ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದವರನ್ನು ಸಾರಿಗೆ ಸಂಸ್ಥೆಗಳ ಬಸ್‌ಗಳ ಮೂಲಕ ರವಿವಾರ ರಾತ್ರಿ ನಗರಕ್ಕೆ ಕರೆತರಲಾಯಿತು. ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದವರನ್ನು ಗೋಕುಲ ರಸ್ತೆಯ ಹೊಸ ಬಸ್‌ನಿಲ್ದಾಣಕ್ಕೆ ಕರೆ ತರಲಾಯಿತು. ಒಟ್ಟು 16 ಬಸ್‌ಗಳಲ್ಲಿ ಸುಮಾರು 500 ಜನರು ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾತ್ರಿ 9:50ಕ್ಕೆ ಮೊದಲ ಬಸ್ ನಗರಕ್ಕೆ ಆಗಮಿಸಿತು.
ಪ್ರತಿಯೊಬ್ಬರ ಪರೀಕ್ಷೆ: ಬೆಂಗಳೂರಿನಿಂದ ಆಗಮಿಸಿದ ಪ್ರತಿಯೊಬ್ಬರನ್ನು ನಿಲ್ದಾಣದಲ್ಲಿಯೇ ತಪಾಸಣೆ ಮಾಡಲಾಯಿತು. ಪಿಪಿಇ ಕಿಟ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಪ್ರತಿಯೊಬ್ಬರ ಸಂಪೂರ್ಣ ಮಾಹಿತಿ ಪಡೆದು ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಯಿತು. ಹೋಂ ಕ್ವಾರಂಟೈನ್ ಮುಗಿಯುವವರೆಗೂ ಹೊರಗಡೆ ಸಂಚಾರ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಜಿಲ್ಲಾಡಳಿತದ ವತಿಯಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಆಹಾರ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿತ್ತು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಾಜ ಕಲ್ಯಾಣ ಹಾಸ್ಟೆಲ್‌ಗಳಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನೂ ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಕೆಲ ಜನರು ಮಾಹಿತಿ ಕೊರತೆಯಿಂದ ನಗರಕ್ಕೆ ಬಂದಿದ್ದನ್ನುಅಧಿಕಾರಿಗಳು ಪತ್ತೆ ಹಚ್ಚಿ ಸದ್ಯಕ್ಕೆ ಇಲ್ಲೇ ಉಳಿದುಕೊಳ್ಳಬೇಕು. ಜಿಲ್ಲಾಡಳಿತದ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕರ ಬೆಲ್ಲದ ಭೇಟಿ: ಶಾಸಕ ಅರವಿಂದ ಬೆಲ್ಲದ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಗುರುದ್ವಾರ ಫೌಂಡೇಶನ್ ವತಿಯಿಂದ ಪ್ರಯಾಣಿಕರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ವಲಸೆ ಕಾರ್ಮಿಕರ ನೋಡಲ್ ಅಧಿಕಾರಿ ಪುರುಷೋತ್ತಮ್, ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಡಿಡಿಪಿಐ ಹಂಚಾಟೆ, ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ್, ಡಿಟಿಒ ಅಶೋಕ ಪಾಟೀಲ, ಪಾಲಿಕೆ ವೈದ್ಯಾಧಿಕಾರಿ
ಡಾ| ಪ್ರಭು ಬಿರಾದಾರ, ಗೋಕುಲ ಠಾಣೆ ಪೊಲೀಸರು ಇದ್ದರು.