ಕಡು ಬಡವರು, ನಿರಾಶ್ರಿತರಿಗೆ ಒಂದು ಹೊತ್ತಿನ ಊಟ ನೀಡುವ ಮೂಲಕ ಹುಬ್ಬಳ್ಳಿ ನಗರದ ಕರಿಯಪ್ಪ , ಮಾದರಿಯಾಗಿದ್ದಾರೆ. ತಾವು ದುಡಿದ ಹಣದಲ್ಲಿ ಒಂದಷ್ಟು ಮೊತ್ತವನ್ನು ಇಂಥ ಸಮಾಜ ಸೇವೆಗೆ ಮೀಸಲಿಟ್ಟಿರುವ ಅವರು, ಪ್ರತಿದಿನ 30 ಜನಕ್ಕೆ ಊಟ ಹಾಕುತ್ತಿದ್ದಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಈಗಲೂ ಬಾಡಿಗೆ ಮನೆಯನ್ನೇ ನಂಬಿರುವ ಕರಿಯಪ್ಪ , ಬಡವರೂ ಕೂಡ ಸೇವೆ ಮಾಡಬಹುದು ಅನ್ನೋದಕ್ಕೆ ಮಾದರಿಯಾಗಿದ್ದಾರೆ.
ಹೆಗಲಲ್ಲಿ ಒಂದು ಬ್ಯಾಗ್. ಅದರಲ್ಲಿ ಒಂದಷ್ಟು ಬಿಸ್ಕೆಟ್ ಪ್ಯಾಕೆಟ್‌ಗಳು, ನೀರು, ಎರಡು ಮೂರು ತಿಂಡಿ ಪಾಕೆಟ್. ಕೈಯಲ್ಲೊಂದು ಕಿಟ್. ಅದರಲ್ಲೊಂದಷ್ಟು ಬಟ್ಟೆ-ಬರೆ, ಶೇವಿಂಗ್ ಸೆಟ್- ಇಷ್ಟೆಲ್ಲ ಹಿಡಿದುಕೊಂಡಿರುವ ವ್ಯಕ್ತಿ ಏನಾದರೂ ಕಂಡರೆ ಖಂಡಿತ ಅವರು ಬೇರಾರೂ ಅಲ್ಲ, ಕರಿಯಪ್ಪ ಶಿರಹಟ್ಟಿಯವರೇ. ಹುಬ್ಬಳ್ಳಿ, ಲಕ್ಷ್ಮೇಶ್ವರ ಸುತ್ತಮುತ್ತ ಇವರು ಸಂಚಾರ ಮಾಡುತ್ತಿರುತ್ತಾರೆ. ಆಗಾಗ, ಭಿಕ್ಷುಕರು, ಮಾನಸಿಕ ಅಸ್ವಸ್ಥರ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಎಲ್ಲೇ ಹೋದರೂ ಇವರ ಹೆಗಲಿಗೆ ಜೋಳಿಗೆ ಅಂತೂ ಇದ್ದೇ ಇರುತ್ತದೆ. ಹಾಗಂತ, ಅವರ ಬಳಿ ಇರುವ ಪರಿಕರಗಳೆಲ್ಲವೂ ಅವರಿಗಾಗಿ ಅಂದುಕೊಳ್ಳಬೇಡಿ. ಬಡವರು, ನಿರ್ಗತಿಕರು, ಮಾನಸಿಕ ಅಸ್ವಸ್ಥರಿಗಾಗಿ.
