ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚುತ್ತಿದೆ, ಹವಾಮಾನ ಬದಲಾವಣೆ ತೀವ್ರ ಸ್ವರೂಪ ಪಡೆಯುತ್ತಿದೆ, ಮಳೆ ಲೆಕ್ಕಕ್ಕೆ ಸಿಗದಾಗಿದೆ, ಮಳೆಗಾಲದಲ್ಲಿಯೇ ಜಲಾಶಯಗಳು ಖಾಲಿ, ಖಾಲಿ ಇವೆ. ಜೀವಜಲ ವಿಚಾರದಲ್ಲಿ ಜಾಗೃತವಾಗದಿದ್ದರೆ, ಜಲಸ್ವಾವಲಂಬನೆ ಯತ್ನಗಳು ನಡೆಯದಿದ್ದರೆ, ಭವಿಷ್ಯದಲ್ಲಿ ಕಂಟಕ ಕಟ್ಟಿಟ್ಟ ಬುತ್ತಿ!
Advertisement
ಉತ್ತರ ಕರ್ನಾಟಕದಲ್ಲಿ ಹವಾಮಾನ ಬದಲಾವಣೆ ಪರಿಣಾಮ ಹೆಚ್ಚತೊಡಗಿದೆ. ಮಳೆ ಕೊರತೆ, ಕೆಲವೇ ಗಂಟೆಗಳಲ್ಲಿ ದಾಖಲೆ ಪ್ರಮಾಣದ ಮಳೆ, 40ರಿಂದ 43ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಉರಿ ಬಿಸಿಲು, 5.6ರಿಂದ 8.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಿಂದ ವಿಪರೀತ ಚಳಿ, ಹೆಚ್ಚುತ್ತಿರುವ ಮಳೆ ಕೊರತೆ-ಬರದ ಸ್ಥಿತಿ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತೀವ್ರತೆ ಪಡೆಯಲಿದ್ದು, ಕೃಷಿ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದು ಹಲವು ತಜ್ಞರ ಅಭಿಮತ.
Related Articles
Advertisement
ಹವಾಮಾನ ಬದಲಾವಣೆ ಕುರಿತಾಗಿ 1961-90ರವರೆಗಿನ ಸ್ಥಿತಿ ಹಾಗೂ ಮುಂದಿನ 2021-2050ರವರೆಗಿನ ಪರಿಸ್ಥಿತಿ ಹೋಲಿಕೆಯೊಂದಿಗೆ ನೋಡಿದರೆ ಹವಾಮಾನ ಬದಲಾವಣೆ, ಬರ, ಮಳೆ ಕೊರತೆ ಹಾಗೂ ಅಕಾಲಿಕ-ದಾಖಲೆ ರೂಪದ ಮಳೆ ವಿಚಾರದಲ್ಲಿ ರಾಜ್ಯದಲ್ಲಿಯೇ ಉತ್ತರ ಕರ್ನಾಟಕ ಹಾಟ್ಸ್ಪಾಟ್ ಆದರೂ ಅಚ್ಚರಿ ಇಲ್ಲ. ಮುಂದಿನ ದಿನಗಳಲ್ಲಿ ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಮುಂಗಾರು ತೀವ್ರ ಅಪಾಯ ಸೃಷ್ಟಿಸುವ ಸಾಧ್ಯತೆ ಇಲ್ಲದಿಲ್ಲ ಎಂಬುದು ಕೆಲ ತಜ್ಞರ ಅಭಿಮತ.
ಹೊಂದಾಣಿಕೆ ಅನಿವಾರ್ಯ: ಬದಲಾದ ಸ್ಥಿತಿಯಲ್ಲಿ ಹವಾಮಾಧಾರಿತ ಕೃಷಿಗೆ ರೈತರು ಮುಂದಾಗಬೇಕಾಗುತ್ತದೆ. ಮುಖ್ಯವಾಗಿ ಮಳೆ ಹಾಗೂ ಬೆಳೆ ಚಕ್ರಕ್ಕೆ ಹೊಂದಾಣಿಕೆಯೊಂದಿಗೆ ಕೃಷಿ ಮಾಡಬೇಕಾಗುತ್ತದೆ. ಬರ ಮತ್ತು ಪ್ರವಾಹ ಸ್ಥಿತಿಯಿಂದಾಗಿ 2018-19ರಲ್ಲಿ ರಾಜ್ಯದಲ್ಲಿ ಸುಮಾರು 32,335 ಕೋಟಿ ರೂ.ಗಳಷ್ಟು ಬೆಳೆ ಹಾನಿಯಾಗಿತ್ತು ಎಂದು ಅಂದಾಜಿಸಲಾಗುತ್ತಿದ್ದು, ಇದರಲ್ಲಿ ಉತ್ತರ ಕರ್ನಾಟಕದ ಪಾಲು ಪ್ರಮುಖದ್ದಾಗಿದೆ.
