ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಕೇಶ್ವಾಪುರ ಠಾಣೆ ವ್ಯಾಪ್ತಿಯ ಓರ್ವನನ್ನು ಬಂಧಿಸಿ, ಆತನಿಂದ ಅಂದಾಜು 85 ಸಾವಿರ ರೂ. ಮೌಲ್ಯದ 888 ಗ್ರಾಂ ಗಾಂಜಾ, 96.50 ಲಕ್ಷ ರೂ. ನಗದು, ಕಿಯಾ ಕಾರು ಹಾಗೂ ವಿವಿಧ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಬಾರಮೇರ ಜಿಲ್ಲೆಯ ಓಂ ಪ್ರಕಾಶ ಊರ್ಫ ಪಿಂಟೂ ಬಂಧಿತನಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಖಚಿತ ಮಾಹಿತಿ ಆಧರಿಸಿ ಎಸಿಪಿ ಉಮೇಶ ಚಿಕ್ಕಮಠ ಮತ್ತು ಶಹರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮೊದಲು ಆತನ ಬಳಿ 245 ಗ್ರಾಂ ಗಾಂಜಾ ದೊರೆಕಿದೆ. ಬಳಿಕ ವಿಚಾರಣೆ ನಡೆಸಿದಾಗ ಮನೆಯಲ್ಲಿಟ್ಟಿದ್ದ 643 ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಐಫೋನ್ ಮೊಬೈಲ್ ಫೋನ್, ವಿವಿಧ ಬ್ಯಾಂಕುಗಳ 36 ಚೆಕ್ ಬುಕ್ಸ್, 30 ಎಟಿಎಂ ಕಾರ್ಡ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ವಾಪಿಂಗ್ ಮಷಿನ್ ಸೇರಿದಂತೆ ಅಂದಾಜು 1,06,85,000ರೂ. ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಧಿತನು ಗಾಂಜಾ ಜೊತೆ ಹವಾಲಾ ವ್ಯವಹಾರ ನಡೆಸುತ್ತಿರುವ ಗುಮಾನಿ ಇದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.