Advertisement

ಹುಬ್ಬಳ್ಳಿ: ರಾಜ್ಯದಲ್ಲೂ ದೇಸಿ ಹಸುವಿಗೆ “ರಾಜ್ಯಮಾತಾ’ ಸ್ಥಾನಕ್ಕೆ ಕೂಗು

03:44 PM Oct 10, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಮಹಾರಾಷ್ಟ್ರ ಸರ್ಕಾರ ದೇಸಿ ಗೋವಿಗೆ “ರಾಜ್ಯಮಾತಾ’ ಸ್ಥಾನ ನೀಡಿ ರೈತರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಇಂತಹ ಘೋಷಣೆ ಆಗಲಿ ಎಂಬ ಕೂಗು ಕೇಳಿಬಂದಿದೆ. ದೇಶದಲ್ಲಿ ಈ ಹಿಂದೆ ನೂರಾರು ದೇಸಿ ತಳಿಗಳ ಹಸುಗಳಿದ್ದವು. ಈಗ ಸುಮಾರು 31 ದೇಸಿ ಹಸುಗಳ ತಳಿಗಳಷ್ಟೇ ಉಳಿದಿವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಪೂರಕವಾಗಲಿದೆ ಎನ್ನಲಾಗಿದೆ.

Advertisement

ದೇಸಿ ಗೋವಿಗೆ “ರಾಷ್ಟ್ರಮಾತಾ’ ಸ್ಥಾನ ನೀಡಬೇಕೆಂಬ ಬೇಡಿಕೆ ದಶಕಗಳಷ್ಟು ಹಳೆಯದ್ದು. ಇದುವರೆಗೂ ಅದು ಸಾಧ್ಯವಾಗಿಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ “ರಾಜ್ಯಮಾತಾ’ ಸ್ಥಾನ ನೀಡಿರುವುದು ದೇಸಿ ಗೋವುಗಳ ಸಾಕಣೆದಾರರಿಗೆ ಖುಷಿ ತರಿಸಿದೆ. ಅಲ್ಲದೇ ಜರ್ಸಿ ಹಾಗೂ ಎಚ್‌ಎಫ್‌ ಹಸುಗಳ ಅಬ್ಬರದಲ್ಲಿ ತೆರೆ-ಮರೆಗೆ ಸರಿದಂತಿದ್ದ ದೇಸಿ ಹಸುಗಳಿಗೆ ಮತ್ತೆ ಮಹತ್ವ ಸಿಗಲಿದೆ.

ರೈತರಿಗೆ ಬಲ: ಇನ್ನು ದೇಸಿ ಗೋಸಾಕಾಣಿಕೆ  ಪ್ರೋತ್ಸಾಹಿಸಲು ಪ್ರತಿ ಹಸುವಿಗೆ ದಿನಕ್ಕೆ 50 ರೂ.ಗಳಂತೆ ಮಾಸಿಕ 1,500 ರೂ.ಗಳ ಪ್ರೋತ್ಸಾಹ ಧನ ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವುದು ರೈತರಿಗೆ ಬಲ ನೀಡಲಿದೆ. ಸದ್ಯ ದೇಸಿ ಹಸುವಿನ ಹಾಲು 100-110 ರೂ.ಗೆ ಒಂದು ಲೀಟರ್‌ನಂತೆ ಹಾಗೂ ತುಪ್ಪ ಕೆಜಿಗೆ 2200-3,500 ರೂ.ವರೆಗೆ ಮಾರಾಟವಾಗುತ್ತಿದೆ.

ಸಾವಯವ ಕೃಷಿಯಲ್ಲೂ ದೇಸಿ ಹಸುಗಳ ಕೊಡುಗೆ ಮಹತ್ವದ್ದಾಗಿದೆ. ಇನ್ನೊಂದೆಡೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜೆರ್ಸಿಗಳ ಸಂಖ್ಯೆ ನಿರೀಕ್ಷೆಗೆ ಮೀರಿ ಹೆಚ್ಚಿದೆ. ಕೆಎಂಎಫ್‌ ಸೇರಿದಂತೆ ಯಾವುದೇ ಡೈರಿಗಾಗಲಿ ನಿತ್ಯ ಬರುವ ಹಾಲಿನಲ್ಲಿ ಬಹುತೇಕ ಪಾಲು ಜೆರ್ಸಿ ಹಸುಗಳದ್ದೇ ಆಗಿರುತ್ತದೆ.

