Advertisement

ಹುಬ್ಬಳ್ಳಿ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಎರಡನೇ ಬಹುಮಾನ

03:50 PM Jun 26, 2017 | Team Udayavani |

ಹುಬ್ಬಳ್ಳಿ: ಟೈ ಗ್ಲೋಬಲ್‌ ಆಯೋಜಿಸಿದ್ದ ಯುವ ಉದ್ಯಮಿಗಳ ಜಾಗತಿಕ  ಮಟ್ಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯಾರ್ಥಿಗಳ ತಂಡ ವಾಯು ಮಾಲಿನ್ಯ ತಡೆ ಉಪಕರಣದ ಪ್ರದರ್ಶನ ನೀಡಿ, ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದೊಂದಿಗೆ 2000 ಡಾಲರ್‌ ಬಹುಮಾನ ಬಾಚಿಕೊಂಡಿದೆ.

Advertisement

ಜಾಗತಿಕ ಮಟ್ಟದಲ್ಲಿ ಶನಿವಾರ ರಾತ್ರಿ ಅಮೆರಿಕಾದಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಒಟ್ಟು 19 ತಂಡಗಳು ಪಾಲ್ಗೊಂಡಿದ್ದವು. ಹುಬ್ಬಳ್ಳಿ ವಿದ್ಯಾರ್ಥಿಗಳ ತಂಡ ವೀಡಿಯೊ ಕಾನ್ಫರೆನ್ಸ್‌ ಮೂಲಕ ತಾವು ತಯಾರಿಸಿದ ಏರೋಕ್ಲೀನೆಸ್‌ ಉಪಕರಣ ಪ್ರದರ್ಶಿಸಿದರಲ್ಲದೆ, ವಾಹನಗಳ ಮೇಲೆ ಇದನ್ನು ಅಳವಡಿಸಿಕೊಂಡು ವಾಯು ಮಾಲಿನ್ಯವನ್ನು ತಕ್ಕ ಮಟ್ಟಿಗೆ ತಡೆಯಬಹುದು ಎಂಬುದನ್ನು ವಿಶ್ಲೇಷಿಸುವ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು.

ಯುವ ಉದ್ಯಮಿಗಳ ಜಾಗತಿಕ ಮಟ್ಟದ ಸ್ಪರ್ಧೆಯ ಫ‌ಲಿತಾಂಶ ಶನಿವಾರ ತಡರಾತ್ರಿ ಹೊರಬಿದ್ದಿದ್ದು, ಇದರಲ್ಲಿ ಅಟ್ಲಾಂಟಾ ತಂಡ ಮೊದಲ ಬಹುಮಾನದೊಂದಿಗೆ 4000 ಡಾಲರ್‌ ಬಹುಮಾನ ಪಡೆದರೆ, ಹುಬ್ಬಳ್ಳಿ ವಿದ್ಯಾರ್ಥಿಗಳ ತಂಡ ಎರಡನೇ ಸ್ಥಾನದ ಸಾಧನೆ ತೋರಿದೆ.

8ರಿಂದ 12ನೇ ತರಗತಿಯೊಳಗಿನ ವಿದ್ಯಾರ್ಥಿಗಳಾದ ಮಾನ್ಸಿ ಮೆಳವಂಕಿ, ಹರೀಶ ನಾಯ್ಕ, ಶ್ರೇಯಸಿ ಪಾಟೀಲ,ಅನನ್ಯಾ ನಿಡವಣಿ, ಪವನ್‌ ಕರ್ನಮ್‌,  ಸಾಕ್ಷಿ ಮಹಾಜನ್‌, ಮಾನವಿ ಟಾಕೆ, ಅಂಜಲಿ ನೀರಲಗಿ, ಆದಿತ್ಯ ಅಮೀನಗಡ ಅವರ ತಂಡ ಟೈ ಹುಬ್ಬಳ್ಳಿ ಘಟಕದ ಮಾರ್ಗದರ್ಶನ ಹಾಗೂ ಪ್ರೋತ್ಸಾಹದೊಂದಿಗೆ ವಿಶ್ವದ ವಿವಿಧ ದೇಶಗಳ ಪೈಪೋಟಿಯನ್ನು ಮೆಟ್ಟಿ ನಿಂತು ಹುಬ್ಬಳ್ಳಿ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸುವ ಸಾಧನೆ ತೋರಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂದೀಪ ಬಿಡಸಾರಿಯಾ, ಗೌತಮ್‌ ಓಸ್ತ್ವಾಲ್‌, ವಿಜಯ ಮಾನೆ, ಶಶಿಧರ ಶೆಟ್ಟರ ಸಂತಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next