ಗಂಗಾವತಿ :ತಾನು ಚಿಕ್ಕಂದಿನಲ್ಲಿ ಒಂದರಿಂದ ಏಳನೇ ತರಗತಿ ಕಲಿತ ಶಾಲೆಯಲ್ಲಿ ತಮ್ಮ ಮಕ್ಕಳೊಂದಿಗೆ ತಿರುಗಾಡಿ ಶಿಕ್ಷಕರನ್ನು ಕಂಡು ಕ್ಷೇಮ ವಿಚಾರಿಸಿ ಹುಬ್ಬಳ್ಳಿಯ ಶಾಸಕ ಪ್ರಸಾದ್ ಅಬ್ಬಯ್ಯ ಸಂತೋಷಪಟ್ಟರು.
ಶಾಸಕ ಪ್ರಸಾದ್ ಅಬ್ಬಯ್ಯ ಅವರ ತಂದೆ ಗಂಗಾವತಿಯಲ್ಲಿ ಆಹಾರ ನಿರೀಕ್ಷಕರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಗಂಗಾವತಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದರು.
ಈ ಸಂದರ್ಭದಲ್ಲಿ ನಗರದ ಹಿರೇಜಂತಕಲ್ ನ ಸರಕಾರಿ ಹಿರಿಯ ಮಾದರಿ ಯ ಶಾಲೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಒಂದರಿಂದ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.ಆಗ ಶಾಲೆಯ ಪ್ರಧಾನ ಮಂತ್ರಿಯಾಗಿದ್ದ ಪ್ರಸಾದ್ ಅಬ್ಬಯ್ಯ ಇಂದು ಹುಬ್ಬಳ್ಳಿ ನಗರದ ಮೀಸಲು ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದಾರೆ.ತಾವು ಕಲಿತ ಶಾಲೆಯನ್ನು ನೆನಪಿಟ್ಟುಕೊಂಡು ತಮ್ಮ ಮಕ್ಕಳೊಂದಿಗೆ ಮತ್ತು ಕೆಲವು ಸ್ನೇಹಿತರೊಂದಿಗೆ ಹಿರೇಜಂತಕಲ್ ಶಾಲೆಗೆ ಆಗಮಿಸಿ ಪ್ರತಿ ತರಗತಿಯನ್ನ ವೀಕ್ಷಣೆ ಮಾಡಿ ಪ್ರಸ್ತುತ ಇರುವ ಎಲ್ಲಾ ಶಿಕ್ಷಕ ವರ್ಗವನ್ನು ಗೌರವಿಸಿದರು.
ತಮಗೆ ಕಲಿಸಿದ ಗುರುಗಳನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಂದಿನ ದಿನಗಳನ್ನು ಮೆಲುಕು ಹಾಕಿದರು. ಶಾಲೆಯ ಎಲ್ಲಾ ಕೋಣೆಗಳಿಗೂ ವೀಕ್ಷಣೆ ಮಾಡಿ ತಾವು ಕಲಿತ ಸಂದರ್ಭದಲ್ಲಿ ಇದ್ದ ಶಿಕ್ಷಕ ಶಿಕ್ಷಕಿಯರ ನ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನ ನೆನೆದು ಕೆಲವು ಸಂತೋಷದ ಕ್ಷಣಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.ಶಾಲೆಯ ಪರವಾಗಿ ಮತ್ತು ಸ್ನೇಹಿತರ ಪರವಾಗಿ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಪ್ರಸಾದ ಅಬ್ಬಯ್ಯ ಮಾತನಾಡಿ ತಾವು ಕಲಿತ ಶಾಲೆಯನ್ನು ಯಾರೂ ಸಹ ಮರೆಯಬಾರದು ಕಲಿಸಿದ ಗುರುಗಳನ್ನು ಸ್ನೇಹಿತರನ್ನು ಮರೆಯಬಾರದು ಉನ್ನತ ಸ್ಥಾನಕ್ಕೇರಲು ಇವರೆಲ್ಲ ಕಾರಣೀಕರ್ತರಾಗಿದ್ದಾರೆ ಅವರನ್ನು ಸದಾ ಸ್ಮರಿಸಬೇಕು.ತಮ್ಮ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸುಮಾರು 5ನೂರು ಕೋಟಿಯಷ್ಟು ಹಣವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಖರ್ಚು ಮಾಡಲಾಗಿದೆ ಹಿರೇಜಂತಕಲ್ ನ ಶಾಲೆ ಯನ್ನು ಮಾದರಿ ಮಾಡಲು ಯೋಜನೆಯನ್ನು ರೂಪಿಸಿ ನನಗೆ ಕಳುಹಿಸಿದರೆ ಶಿಕ್ಷಣ ಸಚಿವರ ಜತೆ ಮಾತನಾಡಿ ಅಗತ್ಯ ಸೌಕರ್ಯ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಸಾದ ಅಬ್ಬಯ್ಯ ಅವರ ಗೆಳೆಯರಾದ ಪ್ರಸನ್ನ ಇಸ್ಮಾಯಿಲ್ ಗಂಗಾವತಿ ಚಾರಣ ಬಳಗದ ಡಾಕ್ಟರ್ ಶಿವಕುಮಾರ ಮಾಲಿಪಾಟೀಲ್
ಅವರು ಉಪಸ್ಥಿತರಿದ್ದರು.