ಕನೇರಿಮಠದ ಕೊಡುಗೆ: ಈ ನಡುವೆ ದೇಸಿ ಹಸುಗಳ ರಕ್ಷಣೆ ನಿಟ್ಟಿನಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಮಠದ ಕಾರ್ಯ ಮಹತ್ವದ್ದಾಗಿದೆ. ಮಹಾರಾಷ್ಟ್ರ ಸರ್ಕಾರದ “ರಾಜ್ಯಮಾತಾ’ ಘೋಷಣೆಯಲ್ಲೂ ಶ್ರೀಮಠದ ಪ್ರಭಾವವಿದೆ. ಶ್ರೀಮಠದಲ್ಲಿ ಸುಮಾರು 22-23 ತಳಿಯ ಅಂದಾಜು 1,500ಕ್ಕೂ ಹೆಚ್ಚು ದೇಸಿ ಹಸುಗಳಿವೆ. ಶ್ರೀಮಠ ಪ್ರತಿ ವರ್ಷವೂ “ಗೋ ಪರಿಕ್ರಮ ಯಾತ್ರೆ’ ಕೈಗೊಳ್ಳುತ್ತಿದ್ದು, ಇದು ಕೊಲ್ಲಾಪುರ ಜಿಲ್ಲೆ, ಕರ್ನಾಟಕದ ಹಲವು ಗ್ರಾಮಗಳಲ್ಲಿಯೂ ಪರಿಣಾಮ ಬೀರಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಸುಮಾರು 3-4 ಲಕ್ಷದಷ್ಟು ದೇಸಿ ಹಸುಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬುದು ಅಲ್ಲಿನ ಪಶುಸಂಗೋಪನಾ
ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

ರಾಜ್ಯದಲ್ಲೂ ಜಾರಿಯಾಗಲಿ: ಕರ್ನಾಟಕದಲ್ಲಿ ಸಂಘ ಪರಿವಾರ, ಅನೇಕ ಮಠಗಳು, ಸಂಘ-ಸಂಸ್ಥೆಗಳು ಗೋಶಾಲೆಗಳ ಮೂಲಕ ದೇಸಿ ಹಸುಗಳ ಸಾಕಣೆ ಮಾಡುತ್ತಿದ್ದು, ಹಳ್ಳಿಗಳಲ್ಲಿಯೂ ರೈತರು ನಿಧಾನಕ್ಕೆ ದೇಸಿ ಹಸುಗಳ ಸಾಕಣೆಗೆ ಮುಂದಾಗುತ್ತಿದ್ದಾರೆ. ದೇಸಿ ಹಸುಗಳ ಸಂರಕ್ಷಣೆ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ದೇಸಿಯ ಗೋವಿಗೆ “ರಾಜ್ಯಮಾತಾ’ ಪಟ್ಟ ನೀಡಿ ಅವುಗಳನ್ನು ಪೋಷಿಸುವ ರೈತರಿಗೆ ಸಹಾಯಧನ ನೀಡುವಂತಾಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ದೇಸಿ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಕ್ರಮ ಪ್ರೇರಣಾದಾಯಕವಾಗಿದೆ. ರಾಷ್ಟ್ರಮಟ್ಟದಲ್ಲಿಯೂ ದೇಸಿ ಗೋವಿಗೆ “ರಾಷ್ಟ್ರಮಾತಾ’ ಘೋಷಣೆ ಬೇಡಿಕೆ-ಒತ್ತಾಯವಿದೆ. ಕೇಂದ್ರ ಸರ್ಕಾರ ಅದನ್ನು
ಕೈಗೊಂಡರೆ ಇನ್ನಷ್ಟು ಖುಷಿ ತರಲಿದೆ. ಆರೋಗ್ಯ, ಪರಿಸರ, ಸಾವಯವ ಕೃಷಿ ದೃಷ್ಟಿಯಿಂದ ದೇಸಿಗಳು ಮತಹ್ವದ ಪಾತ್ರ ಬೀರುತ್ತವೆ.
*ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ.

ಮಹಾರಾಷ್ಟ್ರ ಸರ್ಕಾರ ದೇಸಿ ಹಸುಗಳಿಗೆ “ರಾಜ್ಯಮಾತಾ’ ಪಟ್ಟ ನೀಡಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿಯೂ ಇಂತಹ ಘೋಷಣೆ ಆಗಲಿ ಎಂದು ವಿಶ್ವಹಿಂದೂ ಪರಿಷತ್‌ನ ಗೋರಕ್ಷಾ ವಿಭಾಗದಿಂದ ಸರ್ಕಾರವನ್ನು ಒತ್ತಾಯಿಸಲಾಗುವುದು.
ಉತ್ತರ ಕರ್ನಾಟಕದಲ್ಲಿ ನಾಲ್ಕೈದು ಕಡೆ ಗೋಶಾಲೆಗಳನ್ನು ನಿರ್ವಹಿಸಲಾಗುತ್ತಿದ್ದು, ದೇಸಿ ಹಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
*ಗೋವರ್ಧನರಾವ್‌,
ವಿಎಚ್‌ಪಿ ಉತ್ತರ ಪ್ರಾಂತ ಮುಖ್ಯಸ್ಥ.

■ ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next