Advertisement

ಹುಬ್ಬಳ್ಳಿ: ಬೆಳ್ಳಿಹಬ್ಬಕ್ಕೆ ಇನ್ನೂ ಕೂಡಿ ಬಾರದ ಕಾಲ

06:14 PM Mar 14, 2023 | Team Udayavani |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳ್ಳಿ ಹಬ್ಬಕ್ಕೆ ಕಾಲ ಕೂಡಿ ಬರುವ ಲಕ್ಷಣಗಳು ಕಾಣುತ್ತಿಲ್ಲ. ಮೂರು ತಿಂಗಳ ನಂತರ ಮುಖ್ಯಮಂತ್ರಿಗಳು ಸಮಯ ದೊರೆತು ಅಂತಿಮ ಸಿದ್ಧತೆ ಹಂತದಲ್ಲೇ ರದ್ದಾಗಿದ್ದು, ಸಾರಿಗೆ ನೌಕರರ ವೇತನ ಪರಿಷ್ಕರಣೆ ಕಗ್ಗಂಟೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

Advertisement

ವಾಯವ್ಯ ಸಾರಿಗೆ ಸಂಸ್ಥೆ ರೂಪಗೊಂಡು 2022 ನವೆಂಬರ್‌ 1ಕ್ಕೆ 25 ವಸಂತಗಳು ಕಳೆದಿವೆ. ಈ ಸುಸಂದರ್ಭವನ್ನು ಸಂಭ್ರಮದಿಂದ ಆಚರಿಸಲು ಸಂಸ್ಥೆ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಮುಖ್ಯಮಂತ್ರಿಗಳು ಬಂದರೆ ನಷ್ಟದಲ್ಲಿರುವ ಸಂಸ್ಥೆಗೆ ಒಂದಿಷ್ಟು ನೆರವು ದೊರೆಯಬಹುದೆನ್ನುವ ನಿರೀಕ್ಷೆ ಇವರದು. ಹೀಗಾಗಿಯೇ ಸಂಸ್ಥೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಸಮಯ ಕೇಳಿದ್ದರು. ಪಕ್ಷ ಹಾಗೂ ಸರಕಾರದ ಕಾರ್ಯಕ್ರಮಗಳ ನಡುವೆ ಸಮಯ ಸಿಕ್ಕಿರಲಿಲ್ಲ. ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ 10 ದಿನಗಳ ಕಾಲ ಇಲ್ಲಿಯೇ ಇರುತ್ತಾರೆ ಆಗ ಕಾರ್ಯಕ್ರಮ ಮಾಡಬಹುದೆನ್ನುವ ಯೋಜನೆ ಕೂಡ ಕೈಗೂಡಲಿಲ್ಲ.

ಕೊನೆಯ ಕ್ಷಣದಲ್ಲಿ ರದ್ದಾಯಿತು: ಮೂರು ತಿಂಗಳ ನಂತರ ಮಾ.10ರಂದು ಕಾರ್ಯಕ್ರಮದ ಸಂಪೂರ್ಣ ಯೋಜನೆ ಸಿದ್ಧಗೊಂಡಿತ್ತು. ಆಹ್ವಾನ ಪತ್ರಿಕೆ ಸಿದ್ಧತೆ, ವೇದಿಕೆ ತಯಾರಿ ಸೇರಿದಂತೆ ಎಲ್ಲಾ ಕಾರ್ಯಗಳು ಅಂತಿಮಗೊಂಡಿದ್ದವು. ಇನ್ನೇನು ಕಾರ್ಯಕ್ರಮಕ್ಕೆ ಕಾಲ ಕೂಡಿ ಬಂತು ಎನ್ನುವಾಗಲೇ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸದ ಕಾರಣ ಮುಂದೂಡಲಾಯಿತು. ವಿಪರ್ಯಾಸವೆಂದರೆ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ಆವರಣದಲ್ಲಿ ವೇದಿಕೆ ತಯಾರಿ ಅರ್ಧ ಮುಗಿದಿದ್ದನ್ನು ತೆರವುಗೊಳಿಸಲಾಯಿತು. ಇದಕ್ಕೆ ಕಾರಣ ಮಾ.8 ರಂದು ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ವೇತನ ಪರಿಷ್ಕರಣಾ ಸಭೆ ಫಲಪ್ರದವಾಗದೆ ಮುಕ್ತವಾಗಿತ್ತು. ಇದೇ ಕಾರಣದಿಂದ ಕಾರ್ಯಕ್ರಮ ಪುನಃ ಮುಂದೂಡಲಾಯಿತು ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.

