ಹುಬ್ಬಳ್ಳಿ: ರೈತರು ಹಣದ ಬೆನ್ನು ಬಿದ್ದ ಕಾರಣದಿಂದ ದೇಶದಲ್ಲಿ ವಿದೇಶಿ ತಳಿ ಹಸುಗಳು ವಿಜೃಂಭಿಸುತ್ತಿದ್ದು, ಔಷಧ
ಗುಣವುಳ್ಳ ಹಾಲು ನೀಡುವ ದೇಸಿ ತಳಿ ಹಸುಗಳು ವಿನಾಶದತ್ತ ಸಾಗಿವೆ ಎಂದು ಮೂರುಸಾವಿರ ಮಠದ ಜಗದ್ಗುರು ಡಾ|
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಗೋ ಸೇವಾ ಗತಿವಿಧಿ ಮತ್ತು ಆರೋಗ್ಯ ಭಾರತಿ ಉತ್ತರ ಕರ್ನಾಟಕ ಪ್ರಾಂತ ಸಹಯೋಗದಲ್ಲಿ ರವಿವಾರ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪಂಚಗವ್ಯ ಆಯುರ್ವೇದ ಚಿಕಿತ್ಸಾ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜೆರ್ಸಿ, ಎಚ್‌ಎಫ್ ಹಸುಗಳ ಹಾಲು ಔಷಧಿಯ ಗುಣವಿಲ್ಲದ ಕ್ಯಾನ್ಸರ್ ಇನ್ನಿತರ ವ್ಯಾಧಿಗಳಿಗೆ ದಾರಿ ಮಾಡಿಕೊಡುವುದಾಗಿದೆ.
ದೇಸಿ ಹಸುಗಳ ಹಾಲು ಔಷಧೀಯ ಗುಣಗಳನ್ನು ಹೊಂದಿದ್ದು, ದೇಸಿ ಹಸುಗಳ ಉತ್ಪನ್ನಗಳೆಲ್ಲವೂ ಅಮೃತಶಕ್ತಿಯನ್ನು
ಹೊಂದಿವೆ. ಇಂತಹ ಹಸುಗಳನ್ನು ಸಾಕಲು ರೈತರು ಮುಂದಾಗಬೇಕು. ಕೃಷಿ ವಿವಿಗಳು ದೇಸಿ ಹಸುಗಳ ಬಗ್ಗೆ ಇನ್ನಷ್ಟು ಸಂಶೋಧನೆ ಕೈಗೊಳ್ಳುವ ಮೂಲಕ ಈ ಹಸುಗಳ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನಮ್ಮ ಪೂರ್ವಜರ ಬದುಕು ನೋಡಿದಾಗ ನಮ್ಮಲ್ಲಿ ಗೋವಿನ ಸಂಪತ್ತು ದೊಡ್ಡ ಪ್ರಮಾಣದಲ್ಲಿ ಇತ್ತು. ಇಂದು ದೇಸಿ ಗೋವುಗಳ ಜಾಗವನ್ನು ವಿದೇಶಿ ತಳಿ ಗೋವುಗಳು ಆಕ್ರಮಿಸಿಕೊಂಡಿದ್ದು, ಇದು ಬದಲಾಗಬೇಕಾಗಿದೆ. ರೈತರಲ್ಲಿ ಜಾಗೃತಿ ಮೂಡಿಸಲು ಇಂತಹ ಸಮಾವೇಶಗಳಿಗೆ ರೈತರು ಪಾಲ್ಗೊಳ್ಳುವಂತಾಗಬೇಕು. ಲೋಕ ಕಲ್ಯಾಣ ಹಾಗೂ ಪರೋಪಕಾರಿ ಕಾರ್ಯಗಳು ಹೆಚ್ಚುತ್ತಲೆ ಸಾಗಬೇಕು ಎಂದರು.
