ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 20 ವರ್ಷಗಳ ರಾಜಕೀಯವನ್ನು ಕಟ್ಟಿಕೊಟ್ಟಿರುವ ಡಾ| ಕೆ.ಎಸ್.ಶರ್ಮಾ ಅವರ ಪುಸ್ತಕ ಭಾರತೀಯ ರಾಜಕೀಯದ ಎರಡು ದಶಕದ ಚರಿತ್ರೆಯನ್ನು ಕೂಲಂಕುಷವಾಗಿ ವಿಮರ್ಶಿಸಿದ ಆಕರ ಗ್ರಂಥವಾಗಿದೆ ಎಂದು ಕರ್ನಾಟಕ ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಹರೀಶ ರಾಮಸ್ವಾಮಿ ಹೇಳಿದರು.
ಪುರೋಗಾಮಿ ಪ್ರಕಾಶನ ಹೊರತಂದಿರುವ ಡಾ| ಕೆ.ಎಸ್. ಶರ್ಮಾ ರಚಿಸಿದ ‘ಮುಖ್ಯಮಂತ್ರಿ-ಪ್ರಧಾನ ಮಂತ್ರಿ ನರೇಂದ್ರ ಮೋದಿ: ಧೋರಣೆಗಳ-ಕಾರ್ಯಕ್ರಮಗಳ ಕ್ಷ-ಕಿರಣ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಎರಡು ದಶಕದ ರಾಜಕೀಯವನ್ನು 130 ಪ್ರಬಂಧಗಳ ಮೂಲಕ ಪ್ರಮುಖ ಘಟನಾವಳಿಗಳನ್ನು ತೀಕ್ಷ್ಣವಾಗಿ ವಿಮರ್ಷಿಸಿದ್ದಾರೆ. ಇದೊಂದು ಕೇವಲ ಪುಸ್ತಕವಾಗಿರದೇ ರಾಜಕೀಯ ಕ್ಷೇತ್ರದ ಉತ್ತಮ ಗ್ರಂಥವಾಗಿದೆ ಎಂದರು.
ಮಾನವ ಹಕ್ಕುಗಳ ಹೋರಾಟಗಾರ ದಿವಾಕರ್ ನಾರಾಯಣ ಮಾತನಾಡಿ, ಇಂದು ದೇಶದ ಜನತೆ ಅನುಭವಿಸುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪ್ರಚಲಿತ ವ್ಯವಸ್ಥೆ ಕಾರಣವಾಗಿದ್ದು, ಈ ವ್ಯವಸ್ಥೆ ಬದಲಿಸಲು ಕ್ರಾಂತಿಕಾರಿ ಹೋರಾಟಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ| ಕೆ.ಎಸ್. ಕೌಜಲಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಈ ಪುಸ್ತಕದಲ್ಲಿ ಭಾರತೀಯ ದಂಡಸಂಹಿತೆಯಲ್ಲಿ ದೇಶದ್ರೋಹ ಅಪರಾಧ ಕುರಿತಾದ ಕಲಂ ತಿದ್ದುಪಡಿ ಮಾಡಬೇಕೆಂಬ ಅಂಶ, ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಪ್ರಧಾನಿ ಮೋದಿ ಸರಕಾರ ತಳೆದ ನಿಲುವು ಹೇಗೆ ನ್ಯಾಯಾಂಗೀಯ ವ್ಯವಸ್ಥೆಯನ್ನು ಕಾರ್ಯಾಂಗ ತನ್ನ ಅಧೀನದಲ್ಲಿ ಇರಿಸಿಕೊಳ್ಳಬೇಕೆಂಬ ಪ್ರಯತ್ನಗಳು ವಿಫಲವಾಗಿರುವುದು ಸೇರಿದಂತೆ ದೇಶದ ರಾಜಕೀಯ ಬಗ್ಗೆ ಹೊಸ ಬೆಳಕು ಚೆಲ್ಲುವಂತಿದೆ. ಶರ್ಮಾ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾಗಿದ್ದಾದರೂ ಅವರಿಗೆ ಸೂಕ್ತ ಸ್ಥಾನಮಾನಗಳು ದೊರೆಯದಿರುವುದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಹೋರಾಟಗಾರ ಡಾ| ಕೆ.ಎಸ್. ಶರ್ಮಾ, ನರೇಂದ್ರ ಮೋದಿಯವರು ಕಳೆದ ಇಪ್ಪತ್ತು ವರ್ಷಗಳಲ್ಲಿ ಅನುಸರಿಸಿರುವ ರಾಜಕೀಯ ಪಥದ ಧೋರಣೆಗಳ ಹಾಗೂ ಕಾರ್ಯಕ್ರಮಗಳ ಕ್ಷ-ಕಿರಣವಾಗಿ ಈ ಕೃತಿಯನ್ನು ರಚಿಸಿದ್ದು, ಇಂದಿನ ಸಮಾಜದ ವ್ಯವಸ್ಥೆಗೆ ಯಾವ ರೋಗ ಅಂಟಿದೆ ಎಂಬುದನ್ನು ತಿಳಿಯಬಹುದಾಗಿದೆ. ತಜ್ಞರು ಹಾಗೂ ದೇಶದ ಪ್ರಜೆಗಳು ಅಂಟಿರುವ ರೋಗವನ್ನು ಗುಣಪಡಿಸುವ ಹೊಣೆಗಾರರಾಗಿದ್ದಾರೆ ಎಂದು ಹೇಳಿದರು.
ತಮಿಳುನಾಡಿನ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಪೊನ್ನಪ್ಪ ಚಂದ್ರನ್ ಮಾತನಾಡಿದರು. ಡಾ| ಗಾಯತ್ರಿ ದೇಶಪಾಂಡೆ ಅವರು ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರೊ| ರವೀಂದ್ರ ಶಿರೋಳ್ಕರ್ ನಿರ್ವಹಿಸಿದರು. ಬಿ. ಜಯದೇವರಾಜೆ ಅರಸು ವಂದಿಸಿದರು.