ಕಾರ್ಯಕ್ರಮಗಳ ತಯಾರಿ: ರಜತ ಮಹೋತ್ಸವ ಸಂದರ್ಭದಲ್ಲಿ ಸಂಸ್ಥಾಪನಾ ದಿನಾಚರಣೆ. ಇದರ ಪ್ರಯುಕ್ತ ಮುಖ್ಯಮಂತ್ರಿಗಳಿಂದ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ವಿತರಣೆ, ಅಂತರ್‌ ವಿಭಾಗೀಯ ಕ್ರೀಡಾಕೂಟಗಳ ಆಯೋಜನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವಿಮಾ ಯೋಜನೆಗೆ ಚಾಲನೆ, ಚಾಲಕರ ವಾಹನ ಚಾಲನಾ ಪಥದ ಉದ್ಘಾಟನೆ, ಧಾರವಾಡ ನಗರ ಸಾರಿಗೆ ಘಟಕದ ಉದ್ಘಾಟನೆ, ಇ-ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಗೆ ಚಾಲನೆ ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಇವುಗಳಲ್ಲಿ ಎಲ್ಲಾ ಯೋಜನೆಗಳು ಕಾರ್ಯಗತವಾಗಿದ್ದು, ಬಹುಮಾನ ವಿತರಣೆ ಹಾಗೂ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪಕದ ವಿತರಣೆ ಮಾತ್ರ ಬಾಕಿ ಉಳಿದಿವೆ.

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸವಾಲು: ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಡಾ| ಬಸವರಾಜ ಕೆಲಗಾರ, ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಇಬ್ಬರೂ ಮುಖ್ಯಮಂತ್ರಿಗಳ ತವರು ಜಿಲ್ಲೆಯ ನಾಯಕರು. ಇನ್ನು ಉಪಾಧ್ಯಕ್ಷ ಮ್ಯಾಗೇರಿ ಮುಖ್ಯಮಂತ್ರಿಗಳ ತವರು ಕ್ಷೇತ್ರ ಅಲ್ಲದೆ ಆಪ್ತರು. ಹೀಗಾಗಿ ಮುಖ್ಯಮಂತ್ರಿಗಳಾಗಿ ಮೂರು ತಿಂಗಳಿಂದ ಮುಂದೂಡಲ್ಪಟ್ಟಿರುವ ರಜತ ಮಹೋತ್ಸವ ಅತೀ ಶೀಘ್ರದಲ್ಲೇ ನಡೆಸುವುದು ಇಬ್ಬರಿಗೂ ಸವಾಲಾಗಿದ್ದು, ಮುಖ್ಯಮಂತ್ರಿಗಳ ಸಮಯ ಪಡೆದು ಕಾರ್ಯಕ್ರಮ ಮುಗಿಸುವುದು ಪ್ರತಿಷ್ಠೆಯಾಗಿ ಪರಿಣಮಿಸಿದ್ದಂತೂ ಸತ್ಯ. ಈ ತಿಂಗಳ ಕೊನೆಯ ವಾರದಲ್ಲಿ ನೀತಿ ಸಂಹಿತೆ ಜಾರಿಯಾಗುವ ವದಂತಿಗಳಿದ್ದು, ಈ ವರ್ಷದಲ್ಲಾದರೂ ಕಾರ್ಯಕ್ರಮ ನಡೆಯಲಿದೆ ಎನ್ನುವ ಅನುಮಾನ ನೌಕರರಲ್ಲಿ ಮೂಡುವಂತಾಗಿದೆ.

