Advertisement
ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಬೆಳಗ್ಗೆ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಟೈರ್ ಸುಟ್ಟ ಹೊಗೆಯಿಂದ ಮಹಿಳೆಯರಿಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆಯೂ ನಡೆಯಿತು. ಸಂಜೆ ವೇಳೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ಕಾಂಗ್ರೆಸ್-ಜೆಡಿಎಸ್‌ನ ನಾಯಕರೂ ಬೆಂಬಲ ವ್ಯಕ್ತಪಡಿಸಿದರು. ನಂತರ ಕೇಶವಕುಂಜಕ್ಕೆ ಮುತ್ತಿಗೆ ಯತ್ನವೂ ನಡೆಯಿತು. ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆಯ ಮಧ್ಯೆ ಕಲ್ಲುಗಳನ್ನು ಇಟ್ಟು ಗಾಜಿನ ಬಾಟಲಿಗಳನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಖಾಸಗಿ ಸಂಸ್ಥೆ ಬಸ್, ಕೋರ್ಟ್ ವೃತ್ತದಲ್ಲಿ ಆಟೋ ರಿಕ್ಷಾ ಹಾಗೂ ಮಿನಿ ಟೆಂಪೋಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಹಳೇ ಬಸ್‌ನಿಲ್ದಾಣದ ವಿಚಾರಣಾ ಕೊಠಡಿಯ ಗಾಜನ್ನು ಪುಡಿ ಮಾಡಿದ್ದಾರೆ. ಗಣೇಶ ಪೇಟೆಯ ಕ್ರಾಸ್‌ನಲ್ಲಿರುವ ಜನೆರಿಕ್ ಔಷಧ ಮಳಿಗೆಗೂ ಪ್ರತಿಭಟನಾಕಾರರು ಕಲ್ಲು ಎಸೆದು ಜಖಂಗೊಳಿಸಿದ್ದಾರೆ.