Advertisement

ಬಿಡಾಡಿ ಆಪರೇಷನ್‌ ತಡೆಗೆ ಗೋಪಾಲಕರ ಮೊರೆ

04:10 PM Sep 12, 2019 | Naveen |

ವಿಶ್ವನಾಥ ಕೋಟಿ
ಹುಬ್ಬಳ್ಳಿ:
ಅತಿವೃಷ್ಟಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿಯೂ ಹೈನುಗಾರಿಕೆಗೆ ತೊಂದರೆಯಾಗಿದೆ. ಸಂಗ್ರಹಿಸಿದ್ದ ಒಣ ಮೇವು ಕೊಳೆಯುತ್ತಿರುವುದು ರಾಸುಗಳ ನಿರ್ವಹಣೆ ದುಸ್ತರವಾಗಿಸಿದೆ. ಆದ್ದರಿಂದ ಮಹಾನಗರ ಪಾಲಿಕೆ ಬಿಡಾಡಿ ದನಗಳ ಕಾರ್ಯಾಚರಣೆ ಮುಂದೂಡಬೇಕೆಂಬುದು ಹೈನುಗಾರರ ಕೋರಿಕೆ!

Advertisement

ಮೇವಿನ ಕೊರತೆಯಿಂದಾಗಿ ಬೀದಿಗೆ ಬಿಡುವ ದನಗಳ ಪ್ರಮಾಣ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಆದೇಶದನ್ವಯ ಮಹಾನಗರ ಪಾಲಿಕೆ ಬಿಡಾಡಿ ದನಗಳನ್ನು ಹಿಡಿಯುತ್ತಿದ್ದು, ಕಳೆದೊಂದು ತಿಂಗಳಲ್ಲಿ 70ಕ್ಕೂ ಹೆಚ್ಚು ದನಗಳನ್ನು ಹಿಡಿಯಲಾಗಿದೆ.

ಸಾಮಾನ್ಯವಾಗಿ ನಗರ ಪ್ರದೇಶದ ಗೌಳಿಗರು ಹಗಲು ಹೊತ್ತಿನಲ್ಲಿ ದನಗಳನ್ನು ಮೇಯಿಸಿಕೊಂಡು ಬಂದು ಸಂಜೆ ಹಾಗೂ ರಾತ್ರಿ ಒಣ ಮೇವು ಹಾಕುತ್ತಾರೆ. ಹಗಲು ಹೊತ್ತಿನಲ್ಲಿ ಹಸಿ ಮೇವೇ ಆಹಾರ. ರಾತ್ರಿ ವೇಳೆ ದನಗಳಿಗೆ ಹಾಕುವುದಕ್ಕಾಗಿ ಒಣ ಮೇವನ್ನು ಸಂಗ್ರಹಿಸುತ್ತಾರೆ. ಆದರೆ ಈ ಬಾರಿ ವಿಪರೀತ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದಾಗಿ ಹೆಚ್ಚಿನ ಒಣ ಮೇವು ಹಾನಿಗೀಡಾಗಿದೆ. ಇದು ಗೋಪಾಲಕರನ್ನು ಆತಂಕಕ್ಕೀಡು ಮಾಡಿದೆ.

ಅವಳಿನಗರದಲ್ಲಿ ಸುಮಾರು 500 ಬಿಡಾಡಿ ದನಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳಿಂದ ಸಂಚಾರಕ್ಕೆ ವ್ಯತ್ಯಯವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಬಿಡಾಡಿ ದನಗಳ ಕಾರ್ಯಾಚರಣೆ ನಡೆಸುತ್ತಿದೆ. ಇದು ಗೋಪಾಲಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮನೆಯಲ್ಲಿ ರಾಸುಗಳನ್ನಿಟ್ಟುಕೊಂಡು ಮೇವು ಹಾಕಲಾಗುವುದಿಲ್ಲ. ಅಲ್ಲದೇ ಒಣ ಮೇವು ತಂದು ಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಒಣ ಮೇವು ಲಭ್ಯತೆಯ ಕೊರತೆ ಕೂಡ ಇದಕ್ಕೆ ಕಾರಣವಾಗಿದೆ. ಮಹಾನಗರ ಪಾಲಿಕೆ ಹಿಡಿದುಕೊಂಡು ಹೋದ ದನಗಳನ್ನು ಬಿಡಿಸಿಕೊಳ್ಳಲು ಪ್ರತಿ ದನಕ್ಕೆ ಸುಮಾರು 5000 ರೂ.ವರೆಗೆ ದಂಡ ಭರಿಸಬೇಕಾಗುತ್ತದೆ.

ಹಳ್ಳಿಗಳಲ್ಲಿ ಊರ ಹೊರಗೆ ಬಣವಿಗಳಲ್ಲಿ ಒಣ ಮೇವನ್ನು ದಾಸ್ತಾನು ಮಾಡಲಾಗುತ್ತದೆ. ಈ ಮೇವು ಹಲವು ತಿಂಗಳ ಕಾಲ ಅನುಕೂಲವಾಗುತ್ತದೆ. ಆದರೆ ನಗರಗಳಲ್ಲಿ ಜಾಗದ ಅಲಭ್ಯತೆಯಿಂದಾಗಿ ಬಣಿವೆ ಮಾಡಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ಅಲ್ಲದೇ ಶೆಡ್‌ಗಳಲ್ಲಿ ಸಂಗ್ರಹಿಸಿಟ್ಟ ಮೇವು ಮಳೆಯಿಂದಾಗಿ ಹಾಳಾಗಿದೆ.

Advertisement

ಪಾಲಿಕೆ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ಧಾರವಾಡದಲ್ಲಿ ಗೌಳಿಗಳು ಆಕ್ಷೇಪಿಸಿದ್ದರು. ಮೇವಿನ ವ್ಯವಸ್ಥೆ ಮಾಡಿಕೊಳ್ಳಲು ಕೆಲ ಸಮಯ ನೀಡುವಂತೆ ಮನವಿ ಮಾಡಿದ್ದರು. ಮತ್ತೆ ಈಗ ಬಿಡಾಡಿ ದನಗಳ ತೆರವು ಕಾರ್ಯಾಚರಣೆ ಶುರುವಾಗಿದೆ. ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ತಡೆಯಲು ಕ್ರಮ ಅವಶ್ಯ. ಆದರೆ ಈ ವರ್ಷ ವಿಪರೀತ ಮಳೆಯಿಂದಾಗಿ ದನಗಳನ್ನು ನಿರ್ವಹಣೆ ಮಾಡುವವರಿಗೆ ಒಣ ಮೇವಿನ ಕೊರತೆ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಮಾನವೀಯ ದೃಷ್ಟಿಯಿಂದ ದನಗಳ ನಿರ್ವಹಣೆಗೆ ಅನುಕೂಲತೆ ಕಲ್ಪಿಸಿಕೊಡಬೇಕಿದೆ. ಒಣ ಮೇವು ರಿಯಾಯಿತಿ ದರದಲ್ಲಿ ಒದಗಿಸಿದರೆ ದನಗಳು ಬೀದಿಗೆ ಬರುವ ಪ್ರಮಾಣ ಇಳಿಮುಖವಾಗಬಹುದು. ಈ ಬಗ್ಗೆ ಕೂಡ ಜಿಲ್ಲಾಡಳಿತ ಗಮನ ಹರಿಸುವುದು ಅವಶ್ಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next