Advertisement

ಲೋಕಹಿತಕ್ಕೆ ದಶಮಾನೋತ್ಸವ ಸಂಭ್ರಮ

10:56 AM Feb 08, 2019 | |

ಹುಬ್ಬಳ್ಳಿ: ‘ಬಹಳ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ನಾವು ಅಂದುಕೊಂಡಿಲ್ಲ. ಸತ್‌ ಸಮಾಜ ನಿರ್ಮಾಣ, ಧರ್ಮ, ಸಂಸ್ಕೃತಿ, ಪರಂಪರೆಯ ಅಚ್ಚೊತ್ತುವ, ಆರ್ಥಿಕ ಸಬಲೀಕರಣ, ಮಕ್ಕಳ ಮನದಲ್ಲಿ ಸಂಸ್ಕಾರದ ಬೀಜ ಬಿತ್ತುವ, ಬಡವರ ಆರೋಗ್ಯಕ್ಕೆ ವೈದ್ಯಕೀಯ ನೆರವಿನಂತಹ ಪುಟ್ಟ ಹೆಜ್ಜೆ ಇರಿಸಿದ್ದೇವೆ..

Advertisement

‘ಹೀಗೆಂದು ಸಾರ್ಥಕ ಸೇವೆ-ಸಾಧನೆ, ಶ್ರಮದ ಬುತ್ತಿ ಬಿಚ್ಚಿಟ್ಟವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಲೋಕಹಿತ ಟ್ರಸ್ಟ್‌ ಕಾರ್ಯದರ್ಶಿ ಶ್ರೀಧರ ನಾಡಗೀರ ಅವರು.

ಸಂಘದ ಹಿರಿಯ ಪ್ರಚಾರಕ ಯಾದವರಾವ್‌ ಜೋಶಿ ಅವರದ್ದು ಮಾನವ ಸೇವೆ ಮಾಧವ ಸೇವೆ ಎಂಬುದಾಗಿತ್ತು. ಆ ನಿಟ್ಟಿನಲ್ಲಿ ಪುಟ್ಟ ಹೆಜ್ಜೆ ಇರಿಸಿದ್ದೇವೆ. ಸಂಘದ ಸ್ವಯಂ ಸೇವಕರಿಗೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರಮುಖ ಹಾಗೂ ಶ್ರದ್ಧಾ ಕೇಂದ್ರವಾಗಿರುವ ಕೇಶವ ಕುಂಜ ಹಾಗೂ ಲೋಕಹಿತ ಟ್ರಸ್ಟ್‌ ಸಾರ್ಥಕ ಸೇವೆಯೊಂದಿಗೆ ದಶಮಾನೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಟ್ರಸ್ಟ್‌ ಕೈಗೊಂಡ ಸೇವೆ, ಸಾರ್ಥಕ ಕಾರ್ಯಗಳು, ಮುಂದಿನ ಹೆಜ್ಜೆ ಕುರಿತಾಗಿ ‘ಉದಯವಾಣಿ’ಯೊಂದಿಗೆ ವಿವಿಧ ವಿಷಯ ಹಂಚಿಕೊಂಡರು.

ನಮ್ಮದು ಸಮಷ್ಠಿ ಚಿಂತನೆ, ಸಾಮೂಹಿಕ ಕಾರ್ಯ. ಸಂಘ ಮುಖ್ಯವೇ ವಿನಃ ವ್ಯಕ್ತಿ ಮುಖ್ಯ ಅಲ್ಲವೇ ಅಲ್ಲ. ಕಳೆದ 93 ವರ್ಷಗಳಿಂದ ಇದೇ ಸತ್‌ ಸಂಪ್ರದಾಯ, ಸ್ವಾರ್ಥ-ವೈಯಕ್ತಿಕ ಹಿತ ರಹಿತ ಸೇವೆ ಮುಂದುವರಿಸಿಕೊಂಡು ಬಂದಿದ್ದೇವೆ ಎಂದರು.