ದೀನ ಸ್ಥಿತಿಯಲ್ಲಿ ಯಾರೇ ಕಂಡರು, ತಾವೇ ಅವರ ಬಳಿಗೆ ಹೋಗಿ, ಯೋಗ ಕ್ಷೇಮ ವಿಚಾರಸಿವಿಚಾರಿಸುವ ಕರಿಯಪ್ಪ, ಊಟ ಕೊಟ್ಟು ಬರುತ್ತಾರೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾವೇ ಕತ್ತರಿ ಹಿಡಿದು, ಕಟಿಂಗ್ ಮಾಡುತ್ತಾರೆ. ಅಲ್ಲೇನಾದರೂ ನೀರು ಸಿಕ್ಕರೆ ಸ್ನಾನವನ್ನೂ ಮಾಡಿಸಿ, ಊಟವನ್ನು ತಿನ್ನಿಸಿ ಬರುವುದು ಉಂಟು.
ಈಯಪ್ಪ ಏಕೆ ಹೀಗೆ? ಅಂತ ಕೇಳಬೇಡಿ. ಕರಿಯಪ್ಪ ಇರೋದೇ ಹೀಗೆ. ಕರಿಯಪ್ಪ ಶಿರಹಟ್ಟಿಯವರು, ತಮ್ಮ ತಂದೆಯ ಹೆಸರಿನಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ತೆರೆದಿದ್ದಾರೆ. ಇದೇನು ಹಣ ಮಾಡುವುದಕ್ಕಲ್ಲ. ಈ ಮೂಲಕ ಬಡ ಜನರ ಬದುಕಿಗೆ ನೆರವಾಗಲು. ತಂದೆ ಪೌರಕಾರ್ಮಿಕರಾಗಿದ್ದವರು. ಆಗ ಬಡತವನ್ನು ತಳಮಟ್ಟದಲ್ಲಿ ಕಂಡವರು ಕರಿಯಪ್ಪ. ಹೀಗಾಗಿ, ಸಂಸ್ಥೆಯ ಮೂಲಕ 15 ವರ್ಷಗಳಿಂದ ಈ ಸಮಾಜಮುಖೀ ನಡಿಗೆಯನ್ನು ಪ್ರಾರಂಭಿಸಿದ್ದಾರೆ. ಹುಬ್ಬಳಿ ನಗರದಲ್ಲಿನ ನಿರ್ಗತಿಕರಿಗೆ ಇವರೇ ಗಾಡ್‌ಫಾದರ್. ಅನ್ನ ನೀಡುವುದಲ್ಲದೇ ರಾಜ್ಯದ ಹಲವು ಕಡೆ ಇವರ ಕಾರ್ಯ ಗಮನ ಸೆಳೆದಿದೆ. ಕರಿಯಪ್ಪವನರ ಬಗಲಲ್ಲಿ ಸದಾ ಒಂದು ಚೀಲ ಇರುವುದು ಕೂಡ ಇದೇ ಕಾರಣಕ್ಕೆ. ಸಾಮಾನ್ಯವಾಗಿ ನಾವಾದರೆ, ಆ ಚೀಲದಲ್ಲಿ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ಇಟ್ಟುಕೊಂಡಿರುತ್ತೇವೆ. ಇವರು ಹಾಗಲ್ಲ. ಚೀಲದಲ್ಲಿ ನಿರ್ಗತಿಕರಿಗೆ ಕೊಡಲು ಆಹಾರದ ಪೊಟ್ಟಣ, ತಿಂಡಿ ತಿನಿಸು, ಕೊಬ್ಬರಿ ಎಣ್ಣೆ, ಶೇವಿಂಗ್ ಸೆಟ್, ಬಿಸ್ಕೆಟ್ಸ್, ಬಟ್ಟೆಗಳು ಮುಂತಾದ ವಸ್ತುಗಳನ್ನು ತುಂಬಿಕೊಂಡಿರುತ್ತಾರೆ. ಪ್ರಯಾಣದ ವೇಳೆ, ದಾರಿ ಮಧ್ಯೆ ನಿರ್ಗತಿಕರು ಕಂಡರೆ ತಕ್ಷಣವೇ ಸ್ಪಂದಿಸುತ್ತಾರೆ. ಅವರ ಮೈಮೇಲಿದ್ದ ಕೊಳಕು ಬಟ್ಟೆಯನ್ನು ಯಾವ ಹಿಂಜರಿಕೆ ಇಲ್ಲದೇ ಇವರೇ ತೆಗೆದು ಶುಚಿಗೊಳಿಸುತ್ತಾರೆ. ಅಂಗಹೀನರಾಗಿದ್ದರಂತೂ ಕೈತುತ್ತು ಮಾಡಿ ಸ್ವತಃ ತಾವೇ ತಿನಿಸುತ್ತಾರೆ. ಇವರ ಹೆಂಡತಿ ಸುನಂದ ಗಂಡನ ನೆರವಿಗೆ ನಿಂತಿದ್ದಾರೆ.
