Advertisement

ಹುಬ್ಬಳ್ಳಿ: ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ; ಕಿಮ್ಸ್‌ ವೈದ್ಯರ ಸಾಧನೆ

02:39 PM Mar 18, 2023 | Team Udayavani |

ಹುಬ್ಬಳ್ಳಿ: ಕಿಡ್ನಿ ಕೊಡುವವರು ಮತ್ತು ತೆಗೆದುಕೊಳ್ಳುವವರ ರಕ್ತದ ಗುಂಪಿನ ಹೊಂದಾಣಿಕೆಯಾದರೆ ಮಾತ್ರ ಕಿಡ್ನಿ ಜೋಡಣೆ ಸಾಮಾನ್ಯ ಪ್ರಕ್ರಿಯೆ. ಆದರೆ, ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡುವಲ್ಲಿ ಕಿಮ್ಸ್‌ನ ವೈದ್ಯರು ಯಶಸ್ವಿಯಾಗಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಈ ತರಹದ ಅಪರೂಪದ ಕಿಡ್ನಿ ಕಸಿ (ಎಬಿಒ) ನಡೆಸಿದ ಶ್ರೇಯಸ್ಸು ಕಿಮ್ಸ್‌ಗೆ ಸಲ್ಲುತ್ತದೆ ಎಂದು ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಿಡ್ನಿ ಕಸಿಯಲ್ಲಿ ಮೂತ್ರಶಾಸ್ತ್ರ ಮತ್ತು ರೋಗಶಾಸ್ತ್ರ ವಿಭಾಗದ ವೈದ್ಯರ ಪರಸ್ಪರ ಸಹಕಾರದೊಂದಿಗೆ ಯುವಕನಿಗೆ ಹೊಸ ಬದುಕು ಸಿಕ್ಕಂತಾಗಿದೆ ಎಂದರು. ಕಿಡ್ನಿ ಕಸಿ ಕುರಿತು ಮಾಹಿತಿ ನೀಡಿದ ನೆಪ್ರೋಲಜಿ ವಿಭಾಗದ ಮುಖ್ಯಸ್ಥ ಡಾ| ವೆಂಕಟೇಶ ಮೊಗೇರ ಮಾತನಾಡಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 25 ವರ್ಷದ ಯುವಕ ಕಳೆದ 10 ತಿಂಗಳಿನಿಂದ ಡಯಾಲಿಸೀಸ್‌ನಲ್ಲಿದ್ದ.

48 ವರ್ಷದ ಈತನ ತಾಯಿ ಪದ್ಮಾವತಿ ಕಿಡ್ನಿ ಕೊಡಲು ಒಪ್ಪಿದ್ದರು. ಆದರೆ, ರೋಗಿ ಎ ಪಾಸಿಟಿವ್‌, ಇವರ ತಾಯಿ ಬಿ ಪಾಸಿಟಿವ್‌ ರಕ್ತ ಹೊಂದಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಲಾಯಿತು. ಮಾ. 6ರಂದು ಸುಮಾರು ಮೂರು ತಾಸುಗಳ ಶಸ್ತ್ರಚಿಕಿತ್ಸೆ ಮೂಲಕ ರೋಗಿಗೆ ಕಿಡ್ನಿ ಅಳವಡಿಸಲಾಯಿತು. ಕಿಡ್ನಿ ರೋಗಿಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಲಾಯಿತು.