ಮಾನವ ಸೇವೆಯಲ್ಲೇ ಮಾಧವ ಸೇವೆ ತೃಪ್ತಿ: ಲೋಕಹಿತ ಟ್ರಸ್ಟ್‌ ಮಾನವ ಸೇವೆಯಲ್ಲೇ ಮಾಧವ ಸೇವೆ ತೃಪ್ತಿ ಕಾಣುತ್ತಿದೆ. ಬಡವರು, ಕೊಳಗೇರಿ ವಾಸಿಗಳಿಗೆ ಉತ್ತಮ ಆರೋಗ್ಯ ನಿಟ್ಟಿನಲ್ಲಿ 24 ಸ್ಲಂ ಸೇವಾ ಬಸ್ತಿಗಳನ್ನು ಆರಂಭಿಸಲಾಗಿದೆ. ಧನ್ವಂತರಿ ಸಂಚಾರಿ ವೈದ್ಯಕೀಯ ಚಿಕಿತ್ಸಾಲಯದ ಮೂಲಕ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಸಂಚಾರಿ ಚಿಕಿತ್ಸಾಲಯದಲ್ಲಿ ಒಬ್ಬರು ವೈದ್ಯರು ಇರುತ್ತಿದ್ದು, ಸಣ್ಣ ಪುಟ್ಟ ಕಾಯಿಲೆಗಳಿಗೆ ತಪಾಸಣೆ ಮಾಡಲಿದ್ದಾರೆ. ಜತೆಗೆ ದಾನಿಗಳ ನೆರವಿನಿಂದ ಜನರಿಗೆ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತದೆ. ವಿಶೇಷವಾಗಿ ಕೊಳಗೇರಿ ವಾಸಿ ಹಾಗೂ ಬಡ ಮಹಿಳೆಯರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

Advertisement

ಧನ್ವಂತರಿ ಸಂಚಾರಿ ಚಿಕಿತ್ಸಾಲಯ ಹಲವಾರು ವರ್ಷಗಳಿಂದ ಸೇವೆ ನೀಡುತ್ತಿದ್ದು, ಈ ಬಗ್ಗೆ ಜನರ ಅಭಿಪ್ರಾಯ ಕುರಿತು ಸಮೀಕ್ಷೆಗೆ ಮುಂದಾದಾಗ ಇದೊಂದು ಸರಕಾರದಿಂದ ದೊರೆತ ಸೌಲಭ್ಯ ಎಂದು ಬಹುತೇಕರು ಭಾವಿಸಿದ್ದರು. ಇದು ಆರೆಸ್ಸೆಸ್‌ನ ಲೋಕಹಿತ ಟ್ರಸ್ಟ್‌ನಿಂದ ನಡೆಯುತ್ತಿದೆ. ಸರಕಾರದ ನೆರವಿಲ್ಲದೆ, ದಾನಿಗಳ ಸಹಕಾರಿದಂದ ಉಚಿತ ಔಷಧಿ ನೀಡಲಾಗುತ್ತಿದೆ ಎಂಬ ವಿಷಯ ತಿಳಿದ ನಂತರ ಜನರಲ್ಲಿ ಅಚ್ಚರಿ ಮೂಡಿದ್ದು ಕಂಡುಬಂದಿತ್ತು. ಜನರನ್ನು ಕೇಶವ ಕುಂಜಕ್ಕೆ ಆಹ್ವಾನಿಸಿ, ಇಲ್ಲಿನ ಕಾರ್ಯಗಳ ಮಾಹಿತಿ ನೀಡಿಲ್ಲದೆ ನಮ್ಮ ಸಂಪ್ರದಾಯದಂತೆ ಮಾತೆಯರಿಗೆ ಉಡಿ ತುಂಬಲಾಯಿತು. ಮಾತೆಯರು, ಪುರುಷರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು.