Related Articles
ವಿಚಾರ ಸಂಕಿರಣ ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಡಾ| ವಿಎಸ್‌ವಿ ಪ್ರಸಾದ ಮಾತನಾಡಿ, ಏನೆಲ್ಲ ಆಕ್ರಮಣಗಳು ನಡೆದರೂ ಇಂದಿಗೂ ದೇಶದಲ್ಲಿ ನಮ್ಮ ಪರಂಪರೆ, ಮೌಲ್ಯಗಳು ಉಳಿದಿವೆ ಎಂದರೆ ಅದಕ್ಕೆ ಆರೆಸ್ಸೆಸ್ ಕಾರಣ. ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತಂದು ನಿಲ್ಲಿಸುವಲ್ಲಿ ನಮ್ಮ ಪರಂಪರೆ, ಸಂಸ್ಕೃತಿ, ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ. ಸನಾತನ ಧರ್ಮದಲ್ಲಿ ಗೋಮಾತೆಗೆ ಅಗ್ರಸ್ಥಾನವಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿಯಲ್ಲಿ ಮುನ್ನಡೆಯಬೇಕು ಎಂದರು.
ಆರೆಸ್ಸೆಸ್ ಹಿರಿಯ ಮುಖಂಡ ಶ್ರೀಧರ ನಾಡಗೇರ, ಗುಜರಾತ ಸರಕಾರದ ಪಂಚಗವ್ಯ ಕ್ಲಿನಿಕಲ್ ರಜಿಸ್ಟ್ರಿ ಚೇರ್ಮನ್ ಡಾ| ಹಿತೇಶ ಜಾನಿ, ಗೋಸೇವಾ ಗತಿವಿಧಿ ರಾಷ್ಟ್ರೀಯ ಪ್ರಶಿಕ್ಷಣ ಪ್ರಮುಖ ರಾಘವನ್, ಬೀದರ ಎನ್‌ಕೆಜೆ ಆಯುರ್ವೇದ ಕಾಲೇಜು ಡೀನ್ ಡಾ| ವಿಜಯಕುಮಾರ ಬಿರಾದಾರ, ಆರೆಸ್ಸೆಸ್ ಧಾರವಾಡ ವಿಭಾಗ ಸಂಘ ಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಸಿ.ಬಿ. ರಡ್ಡಿ
ಇನ್ನಿತರರು ಇದ್ದರು. ಪ್ರಾಂತ ಪ್ರಶಿಕ್ಷಣ ಪ್ರಮುಖ ದತ್ತಾತ್ರೇಯ ಭಟ್ಟ ಸ್ವಾಗತಿಸಿದರು. ಆರೋಗ್ಯ ಭಾರತಿ ಪ್ರಾಂತ ಅಧ್ಯಕ್ಷ ಡಾ|
ಸಿದ್ಧನಗೌಡ ಪಾಟೀಲ ವಂದಿಸಿದರು.
ಸರಕಾರಗಳು ಸಹ ರೈತರಿಗೆ ಹಣದ ಹಪಹಪಿತನದ ಸನ್ನಿವೇಶ ಸೃಷ್ಟಿಸತೊಡಗಿವೆ. ಕೃಷಿ ವಿಶ್ವವಿದ್ಯಾಲಯಗಳೂ ಹೈನುಗಾರಿಕೆ ಸಂಬಂಧಿಸಿದಂತೆ ರೈತರಿಗೆ ತರಬೇತಿ ನೀಡುತ್ತಿದ್ದು, ಅಲ್ಲಿ ರೈತರಿಗೆ ವಿದೇಶಿ ತಳಿಗಳಾದ ಜೆರ್ಸಿ, ಎಚ್‌ಎಫ್ ಹಸುಗಳ ಸಾಕಣೆಗೆ ಪ್ರೇರಣೆ ನೀಡಲಾಗುತ್ತದೆ. ಹೆಚ್ಚು ಹಾಲು, ಅಧಿಕ ಲಾಭ ಎಂದು ಬಿಂಬಿಸಲಾಗುತ್ತಿದೆ. ಇದು ನಿಲ್ಲಬೇಕು.
*ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ,
ಮೂರುಸಾವಿರ ಮಠ, ಹುಬ್ಬಳಿ