ಪ್ರತಿದಿನ ಹುಬ್ಬಳ್ಳಿಯ ಬಸ್‌ಸ್ಟ್ಯಾಂಡ್, ರೈಲ್ವೇಸ್ಟೇಷನ್, ಕಾರ್ಪೋರೇಷನ್, ಹಳೇ ಬಸ್‌ಸ್ಟ್ಯಾಂಡ್, ಗೋಕುಲ ರೋಡ್… ಹೀಗೆ, ಎಲ್ಲೆಲ್ಲಿ ನಿರ್ಗತಿಕರು ಕಾಣುತ್ತಾರೆಯೋ, ಅಲ್ಲಿಗೆಲ್ಲ ಹೋಗಿ, ಊಟ ಕೊಡುವುದೂ ಉಂಟು. ಊಟವನ್ನು ಹೆಂಡತಿ ಮನೆಯಲ್ಲಿಯೇ ಸಿದ್ಧ ಪಡಿಸಿಕೊಡುತ್ತಾರೆ.
ಪ್ರತಿದಿನ ಕರಿಯಪ್ಪ ಕನಿಷ್ಠ 30 ಜನರ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ. ಅವರು ಎಲ್ಲೇ ಇದ್ದರೂ, ಎಲ್ಲೋ ಹೋದರೂ, ಈ ಕಾಯಕ ಮಾತ್ರ ನಿಲ್ಲುವುದಿಲ್ಲ. ಇದಕ್ಕೆ ಅಗತ್ಯವಾದ ಖರ್ಚನ್ನು ತಾವೇ ಹಾಕುತ್ತಾರೆ. ಯಾರ ಬಳಿಯೂ ಹಣ ಕೇಳುವ ಪರಿಪಾಠ ಇಟ್ಟುಕೊಂಡಿಲ್ಲ. ಯಾರಾದರೂ, ಹಣ ಕೊಡಲು ಬಂದರೆ, “ಅದೇ ಹಣದಲ್ಲಿ ನೀವು ಇಂಥದೇ ಕೆಲಸ ಶುರು ಮಾಡಿ’ ಅಂತಾರೆ. ಹಿಂದೆ, ಕರಿಯಪ್ಪ ವೃತ್ತಿಯಲ್ಲಿ ಡ್ರೈವರ್ ಆಗಿದ್ದರು. ಈಗ ಅದನ್ನು ತೊರೆದು, ಮನೆಯಲ್ಲಿ ಪುಟ್ಟ ಹೋಟೆಲ್ ನಡೆಸುತ್ತಾರೆ. ಚಪಾತಿ, ರೊಟ್ಟಿ ಮೈಸೂರ್ ಪಾಕಿನಂತೆ ಬಿಕರಿಯಾಗುತ್ತದೆ. ಅದರಿಂದಲೇ ಜೀವನ, ಅದರಿಂದಲೇ ಸಮಾಜ ಸೇವೆ. ಕರಿಯಪ್ಪ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಕೆಲಸವನ್ನರಸಿ ಬಂದವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಹಸಿವೆಯಿಂದ ಕಂಗಾಲಾಗಿರುವರ ಪಾಲಿನ ಆಪದಾºಂಧವ.