ಸೇವಾ ಬಸ್ತಿಗಳಲ್ಲಿ ಮಧುಮೇಹ, ರಕ್ತದೊತ್ತಡ, ದಂತ-ನೇತ್ರ, ಮಹಿಳೆಯರ ವಿವಿಧ ರೋಗಗಳ ಬಗ್ಗೆ ತಪಾಸಣೆ ಮಾಡಲಾಗಿದೆ. ಮೂರ್‍ನಾಲ್ಕು ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ದೀರ್ಘಾವಧಿ ಹಾಗೂ ದೊಡ್ಡ ಪ್ರಮಾಣದ ಕಾಯಿಲೆ ಇರುವವರನ್ನು ತಜ್ಞ ವೈದ್ಯರ ಬಳಿ ಶಿಫಾರಸು ಮಾಡಲಾಗುತ್ತಿದ್ದು, ಸೇವಾ ದೃಷ್ಟಿಯಿಂದ ರಿಯಾಯ್ತಿ ಇಲ್ಲವೆ ಉಚಿತ ರೂಪದಲ್ಲೂ ಚಿಕಿತ್ಸೆ ದೊರೆಯಲಿದೆ.

ಮಾತೆಯರು ಸ್ವಾವಲಂಬಿಯಾದರೆ ಕುಟುಂಬ, ಕುಟುಂಬದಿಂದ ಸಮಾಜ ಹಾಗೂ ದೇಶ ಸ್ವಾವಲಂಬಿಗೆ ಉತ್ತಮ ಕೊಡುಗೆ ದೊರೆಯಲಿದೆ. ಈ ನಿಟ್ಟಿನಲ್ಲಿಯೇ ಲೋಕಹಿತ ಟ್ರಸ್ಟ್‌ ಮಹಿಳಾ ಸ್ವಾವಲಂಬನ ಕೇಂದ್ರ ಆರಂಭಿಸಿದ್ದು, ಸುಮಾರು 300ಕ್ಕೂ ಹೆಚ್ಚು ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡಿಸಲಾಗಿದೆ. ಹೊಲಿಗೆ ತರಬೇತಿ ಪಡೆದ ಮಹಿಳೆಯರು ಮಾಸಿಕ ಕನಿಷ್ಠ 3000-4000 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮ ವಿಕಾಸ ಯೋಜನೆ
ಕೃಷಿ ಸುಧಾರಣೆ, ಸಾವಯವ ಕೃಷಿಗೆ ಪ್ರೇರಣೆ, ದೇಸಿಯ ಜೀವನಶೈಲಿ, ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಪ್ರದಾಯದ ಮಹತ್ವದ ಕುರಿತಾಗಿ ಗ್ರಾಮೀಣ ಜನರಿಗೆ ಮಾಹಿತಿ ನೀಡಲಾಗುತ್ತದೆ. ರೈತರಿಗೆ ಮಾಸಿಕ ಕನಿಷ್ಠ 25 ಸಾವಿರ ರೂ. ಆದಾಯ ಸೃಷ್ಟಿಯ ಚಿಂತನೆ ಹೊಂದಲಾಗಿದ್ದು, ದೇಸಿ ಬೀಜಗಳನ್ನು ಉಳಿಸುವ ನಿಟ್ಟಿನಲ್ಲಿ ದೇಸಿಬೀಜ ಬ್ಯಾಂಕ್‌ಗೂ ಚಿಂತನೆ ನಡೆಸಲಾಗುವುದು.
• ಶ್ರೀಧರ ನಾಡಗೀರ, ಲೋಕಹಿತ ಟ್ರಸ್ಟ್‌ ಕಾರ್ಯದರ್ಶಿ

