ಹುಬ್ಬಳ್ಳಿ: ಹುಬ್ಬಳ್ಳಿ ಹಲಗಿ ಹಬ್ಬ ಆರಂಭ ಶೂರತ್ವವಾಗಿದೆ. ಪ್ರತಿ ವರ್ಷ ವಿಜೃಂಭಣೆ ಆಚರಣೆಯೊಂದಿಗೆ ಹೆಚ್ಚಿನ ಪ್ರಚಾರ ಪಡೆಯುವಂತಾಗಲಿ ಎಂದು ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಬಮ್ಮಾಪುರ ಓಣಿ ಗುರುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ ಹಲಗಿ ಹಬ್ಬ-2017ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಈ ಹಬ್ಬದಲ್ಲಿ ಎಲ್ಲರೂ ಸಂಪೂರ್ಣ ಪಾಲ್ಗೊಳ್ಳುವ ಮೂಲಕ ಒಂದು ಉತ್ತಮ ಸಂಘಟನೆ ಮಾಡಬೇಕು. ಸಂಘಟನೆ ಪಕ್ಷಾತೀತವಾಗಿ ಮುಂದುವರಿಯಲಿ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಮದ್ಯಪಾನ ಮಾಡಿ ಬಂದು ಹಬ್ಬದ ಘನತೆ ಹಾಳು ಮಾಡುತ್ತಿರುವುದರಿಂದ ಕಾಮಣ್ಣ ಹಬ್ಬ ಎಂದರೆ ಎಲ್ಲರಿಗೂ ತಾತ್ಸಾರ ಮನೋಭಾವನೆ ಬಂದಿತ್ತು. ಆದರೆ ಕಳೆದ ವರ್ಷದಿಂದ ಹಲಗಿ ಹಬ್ಬ ಹೋಳಿ ಹಬ್ಬಕ್ಕೆ ಒಂದು ಹೊಸ ಮೆರಗು ತಂದುಕೊಡುತ್ತಿದೆ. ಹಲಗಿ ಹಬ್ಬವನ್ನು ಈ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಆಚರಣೆ ಮಾಡಬೇಕು.
ಇದಕ್ಕೆ ಬೇಕಾದ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ಹಲಗಿ ಹಬ್ಬದ ಸಂಯೋಜಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಳೆದ ವರ್ಷ ನಾಲ್ಕು ಜನರ ಮಧ್ಯೆ ಚರ್ಚೆಗೆ ಬಂದ ವಿಷಯವನ್ನು ಎಲ್ಲರ ಮುಂದಿಟ್ಟು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಬಾರಿ ಮಾರ್ಚ್ 14 ಮಧ್ಯಾಹ್ನ 3:00ಗಂಟೆಗೆ ಹಲಗಿ ಹಬ್ಬ ನಡೆಯಲಿದ್ದು, ಹೆಚ್ಚು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಸುಭಾಸಸಿಂಗ ಜಮಾದಾರ ಮಾತನಾಡಿದರು. ನಂತರ ನಡೆದ ಸಲಹೆ, ಸೂಚನೆ ಸಭೆಯಲ್ಲಿ ಗೋಪಾಲ ಬದ್ದಿ ಕಳೆದ ಬಾರಿ ಮೂರುಸಾವಿರಮಠದಿಂದ ಆರಂಭಗೊಂಡ ಹಲಗೆ ಹಬ್ಬ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು.
ಅದನ್ನು ಇನ್ನಿತರ ಪ್ರದೇಶಗಳಿಗೆ ಅಂದರೆ ಸಿದ್ಧಾರೂಢಸ್ವಾಮಿ ಮಠದಿಂದ ಆರಂಭಿಸಿ ಮೂರುಸಾವಿರಮಠದಲ್ಲಿ ಸಮಾಪ್ತಿ ಮಾಡುವ ಮೂಲಕ ಇಡೀ ನಗರಕ್ಕೆ ಪಸರಿಸುವಂತೆ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು. ಎಂ.ಆರ್. ಪಾಟೀಲ, ನಾಗೇಶ ಕಲುºರ್ಗಿ, ಈರಣ್ಣಾ ಜಡಿ, ರಂಗಾ ಬದ್ದಿ, ಶಂಕ್ರಪ್ಪ ಬಿಜವಾಡ, ರಾಜಶೇಖರ ಮೆಣಸಿನಕಾಯಿ, ಸತೀಶ ಶೇಜವಾಡಕರ, ರಾಮು ಮೂಲಗಿ, ಡಿ.ಕೆ. ಚವ್ಹಾಣ, ಗಣು ಜರತಾರಘರ, ಚನ್ನು ಹೊಸಮನಿ, ಪ್ರವೀಣ ಜೈನ್, ಸಂಗಮ ಹಂಜಿ, ರಾಜು ಕೋರ್ಯಾನಮಠ ಇದ್ದರು. ಶಿವು ಮೆಣಸಿನಕಾಯಿ ನಿರೂಪಿಸಿದರು. ದೀಪಕ ಮೆಹರವಾಡೆ ವಂದಿಸಿದರು.