ದಂಪತಿಯದ್ದು ಸ್ವಂತ ಮನೆ ಇಲ್ಲ. ಆನಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹೋಟೆಲ್‌ನಲ್ಲಿ ಬಂದ ಆದಾಯದಲ್ಲಿ ಮನೆ ಖರ್ಚು ಭರಿಸಿ ಉಳಿದ ದುಡ್ಡಿನಲ್ಲಿ ಈ ಸಮಾಜ ಕಾರ್ಯ ಮಾಡುತ್ತಿದ್ದಾರೆ. ಇವರಿಗೆ ಸ್ವಂತ ಜಮೀನಾಗಲಿ, ಸೂರಾಗಲಿ ಇಲ್ಲ. ಎಷ್ಟು ಇದ್ದರೂ ಸಾಲದು ಇನ್ನೂ ಬೇಕು..! ನಾನು ನನ್ನ ಕುಟುಂಬ ಚೆನ್ನಾಗಿ ಇದ್ದರೆ ಸಾಕು.! ಅನ್ನೋ ಈ ಕಾಲದಲ್ಲಿ ಸಮಾಜಮುಖೀಯಾಗಿ ಕೆಲಸ ಮಾಡುವ ಈ ದಂಪತಿ ವಿಶೇಷವಾಗಿ ಕಾಣುತ್ತಾರೆ.
“ಸಮಾಜ ಸೇವೆಯನ್ನು ಹಣವಿರುವವರು ಮಾತ್ರ ಮಾಡಬೇಕು ಅನ್ನೋ ಭ್ರಮೆ ಬೇಡ. ಬಡವರು, ಬಡವರಿಗಾಗಿ ಈ ರೀತಿ ಕೂಡ ಸೇವೆ ಮಾಡಬಹುದು ಅಂತ ತೋರಿಸುವುದಕ್ಕಾಗಿಯೇ ನಾನು ಈ ಕೆಲಸ ಶುರು ಮಾಡಿರುವುದು. ನನಗೇನು ಸಿಕ್ಕಾಪಟ್ಟೆ ಆದಾಯ ಇಲ್ಲ. ಗಳಿಕೆಯಲ್ಲಿ ಉಳಿಸಿ ಈ ಕೆಲಸ ಮಾಡುತ್ತಿದ್ದೇನೆ. ಬಡತನ, ಹಸಿವಿನ ಬಗ್ಗೆ ಭಾಷಣ ಮಾಡಿದರೆ ಹೊಟ್ಟೆ ತುಂಬುವುದಿಲ್ಲ. ಅದಕ್ಕೆ ನಾವೇ ಫೀಲ್ಡಿಗೆ ಇಳಿಯೋದು ಒಳ್ಳೆಯದು’ ಅಂತಾರೆ ಕರಿಯಪ್ಪ. ಕರಿಯಪ್ಪನವರ ಕಾರ್ಯವನ್ನು ನೋಡಿ, ಎಂಥ ಒಳ್ಳೇ ಕೆಲ್ಸ ಮಾಡ್ತಾ ಇದ್ದಾರೆ ಅಂತ ಯಾರಾದರು ಹಣ ಕೊಡಲು ಮುಂದಾದರೆ, “ಏನೂ ಇಲ್ಲದ ನಾನೇ ಇಷ್ಟೆಲ್ಲಾ ಮಾಡ್ತಿರಬೇಕಾದರೆ, ಎಲ್ಲೋ ಇರೋ ನೀವ್ಯಾಕೆ ಮಾಡಕ್ಕಾಗಲ್ಲ’ ಅಂತ ಕೇಳುವ ಮೂಲಕ ಅವರೂ ಸಮಾಜ ಸೇವೆಯಲ್ಲಿ ತೊಡಗಲು ಸ್ಫೂರ್ತಿ ತುಂಬುತ್ತಾರಂತೆ.
ನಾಮದೇವ ಕಾಗದಗಾರ