ಹುಬ್ಬಳ್ಳಿ: ಹೊಸ ಬಸ್ ನಿಲ್ದಾಣ ಇದೀಗ ಪ್ರಯಾಣಿಕರಿಲ್ಲದೆ ಕಳೆಗುಂದಿದೆ. ನಿಲ್ದಾಣಕ್ಕೆ ತೆರಳುವ ಬಸ್‌ಗಳ ಸಂಖ್ಯೆ ಕ್ಷೀಣಿಸುತ್ತಿರುವ ಪರಿಣಾಮ ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಯಾಣಿಕರಿಗೆ ಮೂಲ ಸೌಲಭ್ಯ ಒದಗಿಸಲು ವೆಚ್ಚ ಮಾಡಿದ ಹಣ ಪೋಲಾದಂತಾಗಿದೆ.
ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕೆನ್ನುವ ಉದ್ದೇಶದಿಂದ ಶಿರಸಿ, ಕಾರವಾರ, ಬೆಳಗಾವಿ ಹಾಗೂ ಗೋವಾ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಪ್ರಯಾಣಿಕರ ಬೇಡಿಕೆ ಮೇರೆಗೆ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವರಾಮ ಹೆಬ್ಟಾರ ಅವರು ಹುಬ್ಬಳ್ಳಿ-ಶಿರಸಿ ಹಾಗೂ ಹುಬ್ಬಳ್ಳಿ-ಕಾರವಾರ ಬಸ್‌ಗಳ ಅನುಸೂಚಿಗಳನ್ನು ಮಾತ್ರ ಹೊಸ ಬಸ್ ನಿಲ್ದಾಣಕ್ಕೆ ಪುನರಾರಂಭಕ್ಕೆ ಸೂಚನೆ ನೀಡಿದ್ದರು.
ಆದೇಶ ನೆಪವಾಯ್ತು: ಈ ಆದೇಶ ನೆಪ ಮಾಡಿಕೊಂಡು ಶಿರಸಿ ಮತ್ತು ಕಾರವಾರ ಮಾರ್ಗದಲ್ಲಿ ಸಂಚರಿಸುವ ಈ ಬಸ್‌ಗಳು ಹೊಸ ಬಸ್ ನಿಲ್ದಾಣದತ್ತ ಮುಖ ಮಾಡುತ್ತಿಲ್ಲ. ಶಿರಸಿ ಹಾಗೂ ಕಾರವಾರ ಕಡೆಯಿಂದ ಬರುವಾಗ ಹಳೆ ಬಸ್ ನಿಲ್ದಾಣಕ್ಕೆ ಬಂದು ನಂತರ ಹೊಸ ಬಸ್ ನಿಲ್ದಾಣ ಮೂಲಕ ಗಿರಣಿಚಾಳ, ಕಾರವಾರ ರಸ್ತೆ ಮೂಲಕ ತೆರಳುವಂತೆ ನೀಡಿದ ಸೂಚನೆ ಪಾಲನೆಯಾಗುತ್ತಿಲ್ಲ. ಎರಡೂ ನಿಲ್ದಾಣಗಳಿಗೆ ಸಂಚರಿಸುವುದರಿಂದ ಸಂಸ್ಥೆ ಹಿತ ದೃಷ್ಟಿಯಿಂದ ನಷ್ಟ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಇರುವುದಿಲ್ಲ ಎಂಬುದು ಸಂಸ್ಥೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪ್ರಯಾಣಿಕರಿಲ್ಲದೇ ಬಿಕೋ: ಸುಮಾರು 80ಕ್ಕೂ ಹೆಚ್ಚು ಬಸ್‌ಗಳ ಸಂಚಾರದಿಂದ ಕಳೆಗಟ್ಟಿದ್ದ ಹೊಸ ಬಸ್ ನಿಲ್ದಾಣ ಇದೀಗ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ಬಹುತೇಕ ಪ್ಲಾಟ್‌ಫಾರ್ಮ್ಗಳಲ್ಲಿ ಕಾಣುತ್ತಿದ್ದ ಜನರು ಇದೀಗ ಬೆಳಗಾವಿ ಸೇರಿದಂತೆ ಕೆಲ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಮಾತ್ರ ಕಾಣ ಸಿಗುತ್ತಿದ್ದಾರೆ. ಹತ್ತಾರು ವರ್ಷಗಳ ನಂತರ ಹೊಸ ಬಸ್ ನಿಲ್ದಾಣಕ್ಕೆ ಕಳೆ ಬಂದಿತೆನ್ನುವಾಗಲೇ ದಂದ್ವ ನಿಲುವಿನಿಂದ ಹೊಸ ಬಸ್ ನಿಲ್ದಾಣ ಹಳೇ ಸ್ಥಿತಿಗೆ ತಲುಪುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಲಕ್ಷಾಂತರ ರೂಪಾಯಿ ವ್ಯಯ: ಕೆಲ ಮಾರ್ಗಗಳನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮೂಲ ಸೌಲಭ್ಯ ಒದಗಿಸುವ ಕಾರಣಕ್ಕೆ ನಿಲ್ದಾಣಕ್ಕೆ ಬಣ್ಣ, ಕುಡಿಯುವ ನೀರು, ಶೌಚಾಲಯ, ಅಂಗಡಿ ಮುಗ್ಗಟ್ಟುಗಳು, ಪ್ಲಾಟ್‌ಫಾರ್ಮ್ಗಳ ದುರಸ್ತಿ, ನಿಲ್ದಾಣ ಆವರಣ ಕಾಂಕ್ರೀಟೀಕರಣ, ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಗಳಿಗೆ ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಲಾಗಿದೆ.
