Advertisement

ಸೌಲಭ್ಯಕ್ಕೆ ಆಗ್ರಹಿಸಿ ನಿವೃತ್ತ ಸಾರಿಗೆ ನೌಕರರ ಪ್ರತಿಭಟನೆ

11:48 AM Jan 25, 2019 | |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಹಾಗೂ ಹಾಲಿ ನೌಕರರಿಗೆ ವಿವಿಧ ಸೌಲಭ್ಯ ನೀಡುವಲ್ಲಿ ಸರಕಾರ ಹಾಗೂ ಸಂಸ್ಥೆ ವಿಫ‌ಲವಾಗಿದೆ ಎಂದು ಆರೋಪಿಸಿ ನಿವೃತ್ತ ನೌಕರರ ಸಂಘದಿಂದ ಇಲ್ಲಿನ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

Advertisement

ಗುರುವಾರ ಇಲ್ಲಿನ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ ನಿವೃತ್ತ ನೌಕರರು, 2018 ರಿಂದ ನಿವೃತ್ತಿಯಾದ ನೌಕರರಿಗೆ ಉಪದಾನ, ರಜೆ ನಗದೀಕರಣ ನೀಡಿಲ್ಲ. ಹಾಲಿ ನೌಕರರಿಗೆ ಸಮಯಕ್ಕೆ ವೇತನ ಆಗುತ್ತಿಲ್ಲ. ಈ ನೌಕರರಿಗೆ ನೀಡಬೇಕಾದ ರಜೆ ನಗದೀಕರಣ, ಪ್ರೊಬೇಷನರಿ ಹಿಂಬಾಕಿ, ವೇತನ ಪರಿಷ್ಕರಣೆ ಬಾಕಿ, ಓಟಿ ಸೇರಿದಂತೆ ಇತರೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಕಾರ್ಮಿಕರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿರುವುದು ಆಡಳಿತ ವರ್ಗ ಹಾಗೂ ಸರಕಾರದಿಂದ ನಡೆಯುತ್ತಿರುವ ಕಾರ್ಮಿಕ ದೌರ್ಜನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಕರಸಾಸಂ ನೌಕರರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಜಿ. ಕೊಪ್ಪದ ಮಾತನಾಡಿ, ಇತರೆ ಸಾರಿಗೆ ನಿಗಮಗಳ ನೌಕರರು ಸಕಾಲಕ್ಕೆ ಸೌಲಭ್ಯ ಸೇರಿದಂತೆ ವೇತನ ಪಡೆಯುತ್ತಿದ್ದಾರೆ. ಆದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮಾತ್ರ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಸಂಸ್ಥೆಯ ಆರ್ಥಿಕ ಅವನತಿಗೆ ಸರಕಾರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಂಸ್ಥೆ ಉಳಿಸುವ ನಿಟ್ಟಿನಲ್ಲಿ 2019-20ನೇ ಸಾಲಿಗೆ ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ ವಿತರಣೆ, ಸಿ ಶೆಡ್ಯೂಲ್‌ಗ‌ಳನ್ನು ಸ್ಥಗಿತಗೊಳಿಸುವ ತೀರ್ಮಾನ ಕೈಗೊಂಡು ಸರಕಾರಕ್ಕೆ ಎಚ್ಚರಿಕೆ ರವಾನಿಸಬೇಕು ಎಂದು ಒತ್ತಾಯಿಸಿದರು.

ಕೂಡಲೇ ಬಾಕಿಗಳನ್ನು ಪಾವತಿ ಮಾಡಬೇಕು. ದುಡಿಯುತ್ತಿರುವ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಬಟವಡೆ ಮಾಡಬೇಕು. ಬಾಕಿ ಉಳಿಸಿಕೊಂಡಿರುವುದಕ್ಕೆ ಬಡ್ಡಿ ಸಮೇತ ಪಾವತಿ ಮಾಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಕೇಂದ್ರ ಕಚೇರಿಯಲ್ಲಿ ಇಲ್ಲದ್ದರಿಂದ ಮುಖ್ಯ ಲೆಕ್ಕಾಧಿಕಾರಿ ಶಾಂತಪ್ಪ ಗೋಟಖಂಡಕಿ ಹಾಗೂ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಎಸ್‌.ಕೆ. ಹಳ್ಳಿ ಮನವಿ ಸ್ವೀಕರಿಸಿದರು.

Advertisement

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ತಹಶೀಲ್ದಾರ, ಕಾರ್ಮಿಕ ಮುಖಂಡರಾದ ಆರ್‌.ಎಫ್. ಕವಳಿಕಾಯಿ, ಆರ್‌.ಸಿ. ಮಠದ, ಎ.ಎಚ್. ಜವಳಿ, ವಿ.ಎಸ್‌. ಮಜ್ಜಿಗುಡ್ಡ, ಬಿ.ಎಸ್‌. ದೋತ್ರದ, ಅರುಣ ಭೊಸ್ಲೆ, ಆರ್‌.ಡಿ. ಎಲಿಸೂರ, ಐ.ವಿ. ಭದ್ರಾಪುರ, ಎಸ್‌.ಎಸ್‌. ವಿರಕ್ತಿಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next