ಹುಬ್ಬಳ್ಳಿ: ಆಗಸ್ಟ್ ತಿಂಗಳಲ್ಲಿ ಉಕ ಭಾಗದಲ್ಲಿ ಉಂಟಾದ ನೆರೆಯಿಂದ ಕೇವಲ 20 ದಿನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ 51.71 ಕೋಟಿ ರೂ. ನಷ್ಟವಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಸಾರಿಗೆ ಸಂಸ್ಥೆಗೆ ನೆರೆ ಗಾಯದ ಮೇಲೆ ಬರೆ ಎಳೆದಿದೆ.
Advertisement
ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಸೇರಿದಂತೆ ಹಳ್ಳ ಕೊಳ್ಳಗಳ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನಷ್ಟವಾಗಿದೆ. ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ.
Related Articles
Advertisement
ನಷ್ಟಕ್ಕೆ ಕಾರಣ ನೀಡಿದ ಸಂಸ್ಥೆ: ನೆರೆ ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಬಸ್ ಸಂಚಾರ ಮಾಡಿರುವುದು ನಷ್ಟಕ್ಕೆ ಕಾರಣವಾಗಿದೆ. ನೆರೆ ಸಂತ್ರಸ್ತರಿಗೆ ಉಚಿತ ಪ್ರಯಾಣ, ಅವರ ಸರಕು ಸಾಮಗ್ರಿಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ. ಇನ್ನು ಸಂತ್ರಸ್ತರಿಗೆ ದಾನಿಗಳು ನೀಡುವ ವಸ್ತುಗಳನ್ನು ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ತಲುಪಿಸುವ ಕೆಲಸ ಸಂಸ್ಥೆಯಿಂದ ಆಗಿದೆ. ಅತ್ಯಂತ ಕನಿಷ್ಟ ಸ್ಥಿತಿಯಲ್ಲಿ ಸಂಸ್ಥೆ ಸಾರಿಗೆ ಸೇವೆ ನೀಡಿದೆ. ಇದನ್ನು ನಷ್ಟ ಪರಿಹಾರ ಅಥವಾ ವಿಶೇಷ ಅನುದಾನದ ಮೂಲಕವಾದರೂ ಭರಿಸಿಕೊಡಬೇಕು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಬಸ್‌ಗಳ ಕಾರ್ಯಾಚರಣೆ ಆದಾಯವೇ ಸಂಸ್ಥೆಗೆ ಜೀವಾಳ. ಕಾರ್ಯಾಚರಣೆ ರದ್ದಾದರೂ ಸಿಬ್ಬಂದಿಗೆ ವೇತನ ಸೇರಿದಂತೆ ಇತರೆ ಆರ್ಥಿಕ ಸೌಲಭ್ಯಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದರೆ ಇದೀಗ ಆದಾಯವೇ ಖೋತಾ ಆಗಿರುವುದರಿಂದ ಸಿಬ್ಬಂದಿ ವೇತನ, ಇತರೆ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಸೇವಾ ದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಸರ್ಕಾರದ ಅಂಗ ಸಂಸ್ಥೆಗೆ ನೆರೆಯಿಂದ ಆದ ನಷ್ಟಕ್ಕೆ ಪರಿಹಾರ ನೀಡುವುದು ಸರ್ಕಾರದ ಕಾರ್ಯ ಎಂಬುದು ಸಂಸ್ಥೆಯ ವಾದವಾಗಿದೆ.
ನೆರೆ ಹಾವಳಿಯಿಂದ ಸಂಸ್ಥೆಗೆ ಸಾಕಷ್ಟು ಹಾನಿಯಾಗಿದೆ. ಈಗಾಗಲೇ ಸರ್ಕಾರಕ್ಕೆ ಪರಿಹಾರ ಕೋರಿ ಮನವಿ ಮಾಡಿದ್ದು, ಈ ತರಹದ ನಷ್ಟಕ್ಕೆ ಪರಿಹಾರ ಕೊಡಲು ಅಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸಾರಿಗೆ ಸಚಿವರಿಗೂ ವಿವರವಾದ ಮಾಹಿತಿ ನೀಡಿ ಮನವಿ ಮಾಡಿದ್ದೇವೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು.•ರಾಜೇಂದ್ರ ಚೋಳನ್,
ವ್ಯವಸ್ಥಾಪಕ ನಿರ್ದೇಶಕ, ವಾಕರಸಾಸಂ