ಗೋಕುಲ ರಸ್ತೆ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್‌ಗಳನ್ನು ಹೊಸ ಬಸ್ ನಿಲ್ದಾಣಕ್ಕೆ ಸೇವೆ ವಿಸ್ತರಣೆ ಹಾಗೂ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಲಾಗಿದೆ. ಆದರೆ ಇದೀಗ ಬಸ್‌ಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಪ್ರಯಾಣಿಕರಿಲ್ಲದ ಕಾರಣ ಇವೆಲ್ಲವೂ ವ್ಯರ್ಥವಾದಂತಾಗಿದೆ.
ಮೂಲೆಗುಂಪಾಗುವ ಆತಂಕ: 15 ವರ್ಷಗಳ ಹಿಂದೆ ಹೊಸ ಬಸ್ ನಿಲ್ದಾಣಕ್ಕೆ ಬಸ್‌ಗಳ ಸ್ಥಳಾತರ ಮಾಡಿದ್ದ ಸಂಸ್ಥೆ ಅಧಿಕಾರಿಗಳು ಜನಪ್ರನಿಧಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿತ್ತು. ಸ್ಥಳಾಂತರ ಮಾಡಿ ಎರಡ್ಮೂರು ತಿಂಗಳು ಕಳೆಯುವ ಬೆನ್ನಲ್ಲೇ ಸಂಸ್ಥೆ ಅಧ್ಯಕ್ಷರು ಇದಕ್ಕೆ ಅಪಸ್ವರ ಎತ್ತಿದ್ದಾರೆ. ಇದರಿಂದ ಚನ್ನಮ್ಮ ವೃತ್ತದಲ್ಲಿನ ಮಿತಿ ಮೀರಿದ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿದ್ದ ಉದ್ದೇಶ ಈಡೇರದಂತಾಗಿದೆ.
ಮೌಖಿಕ ಆದೇಶ ನಿಜವೇ?
ವಾಯವ್ಯ ಸಾರಿಗೆ ಅಧ್ಯಕ್ಷ ಶಿವರಾಮ ಹೆಬ್ಟಾರ ಹೊಸ ಬಸ್ ನಿಲ್ದಾಣ ಜತೆಗೆ ಶಿರಸಿ ಹಾಗೂ ಕಾರವಾರ ಮಾರ್ಗದ ಬಸ್ ಗಳು ಹಳೇ ಬಸ್ ನಿಲ್ದಾಣಕ್ಕೆ ತೆರಳಬೇಕು ಎಂದು ಆದೇಶಿಸಿದ್ದಾರೆ. ಆದರೆ ಈ ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ತೆರಳುವುದು ಬೇಡ ಎಂದು ಮೌಖಿಕ ಆದೇಶ ನೀಡಿದ್ದಾರೆ. ಹೀಗಾಗಿ ಹೊಸ ಬಸ್ ನಿಲ್ದಾಣಕ್ಕೆ ಬಸ್‌ಗಳು ಹೋಗುತ್ತಿಲ್ಲ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಗಳು.