ಶಿಕ್ಷಣವೆಂದರೆ ಕೇವಲ ಎ ಬಿ ಸಿ ಡಿ ಅಷ್ಟೇ ಅಲ್ಲ
ಶಿಕ್ಷಣವೆಂದರೆ ಕೇವಲ ಎ,ಬಿ,ಸಿ,ಡಿ ಕಲಿಸುವ, ಕೇವಲ ಅಂಕ ಗಳಿಕೆಗೆ ಸೀಮಿತ ಗೊಳಿಸುವುದಲ್ಲ. ಶಿಕ್ಷಣ ಜೀವನ ಶಿಕ್ಷಣವಾಗಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸ್ವಾವಲಂಬನೆ ಭಾವನೆ ಮೂಡಬೇಕು. ಸುಸ್ಥಿರ ಜೀವನದ ಮನನವಾಗಬೇಕು. ಈ ನಿಟ್ಟಿನಲ್ಲಿ ನಮ್ಮದೇ ಸಣ್ಣ ಯತ್ನ ಕೈಗೊಂಡಿದ್ದೇವೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಮನೆ ಪಾಠದ ಜತೆಗೆ ದೇಶಭಕ್ತಿಗೀತೆ, ನೀತಿ ಕಥೆಗಳು, ಶ್ಲೋಕ-ವಚನಗಳ ಕಂಠಪಾಠ, ದೇಶಪ್ರೇಮದ ಮಾಹಿತಿ ನೀಡಲಾಗುತ್ತದೆ. ಈಗಾಗಲೇ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ ತಾಲೂಕುಗಳ ಗ್ರಾಮಗಳಲ್ಲಿ ಉಚಿತ ಮನೆ ಪಾಠ ಆರಂಭಿಸಲಾಗಿದೆ. ವಿದ್ಯಾವಿಕಾಸ, ಬಾಲ ಗೋಕುಲ, ಸಂಸ್ಕಾರ ಕೇಂದ್ರಗಳು ಈ ನಿಟ್ಟನಲ್ಲಿ ತಮ್ಮದೇ ಸೇವೆಯ ಕೊಡುಗೆ ನೀಡುತ್ತಿವೆ ಎಂದು ಶ್ರೀಧರ ನಾಡಗೀರ ವಿವರಿಸಿದರು.

ಪುಸ್ತಕ ಬ್ಯಾಂಕ್‌ ಪುನರಾಂಭಕ್ಕೆ ಯೋಜನೆ
ವಿದ್ಯಾರ್ಥಿನಿಯರಿಗಾಗಿ ಪಠ್ಯ ಪುಸ್ತಕಗಳ ಬ್ಯಾಂಕ್‌ ಆರಂಭಿಸಲಾಗಿತ್ತು. ಕಾರಣಾಂತರಿಂದ ಅದು ನಿಂತಿದ್ದು, ಪುನರಾಂಭಕ್ಕೆ ಯೋಜಿಸಲಾಗಿದೆ. ಅದೇ ರೀತಿ ಕೇಶವ ಕುಂಜದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ ವಾಚನಾಲಯ ಇದ್ದು, ದ.ರಾ. ಬೇಂದ್ರೆ ಗ್ರಂಥಾಲಯವಿದೆ. ಅನೇಕ ಪುಸ್ತಕಗಳಿದ್ದರೂ ಓದುಗರ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ಹಲವು ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇರಿಸುವ ಕುರಿತು ಗಂಭೀರ ಚಿಂತನೆ ಮಾಡುತ್ತೇವೆ. ಜನರ ಮಾನಸಿಕ ಒತ್ತಡ ನಿವಾರಣೆ ನಿಟ್ಟಿನಲ್ಲಿ ಆಪ್ತ ಸಲಹಾ ಕೇಂದ್ರ ಆರಂಭಕ್ಕೂ ಚಿಂತನೆ ಇದೆ. ಸಂಘಕ್ಕೆ ಯುವಕರ ಆಕರ್ಷಣೆ ಕಡಿಮೆ ಏನು ಆಗಿಲ್ಲ. ಆರೆಸ್ಸೆಸ್‌ ಸೇರಿ ಎಂಬ ವೆಬ್‌ಸೈಟ್ ಆರಂಭಿಸಿದ್ದು, ಅಚ್ಚರಿ ರೀತಿಯಲ್ಲಿ ಯುವಕರು ನೋಂದಣಿಗೆ ಮುಂದಾಗಿದ್ದಾರೆ ಎಂದು ನಾಡಗೀರ ಹೇಳಿದರು.

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next