ಹುಬ್ಬಳ್ಳಿ: ವಿಶ್ವ ಮಾಲಿನ್ಯ ನಿಯಂತ್ರಣ ದಿನದ ನಿಮಿತ್ತ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಯೂರಿ ಬಡಾವಣೆಯಲ್ಲಿನ ಮರಗಳಿಗೆ ಹೊಡೆಯಲಾದ ಮೊಳೆ, ಜಾಹೀರಾತುಗಳನ್ನು ತೆರವುಗೊಳಿಸಲಾಯಿತು.
ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹು-ಧಾ ಮಹಾನಗರ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ಯಾವುದೇ ಇಲಾಖೆಗೆ ಸಂಬಂಧಿಸಿದ ಅಡಚರಣೆಗಳು, ತೊಂದರೆಗಳಿದ್ದಲ್ಲಿ ಮಾಹಿತಿ ನೀಡಲು ಹೇಳಿದರು.
ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ ಮಾತನಾಡಿ, ಮರಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಮರಗಳ ಮೇಲೆ ಜಾಹೀರಾತುಗಳನ್ನು ಅಂಟಿಸುವುದು ಕಾನೂನು ಬಾಹಿರವಾಗಿದೆ. ಮರಗಳಿಗೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುದರಿಂದ ಅದರ ಜೀವಿತಾವಧಿ ಶೇ.60ರಿಂದ ಶೇ.70ಕ್ಕೆ ಇಳಿಕೆಯಾಗಿದೆ. ಪಾಲಿಕೆಯು ಮರ ಸಂರಕ್ಷಣೆ ಕಾಯ್ದೆಯ ಸೆಕ್ಷನ್ ಆಕ್ಟ್-8, 1976ರ ಪ್ರಕಾರ ಜಾಹೀರಾತುದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸ್ವರ್ಣ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ಡಾ| ವಿಎಸ್‌ವಿ ಪ್ರಸಾದ ಮಾತನಾಡಿ, ಮರಗಳಿಗೂ ಜೀವ ಇರುತ್ತದೆ. ನಗರದ ಪ್ರದೇಶಗಳಲ್ಲಿನ ಗಿಡಮರಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.ಮರಗಳು ನಮ್ಮ ಪರಿಸರದ ಅವಿಭಾಜ್ಯ ಅಂಗವಾಗಿದ್ದು ಉಸಿರಾಡಲು ಶುದ್ಧ ಗಾಳಿ, ನೆರಳು, ಅನೇಕ ಜೀವ ವೈವಿಧ್ಯಕ್ಕೆ ಆಸರೆಯಾಗಿದೆ ಎಂದರು.
ವಸುಂಧರಾ ಫೌಂಡೇಶನ್ ಹುಬ್ಬಳ್ಳಿ ಹಾಗೂ ಸ್ವರ್ಣ ಗ್ರುಪ್ ಕಂಪನಿ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ವತಿಯಿಂದ ಮೊಳೆ ಸಹಿತ ಜಾಹೀರಾತು ಫಲಕ ತೆಗೆಯುವ ಕೆಲಸ ಮಾಡಿದರು. ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ, ಉಪ ಮಹಾಪೌರರಾದ ಉಮಾ ಮುಕುಂದ, ಚನ್ನು ಹೊಸಮನಿ, ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಲಕ್ಷ್ಮೀ ಬಾಳಿಕಾಯಿ, ವಿನಾಯಕ ನಾಯ್ಕರ, ಮಹಾಂತೇಶ ಮುಖೇಶ, ಪ್ರಶಾಂತ ತಳವಾರ ಇನ್ನಿತರರಿದ್ದರು.