Advertisement

ವೇತನ ಪರಿಷ್ಕರಣೆಯ ಮುಜುಗರ
ಕಳೆದ ಮೂರು ವರ್ಷಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗಿಲ್ಲ. ಇದಕ್ಕಾಗಿ ಹಲವು ಹೋರಾಟಗಳು, ಮನವಿ ಪತ್ರ ಸಲ್ಲಿಕೆ ನಡೆಯುತ್ತಿವೆ. ಫೆ.27ರಂದು ನಾಲ್ಕು ನಿಗಮಗಳ ಅಧ್ಯಕ್ಷರು, ಸಾರಿಗೆ ಸಂಸ್ಥೆಗಳ ವಿವಿಧ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ಕೈಗಾರಿಕೆ ಒಪ್ಪಂದ(ವೇತನ ಪರಿಷ್ಕರಣೆ) ಮಾತುಕತೆಗೆ ಕರೆಯಲಾಗಿತ್ತು. ಮಾ.8ರಂದು ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆಯಲಿದ್ದ ಸಭೆ ಫಲಪ್ರದವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಮಾ.10 ರಂದು ಕಾರ್ಯಕ್ರಮ ಸಿದ್ಧತೆ ಜೋರಾಗಿದ್ದವು.

ಆದರೆ ಸಾರಿಗೆ ಸಚಿವ ಶೇ.10 ವೇತನ ಹೆಚ್ಚಳ ಘೋಷಣೆ ಮಾಡಿದರು. ಆದರೆ ಜಂಟಿ ಕ್ರಿಯಾ ಸಮಿತಿ ಇದನ್ನು ಒಪ್ಪದಿದ್ದಾಗ ಮಾತುಕತೆ ವಿಫಲವಾಯಿತು. ಇದೇ ಕಾರಣಕ್ಕಾಗಿಯೇ ರಜತ ಮಹೋತ್ಸವ ಮುಂದೂಡಲು ಕಾರಣ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್‌ ತಿಂಗಳಿಂದ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ಬಾರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಯಾವುದೇ ಜಿಲ್ಲೆಯಲ್ಲಿ ಕಾರ್ಯಕ್ರಮವಿದ್ದರೂ ಇಲ್ಲಿನ ನಿವಾಸಕ್ಕೆ ಬಂದು ಹೋಗದ ಉದಾಹರಣೆಗಳಿಲ್ಲ. ಹೀಗಿರುವಾಗ ಸಂಸ್ಥೆಯ ಒಂದು ಗಂಟೆಯ ಕಾರ್ಯಕ್ರಮ ಸಮಯ ನೀಡುವುದಿಲ್ಲವೇ? ವೇತನ ಪರಿಷ್ಕರಣೆಯ ಮಾತುಕತೆ ಕೈಗೂಡಲಿಲ್ಲ. ಈ ಮುಜುಗರದಿಂದ ಬಂದಿಲ್ಲ ಎಂಬುದು ಸಂಸ್ಥೆಯ ನೌಕರರ ಅಂಬೋಣವಾಗಿದೆ.

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಭೆಗೂ ಸಂಸ್ಥೆಯ ರಜತ ಮಹೋತ್ಸವ ಮುಂದೋಗಿರುವುದಕ್ಕೂ ಸಂಬಂಧವಿಲ್ಲ. ಮಾ.10 ರಂದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸಮಯ ನೀಡಿದ್ದರು. ಆದರೆ ಅವರಿಗೆ ಇತರೆ ಕಾರ್ಯಕ್ರಮಗಳ ಒತ್ತಡ ಹೆಚ್ಚಾಗಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಆದಷ್ಟು ಬೇಗ ರಜತ ಮಹೋತ್ಸವಕ್ಕೆ ಮುಖ್ಯಮಂತ್ರಿಗಳ ದಿನಾಂಕ ಪಡೆದು ಕಾರ್ಯಕ್ರಮ ಮಾಡುತ್ತೇವೆ.
ಡಾ| ಬಸವರಾಜ ಕೆಲಗಾರ,
ಅಧ್ಯಕ್ಷರು, ವಾಕರಸಾ ಸಂಸ್ಥೆ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next