ಹೊಸ ಬಸ್ ನಿಲ್ದಾಣವೆಂದರೆ ಹತ್ತಬೇಡಿ..
ಮಂಗಳೂರು ಭಾಗದಿಂದ ಉತ್ತರ ಕರ್ನಾಟಕದ ವಿವಿಧೆಡೆ ಸಂಚರಿಸುವ ಬಸ್‌ಗಳು ರಾತ್ರಿ ವೇಳೆ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸುವುದಿಲ್ಲ. ಹೊಸ ಬಸ್ ನಿಲ್ದಾಣಕ್ಕೆ ಹೋಗುತ್ತಾ ಎಂದು ಕೇಳಿದರೆ ಸಾಕು ನಿರ್ವಾಹಕರು ಹೊಸ ಬಸ್ ನಿಲ್ದಾಣ ಎಂದರೆ ಹತ್ತಬೇಡಿ ಎಂದು ನೇರವಾಗಿ ಹೇಳುತ್ತಿದ್ದಾರೆ ಎನ್ನುವುದು ಪ್ರಯಾಣಿಕರ ಅಳಲಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಬಿಡುವಂತೆ ಪ್ರಯಾಣಿಕರು ಒತ್ತಾಯ ಮಾಡಿ ಅಧಿಕಾರಿಗಳಿಗೆ ದೂರು ನೀಡುವುದಾಗಿ ತರಾಟೆ ತೆಗೆದುಕೊಂಡರೆ ಮಾತ್ರ ಹೊಸ ಬಸ್ ನಿಲ್ದಾಣಕ್ಕೆ ಬರುತ್ತವೆ. ಮಂಗಳೂರು ಕಡೆಗೆ ಹೋಗುವಾಗ ಹೊಸ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳು, ಆ ಕಡೆಯಿಂದ ಬರುವಾಗ ಹೊಸ ಬಸ್ ನಿಲ್ದಾಣಕ್ಕೆ ಬಾರದಿರುವುದು ಎಂತಹ ನಿಯಮ ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಬಸ್ ಸಂಖ್ಯೆ ಹೆಚ್ಚಾದ ನಂತರ ಪ್ರಯಾಣಿಕರ ಸಂದಣಿ ಕೂಡ ಹೆಚ್ಚಾಗಿತ್ತು. ಇದರಿಂದ ಒಂದಿಷ್ಟು ವ್ಯವಹಾರ ಕೂಡ ವೃದ್ಧಿಸಿತ್ತು. ಇತ್ತೀಚೆಗೆ ನಿಲ್ದಾಣಕ್ಕೆ ಬರುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ. ಹೊಸ ಬಸ್ ನಿಲ್ದಾಣ ಜತೆಗೆ ಹಳೆ ಬಸ್ ನಿಲ್ದಾಣಕ್ಕೂ ಹೋಗಬೇಕೆಂಬ ನಿಯಮವಿದ್ದರೂ ಇಲ್ಲಿಗೆ ಬಸ್‌ಗಳು ಬರುತ್ತಿಲ್ಲ.
ರಮೇಶ ಸೋಮನವರ,
ನಿಲ್ದಾಣ ವ್ಯಾಪಾರಿ
ನಿಲ್ದಾಣ ವ್ಯಾಪಾರಿ
ಭವಿಷ್ಯದ ದೃಷ್ಟಿಯಿಂದ ಹೊಸ ನಿಲ್ದಾಣ ಅನಿವಾರ್ಯವಾಗಲಿದೆ. ಬಸ್‌ಗಳನ್ನು ಸ್ಥಳಾಂತರ ಮಾಡುವುದು ನಂತರ ಅದನ್ನು ರದ್ದು ಮಾಡುವುದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗುತ್ತದೆ. ಗಿರಣಿ ಚಾಳ ಮಾರ್ಗವಾಗಿ ಹೊಸ ಬಸ್ ನಿಲ್ದಾಣಕ್ಕೆ ತೆರಳಿದರೆ ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಆದರೆ ಇಂಡಿ ಪಂಪ್ ಬಳಿ ಪ್ರಯಾಣಿಕರನ್ನು ಇಳಿಸುವುದು ತುಂಬಾ ಸಮಸ್ಯೆಯಾಗಿತ್ತು.
ಶ್ರೀನಿವಾಸ ಪೂಜಾರಿ, ಪ್ರಯಾಣಿಕ
ಹೇಮರಡ್ಡಿ ಸೈದಾಪುರ