ಜಲಸ್ವಾವಲಂಬನೆ ಅನಿವಾರ್ಯ: ಜಾಗತಿಕವಾಗಿ ಇರುವ ನೀರಿನ ಪ್ರಮಾಣದಲ್ಲಿ ಶೇ.97ರಷ್ಟು ಸಮುದ್ರ ನೀರಾಗಿದೆ. ಶೇ.2.8ರಷ್ಟು ಮಾತ್ರ ಜೀವಸಂಕುಲಕ್ಕೆ ಕುಡಿಯುವ, ವಿವಿಧ ರೀತಿಯ ಬಳಕೆಗೆ ದೊರೆಯುತ್ತಿದೆ. ಇದರಲ್ಲಿ ಶೇ.83-85.3ರಷ್ಟು ನೀರು ನೀರಾವರಿಗಾಗಿ ಬಳಕೆಯಾಗುತ್ತಿದೆ. ಗೃಹಬಳಕೆಗೆ ಶೇ.6.5ರಷ್ಟು, ಕೈಗಾರಿಕೆಗೆ ಶೇ.1.3ರಷ್ಟು, ವಿದ್ಯುತ್ ಉತ್ಪಾದನೆಗೆ ಶೇ.0.3ರಿಂದ 0.4ರಷ್ಟು ಬಳಕೆ ಆಗುತ್ತಿದೆ.
ನದಿ-ಕೆರೆಗಳ ಅತಿಕ್ರಮಣದಿಂದಾಗಿ ನೀರು ಸಂಗ್ರಹ ಪ್ರಮಾಣ ಕುಸಿಯುತ್ತಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು 54 ಸಾವಿರ ಕ್ಯುಬಿಕ್ ಮೀಟರ್‌ನಿಂದ 13 ಸಾವಿರ ಕ್ಯುಬಿಕ್ ಮೀಟರ್‌ಗೆ ಕುಸಿದಿದೆ. ಮಲಪ್ರಭಾ, ಘಟಪ್ರಭಾ, ತುಂಗಭದ್ರಾಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ನಗರಗಳ ಬೆಳವಣಿಗೆಯಿಂದಾಗಿ ನೀರಿನ ಬೇಡಿಕೆ ಹೆಚ್ಚುತ್ತಿದೆ. ನಗರಗಳ ನೀರಿನ ಬೇಡಿಕೆ ಶೇ.24-25ರಷ್ಟು ಇದ್ದದ್ದು, 2030ರ ವೇಳೆಗೆ ಶೇ.58ಕ್ಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗುತ್ತಿದ್ದು, ಕುಡಿವ ನೀರಿಗೆ ಮೊದಲ ಆದ್ಯತೆ ಎಂಬ ತತ್ವದಡಿ ಮುಂದಿನ ದಿನಗಳಲ್ಲಿ ಜಲಾಶಯಗಳು ನಗರಗಳಿಗೆ ನೀರು ಪೂರೈಕೆಯ ಜಲಾಗಾರಗಳಾಗಿ ಕಾರ್ಯನಿರ್ವಹಿಸಿದರೂ ಅಚ್ಚರಿ ಇಲ್ಲ.
ನಗರ ಹಾಗೂ ಹಳ್ಳಿಗಳು ಜಲಸ್ವಾವಲಂಬನೆಗೆ ಮುಂದಾಗಲೇಬೇಕಾಗಿದೆ. ಜಲಮೂಲಗಳ ಸಂರಕ್ಷಣೆ, ನೀರಿನ ಸದ್ಬಳಕೆ, ಅರಣ್ಯೀಕರಣಕ್ಕೆ ಒತ್ತು, ಮಳೆನೀರು ಕೊಯ್ಲುನಂತಹ ಯತ್ನಗಳಿಗೆ ಮುಂದಾಗಬೇಕಾಗಿದೆ.
ಜಾಗತಿಕ ತಾಪಮಾನ, ಹವಾಮಾನ ತೀವ್ರ ಬದಲಾವಣೆಯ ಪರಿಣಾಮ ಆಯಾ ರಾಜ್ಯಗಳಲ್ಲಿ ಕೆಲವೊಂದು ಪ್ರದೇಶದಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಮಹಾರಾಷ್ಟ್ರದ ವಿದರ್ಭ, ತೆಲಂಗಾಣದ ಕೆಲವೊಂದು ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದು ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆನೀರು ಕೊಯ್ಲು ಅನುಷ್ಠಾನ ಕಟ್ಟುನಿಟ್ಟಾಗಿ ಕಡ್ಡಾಯಗೊಳ್ಳಬೇಕಾಗಿದೆ. ನಗರಗಳಲ್ಲಿ ಇದರ ಅನಿವಾರ್ಯತೆ ಹೆಚ್ಚಿದೆ. ಅರಣ್ಯೀಕರಣ ಹೆಚ್ಚಬೇಕಿದೆ.• ಡಿ.ಪಿ.ಬಿರಾದಾರ,
ವಿಶ್ರಾಂತ ಕುಲಪತಿ, ಕೃವಿವಿ ಧಾರವಾಡ