ಹುಬ್ಬಳ್ಳಿ: ನಗರದಿಂದ ಹೈದರಾಬಾದ್ ಗೆ ಅಲೈಯನ್ಸ್ ಏರ್‌ವೇಸ್‌ನಿಂದ ಆರಂಭಿಸಲಾದ ನೇರ ವಿಮಾನಯಾನ ಸೇವೆಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಬುಧವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಅವಶ್ಯವಾದ ಭೂಸ್ವಾ ಧೀನ ಸೇರಿದಂತೆ ಇನ್ನಿತರೆ ಕಾರ್ಯವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ಅದು ಪೂರ್ಣಗೊಂಡರೆ ನಗರದಿಂದ ಬೋಯಿಂಗ್ ಸೇರಿದಂತೆ ಅದಕ್ಕಿಂತ ದೊಡ್ಡ ಪ್ರಮಾಣದ ವಿಮಾನಗಳ ಸೇವೆ ನೇರವಾಗಿ ದೇಶ-ವಿದೇಶಗಳಿಗೂ ದೊರೆಯಲಿದೆ ಎಂದರು.
ಹುಬ್ಬಳ್ಳಿ ನಿಲ್ದಾಣವು ನೈಟ್ ಲ್ಯಾಂಡಿಂಗ್, ವಿಜುವಲ್ ಲೈಟ್ಸ್, ರನ್‌ವೇ ಲೈಟ್ಸ್ ಹಾಗೂ ಕ್ಯಾಟ್ ವನ್ ಅಪ್ರೋಚ್, ಸ್ವಯಂ ಚಾಲಿತ ಲ್ಯಾಂಡಿಂಗ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯೊಂದಿಗೆ ಸುಸಜ್ಜಿತವಾದ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ದೊಡ್ಡ ಪ್ರಮಾಣದ ನಿಲ್ದಾಣವಾಗಿ ಬೆಳವಣಿಗೆ ಆಗುತ್ತಿದೆ. ಹುಬ್ಬಳ್ಳಿ-ಹೈದರಾಬಾದ್ ನಡುವೆ ವಿಮಾನಸೇವೆ ಅವಶ್ಯವಿತ್ತು. ಈ ಬಗ್ಗೆ ಹಲವು ತಿಂಗಳಿಂದ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ ಸಿಂಗ್ ಪುರಿಯವರ ವಿಶೇಷ ಪ್ರಯತ್ನದಿಂದ ಹೈದರಾಬಾದ್ ನಗರಕ್ಕೆ ವಾರದಲ್ಲಿ ಮೂರು ದಿನ ವಿಮಾನಯಾನ ಸೇವೆ ಆರಂಭವಾಗಿದೆ. ವಿಮಾನಯಾನಗಳ ಸಂಖ್ಯೆ ಆಧರಿಸಿ ಮುಂದಿನ ದಿನಗಳಲ್ಲಿ ವಾರದ ಎಲ್ಲ ದಿನವೂ ಇದರ ಸೇವೆ ವಿಸ್ತರಿಸಲಾಗುವುದು ಎಂದರು.
ಹುಬ್ಬಳ್ಳಿ-ಮಂಗಳೂರು ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಬೇಡಿಕೆ ಇದೆ. ಇದನ್ನು ಸಹ ಶೀಘ್ರ ಆರಂಭಿಸಲಾಗುವುದು. ಈಗಾಗಲೇ ನಗರದಿಂದ ಮುಂಬಯಿ, ಅಹಮದಾಬಾದ್, ಕೊಚ್ಚಿ, ಕೊಣ್ಣೂರ, ಗೋವಾಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ. ಕೊರೊನಾ ನಂತರದ ಸ್ಥಿತಿಗತಿ ನೋಡಿಕೊಂಡು ಇತರೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಟ್ರೂ ಜೆಟ್ ಮಾಲಿಕರೊಂದಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಮಾತುಕತೆ ನಡೆಸಲಾಗಿದೆ ಎಂದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ನಗರದ ವಿಮಾನ ನಿಲ್ದಾಣದಲ್ಲಿ 2600 ಮೀಟರ್ ರನ್ ವೇಯನ್ನು 3400 ಮೀಟರ್‌ಗೆ ವಿಸ್ತರಿಸಲು ನಿಲ್ದಾಣದ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದು ಮಾಸ್ಟರ್ ಪ್ಲಾನ್‌ದಲ್ಲೂ ಸೇರ್ಪಡೆಯಾಗಿದೆ. ಇದು ಕಾರ್ಯಗತವಾದ ಮೇಲೆ ನಿಲ್ದಾಣವು ಅಂತಾರಾಷ್ಟ್ರೀಯ ದರ್ಜೆಗೆ ತಲುಪುತ್ತದೆ.
ಮುಂದಿನ ದಿನಗಳಲ್ಲಿ ಹೊಸ ಟರ್ಮಿನಲ್ ಕಟ್ಟಡವು ವಿಸ್ತರಣೆಯಾಗಲಿದ್ದು, ಆಗ ನಗರದಿಂದ ಮಧ್ಯ ಪೂರ್ವ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಲಭ್ಯವಾಗಲಿದೆ ಎಂದರು. ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಠಾಕರೆ, ವಿಮಾನ ನಿಲ್ದಾಣ ಭದ್ರತಾ ಧಿಕಾರಿ ಜಗದೀಶ ಹಂಚಿನಾಳ, ಏರ್ ಇಂಡಿಯಾದ ಸ್ಥಳೀಯ ನಿಲ್ದಾಣದ ವ್ಯವಸ್ಥಾಪಕ ನಾಗೇಂದ್ರ ಕೆಂಪಯ್ಯ ಮೊದಲಾದವರಿದ್ದರು.