ಹುಬ್ಬಳ್ಳಿ: ಹಸಿವಿನಿಂದ ನರಳುತ್ತಿರುವವರಿಗೆ ಕರಿಯಪ್ಪ ಶಿರಹಟ್ಟಿ ತನ್ನ ಸಂಸ್ಥೆ ಮೂಲಕ ಅನ್ನ ನೀಡುತ್ತಿರುವುದು ಸಣ್ಣ ಕೆಲಸವಲ್ಲ. ದುಡಿಮೆ ಒಂದಿಷ್ಟು ಪಾಲನ್ನು ನಿರ್ಗತಿಕರ ಹಸಿವು ನೀಗಿಸಲು ಖರ್ಚು ಮಾಡುತ್ತಿರುವುದು ಅವರ ದೊಡ್ಡ ಗುಣ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ವತಿಯಿಂದ “ಹಸಿದವರ ಅನ್ನ ಜೋಳಿಗೆ’ ಉದ್ಘಾಟನೆ ಹಾಗೂ ಪ್ರಚಾರಾರ್ಥಕ್ಕಾಗಿ ನಿರ್ಮಿಸಿರುವ ವೆಬ್ ಸೈಟ್ ಹಾಗೂ ಪ್ರಚಾರದ ವಾಹನಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಸೇವೆ ಮಾಡುವ ಅರ್ಹತೆ ಹಾಗೂ ಸಾಮರ್ಥ್ಯ ಸಾಕಷ್ಟು ಜನರಿಗೆ ಇರುತ್ತದೆ. ಆದರೆ ಸೇವೆ ಮಾಡುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ ಅಂತಹವರ ಸಾಲಿನಲ್ಲಿ ಕರಿಯಪ್ಪ ದಂಪತಿ ನಿಲ್ಲುತ್ತಾರೆ. ಇಂತಹ ಕಾರ್ಯ ಶ್ಲಾಘನೀಯಕ್ಕಿಂತ ದೊಡ್ಡದು. ಅವರ ಬಳಿ ಲಕ್ಷಾಂತರ ರೂಪಾಯಿಗಳಿಲ್ಲ. ಸಾಧಾರಣ ವ್ಯಕ್ತಿಯಾದರೂ ಅಸಾಧಾರಣ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸ್ವಾರ್ಥ ಬಿಟ್ಟು ಸೇವೆ ಮಾಡುವ ಅವರ ಕಾರ್ಯಕ್ಕೆ ಮಹಾನಗರ ಪಾಲಿಕೆ, ಶಾಸಕರು, ಸಮಾಜ ಗುರುತಿಸಿ ಕೈಲಾಗುವ ಸಹಾಯ ಮಾಡಬೇಕು ಎಂದರು. ಪಾಲಿಕೆ ಮೇಯರ್ ವೀಣಾ ಬರದ್ವಾಡ ಅವರು ಹಸಿದವರ ಅನ್ನ ಜೋಳಿಗೆಗೆ ಚಾಲನೆ ನೀಡಿ, ಕರಿಯಪ್ಪ ಅವರು ಟ್ರಸ್ಟ್ ಮಾಡಿಕೊಂಡು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ.
ಪ್ರಜ್ಞಾವಂತರು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಪಾಲಿಕೆಯಿಂದ ಸಹಕಾರ ನೀಡಲಾಗುವುದು ಎಂದರು. ಪ್ರಚಾರದ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಪೌರ ಕಾರ್ಮಿಕನ ಮಗನಾಗಿರುವ ಕರಿಯಪ್ಪ ಇಂತಹ
ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಅನ್ನವನ್ನು
ಕೆಡಿಸಲಾಗುತ್ತಿದೆ. ದಿನನಿತ್ಯ ಎಲ್ಲ ಕಡೆ ಇಂತಹ ಘಟನೆಯನ್ನು ಕಾಣುತ್ತೇವೆ. ಈ ರೀತಿ ಬೇಕಾಬಿಟ್ಟಿ ಅನ್ನವನ್ನು ಕೆಡಿಸದೆ ಹಸಿದವರಿಗೆ ಮುಟ್ಟಿಸುವ ಕಾರ್ಯ ಮೆಚ್ಚುವಂತದ್ದು. ಸಮಾಜ ಕೂಡ ಅವರೊಂದಿಗೆ ನಿಲ್ಲಬೇಕು. ಕರಿಯಪ್ಪ ಅವರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಮಾಜಿ ಸಂಸದ ಐ.ಜಿ.ಸನದಿ, ಡಾ| ಆನಂದ ಪಾಂಡುರಂಗಿ, ದಾನಿಗಳಾದ ಚಂದ್ರಶೇಖರ ಅಮಿನಗಡ, ನಾಗರತ್ನ ಅಮ್ಮಿನಗಡ, ಚನ್ನಬಸಪ್ಪ ಧಾರವಾಡಶೆಟ್ಟರ, ಟ್ರಸ್ಟ್‌ನ ಕರಿಯಪ್ಪ ಶಿರಹಟ್ಟಿ, ವೆಂಕಟೇಶ ಇದ್ದರು.