ಹುಬ್ಬಳ್ಳಿ: ತೀವ್ರ ಮಳೆಯಿಂದ ಕೆಸರುಗದ್ದೆಯಂತೆ ಆಗಿದ್ದ ರಸ್ತೆಗಳೀಗ ಧೂಳುಮಯವಾಗಿವೆ. ಸಾರ್ವಜನಿಕರು ಓಡಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ನೀಲಿಜಿನ್ ರಸ್ತೆಯ ನಿವಾಸಿಗಳ ಪಾಡಂತೂ ದೇವರಿಗೆ ಪ್ರೀತಿ.
Advertisement
ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇದೀಗ ಕೊಂಚ ಮಳೆ ಕಡಿಮೆಯಾಗುತ್ತಿದ್ದಂತೆ ವಾಹನ ಸವಾರರ ಅನುಕೂಲಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಮೊದಲ ಆದ್ಯತೆ ನೀಡಿದೆ. ಕೆಲವೊಂದು ರಸ್ತೆಗಳಲ್ಲಿ ವೆಟ್ಮಿಕ್ಸ್, ಕಟ್ಟಡದ ತ್ಯಾಜ್ಯ ಬಳಸಿಕೊಂಡು ಗುಂಡಿ ಮುಚ್ಚುತ್ತಿರುವುದರಿಂದ ಇದೀಗ ಬರೀ ಧೂಳು ರಾರಾಜಿಸುತ್ತಿದೆ. ಮಳೆರಾಯ ಗುಂಡಿ ನಿರ್ಮಾಣ ಮಾಡಿದರೆ ಮಹಾನಗರ ಪಾಲಿಕೆ ಜನತೆಗೆ ಧೂಳು ನೀಡುತ್ತಿದೆ ಎಂದು ಶಾಪ ಹಾಕುವಂತಾಗಿದೆ. ಲಾರಿ ಅಥವಾ ಬಸ್ ಹಿಂದೆ ಹೊರಟರೆ ಮುಖಕ್ಕೆ ಧೂಳು ರಾಚುತ್ತಿದೆ. ಕೆಲ ರಸ್ತೆಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿರುವುದರಿಂದ ಧೂಳು ಸೇವಿಸಿಕೊಂಡೇ ಓಡಾಡುವಂತಾಗಿದೆ.
Related Articles
ನೀಲಿಜಿನ್ ರಸ್ತೆಯನ್ನು ಸಿಆರ್‌ಎಫ್ ಯೋಜನೆಯಡಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ ಶೆಟ್ಟರ ಹಿಂದೆಯೇ ಭರವಸೆ ನೀಡಿದ್ದರು. ಇನ್ನೇನು ಕಾಂಕ್ರೀಟ್ ರಸ್ತೆ ನಿರ್ಮಾಣವಾಗೇಬಿಟ್ಟಿತು ಎಂದು ಸ್ಥಳೀಯರು ನಿರೀಕ್ಷೆಯಲ್ಲಿದ್ದರು. ಆದರೆ ಜನಪ್ರತಿನಿಧಿಗಳು ನೀಡಿದ ಆಶ್ವಾಸನೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಈ ರಸ್ತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ನೀಲಿಜಿನ್ ರಸ್ತೆ ಅಭಿವೃದ್ಧಿ ಚರ್ಚೆ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ. ಗುಂಡಿ ಬಿದ್ದಾಗ ವೆಟ್ಮಿಕ್ಸ್, ನಂತರ ಒಂದಿಷ್ಟು ಡಾಂಬರ್ ಸುರಿಯಲಾಗುತ್ತಿದೆ. ಶಾಶ್ವತ ಪರಿಹಾರವಾಗಿ ಉತ್ತಮ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಮನವಿ, ಹೋರಾಟ ಎಲ್ಲಾ ಮುಗಿದಿದೆ. ನಮ್ಮ ಗೋಳು ಯಾರ ಮುಂದೆ ಹೇಳಬೇಕು. ಸಂಜೆಯಾಗುವುದರೊಳಗೆ ಅಂಗಡಿಯಲ್ಲಿ ಕೆಜಿಗಟ್ಟಲೆ ಧೂಳು ಸಂಗ್ರಹವಾಗುತ್ತಿದೆ.• ಸುಜಿತ್ ಜೈನ್,
ನೀಲಿಜಿನ್ ರಸ್ತೆ ವ್ಯಾಪಾರಿ
ಹಿಂದೆ ರಸ್ತೆತಡೆ ನಡೆಸಿದ ನಂತರ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಅಧಿಕಾರಿಗಳು ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಏಳೆಂಟು ತಿಂಗಳಲ್ಲಿ ಹಾಕಿದ ಡಾಂಬರ್ ಸಂಪೂರ್ಣ ಕಿತ್ತು ಹೋಯಿತು. ಮೊನ್ನೆ ಸುರಿದ ಮಳೆಗೆ ಒಂದೊಂದು ಅಡಿ ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಅವುಗಳನ್ನು ಮುಚ್ಚಲು ಕಡಿ ಹಾಕಿದ್ದೇ ತಡ ಇಡೀ ರಸ್ತೆ ಧೂಳಿನಿಂದ ತುಂಬಿದೆ. ಕಣ್ಣು, ಮೂಗಿನಲ್ಲಿ ಬರೀ ಧೂಳು.
•ಶೇಖರಯ್ಯ ಮಠಪತಿ,
ಅಧ್ಯಕ್ಷ, ಆಟೋ ಚಾಲಕರ-ಮಾಲೀಕರ ಸಂಘ
•ಶೇಖರಯ್ಯ ಮಠಪತಿ,
ಅಧ್ಯಕ್ಷ, ಆಟೋ ಚಾಲಕರ-ಮಾಲೀಕರ ಸಂಘ