆ ನೀಡಿ ಪೀಠಾಧಿಪತಿಗಳನ್ನಾಗಿ ಮಾಡಿದೆ ಎಂದು ಹೇಳಿದರು.

ಶಾಂತಾಶ್ರಮದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, 50ನೇ ವಯಸ್ಸಿಗೆ ನನ್ನ ಅಂತ್ಯವಾಗುತ್ತದೆ ಎಂದು ಅಣ್ಣನ ಮಗನನ್ನೇ ಸಿದ್ಧಾರೂಢರನ್ನಾಗಿ ಉತ್ತರಾಧಿಕಾರಿಯಾಗಿ ಮಾಡಿಕೊಂಡೆ. ಈ ಪರಂಪರೆಯನ್ನು ನಿರಾಕರಿಸಿ ಕಂಪ್ಯೂಟರ್‌ ಕ್ಷೇತ್ರದತ್ತ ವಾಲಿದರು. ಈ ಪೀಠಕ್ಕೆ ವಿದ್ಯಾವಂತರನ್ನೇ ತರಬೇಕು ಎಂದು ಯೋಚಿಸಿದಾಗ ಅಭಿನವ ಸಿದ್ಧಾರೂಢರು ಯೋಗ್ಯ ಅನ್ನಿಸಿತು. ಪೀಠದ ಮೇಲಿರುವ ಭಕ್ತರ ಪ್ರೀತಿ ಇವರ ಕಾಲದಲ್ಲೂ ಹೀಗೆ ಮುಂದುವರಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next