36-40 ತಾಸುಗಳಲ್ಲಿ ರೋಗಿಯು ಚೇತರಿಕೆ ಕಂಡರು. ವಾರಕ್ಕೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು. ಡಾ| ಮಲಗೌಡ ಪಾಟೀಲ, ಡಾ| ವಿವೇಕ ಗಾಣಿಗೇರ, ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥ ರವಿರಾಜ ರಾಯ್ಕರ, ಡಾ| ಜೈದೀಪ ರಟಕಲ್‌, ಡಾ| ಮಂಜು ಪ್ರಸಾದ ಜಿ.ಬಿ., ಡಾ| ಸಂಪತ್ತಕುಮಾರ ಎನ್‌.ಜಿ., ಡಾ| ಚೇತನ ಹೊಸಕಟ್ಟಿ, ಡಾ| ಮಾಧುರಿ ಕುರಡಿ, ಡಾ| ಶೀತಲ್‌ ಹಿರೇಗೌಡರ, ಡಾ| ರೂಪಾ, ಪೆಥಾಲಜಿ ಮುಖ್ಯಸ್ಥ ಡಾ| ಪುರುಷೋತ್ತಮ ರೆಡ್ಡಿ ಮತ್ತು ಶಿವಾನಂದ ಹೊನಕೇರಿ ಅವರನಒಳಗೊಂಡ ತಂಡ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ರೆಡ್ಡಿ, ಡಾ.ಚೇತನ ಹೊಸಕಟ್ಟಿ, ಶಿವಾನಂದ ಹೊನಕೇರಿ ಸೇರಿದಂತೆ ವೈದ್ಯರು, ಪ್ರಾಧ್ಯಾಪಕರು ಇದ್ದರು.

Advertisement

ಸಂಬಂಧಿಕರಿಗೆ ಸ್ಪೆಷಲ್‌ ಪಾಸ್‌
ಕಿಮ್ಸ್‌ನಲ್ಲಿ ಐದು ಮಹಡಿಗಳ ನೂತನ ತುರ್ತು ನಿಗಾ ಘಟಕ ಸ್ಥಾಪಿಸಲಾಗಿದೆ. ಅದನ್ನು ಚುನಾವಣಾ ನೀತಿ ಜಾರಿಗೊಳ್ಳುವ ಮುನ್ನ ಉದ್ಘಾಟಿಸಲು ಹಾಗೂ ಆಸ್ಪತ್ರೆಯಲ್ಲಿನ ಒಳರೋಗಿಗಳ ಭೇಟಿಗೆ ಹೆಚ್ಚುವರಿಯಾಗಿ ಬರುವ ಅವರ ಪ್ರತಿ ಸಂಬಂಧಿಕರಿಗೆ 50 ರೂ. ಶುಲ್ಕದಂತೆ ಸ್ಪೆಷಲ್‌ ಪಾಸ್‌ ಮಾಡಲು ಯೋಚಿಸಲಾಗಿದೆ. ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಇನ್ನು 2-3 ವಾರಗಳಲ್ಲಿ ಜಾರಿಗೊಳಿಸಲಾಗುವುದು. ಕಳೆದ ವರ್ಷ ಔಷಧಿಗಾಗಿ 30 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಹೇಳಿದರು.

ಕಳೆದ ಒಂದು ವರ್ಷದಿಂದ ಕಿಮ್ಸ್‌ನಲ್ಲಿ 9 ರೋಗಿಗಳಿಗೆ ಕಿಡ್ನಿ ಕಸಿ
ಮಾಡಲಾಗಿದೆ. ಇನ್ನೂ 9 ಜನರು ಕಾಯುತ್ತಿದ್ದಾರೆ. 60 ಜನರು ನೋಂದಣಿ ಮಾಡಿಸಿದ್ದಾರೆ. ಕಿಡ್ನಿ ಕಸಿಗೆ ಹೆಚ್ಚಿನ ವೆಚ್ಚ ತಗಲುತ್ತದೆ. ಆದರೆ, ಸರ್ಕಾರ ಕೇವಲ 2 ಲಕ್ಷ ರೂ. ನಿಗದಿಪಡಿಸಿದೆ. ಇದನ್ನು ಹೆಚ್ಚಿಸಬೇಕು. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಹೆಚ್ಚುವರಿ ಮೊತ್ತವನ್ನು ಕಿಮ್ಸ್‌ನಿಂದ ಭರಿಸಲಾಗುತ್ತಿದೆ.
ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next