ಹುಬ್ಬಳ್ಳಿ: ಹುಬ್ಬಳ್ಳಿ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸಬೇಕು ಹಾಗೂ ದಾಂಡೇಲಿ ರೈಲು ನಿಲ್ದಾಣ ಹೆಸರು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಮಿತಿ ಪದಾಧಿಕಾರಿಗಳ ನಿಯೋಗ ಹುಬ್ಬಳ್ಳಿಗೆ ಆಗಮಿಸಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ ಅವರನ್ನು ಭೇಟಿಯಾಗಿ ಚರ್ಚಿಸಿತು.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಸ್ವಾತಂತ್ರ್ಯ ಪೂರ್ವದಲ್ಲೇ ರೈಲು ಸಂಪರ್ಕ ಹೊಂದಿತ್ತು. ಕೆಲ ವರ್ಷಗಳ ಹಿಂದೆ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಧಾರವಾಡ ಸಂಸದರು, ಇಂದಿನ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಯತ್ನದಿಂದಾಗಿ ಯೋಜನೆಗೆ ಮರು ಜೀವ ಬಂದಂತಾಗಿತ್ತು.
ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ಅವರು ದಾಂಡೇಲಿ (ಅಂಬೇವಾಡಿಯಿಂದ ಧಾರವಾಡ)ವರೆಗೆ ರೈಲ್ವೆ ಮಾರ್ಗವನ್ನು ಬಜೆಟ್‌ನಲ್ಲಿ ಘೋಷಿಸಿದ್ದರು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿಲ್ಲ. ಅನೇಕ ಬಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ 15 ದಿನಗಳಲ್ಲಿ ಆರಂಭಗೊಳ್ಳಲಿದೆ ಎಂಬ ಭರವಸೆ ನೀಡುತ್ತ ಬಂದಿದ್ದು ಬಿಟ್ಟರೆ, ಯಾವುದೇ ಪ್ರಯೋಜನವಾಗಿಲ್ಲ.
ಅದೇ ರೀತಿ ಈ ಹಿಂದೆ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಲು ಮನವಿ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಸಣ್ಣ ಗ್ರಾಮ ಅಂಬೇವಾಡಿಯಾಗಿದ್ದು, ಹೊರ ರಾಜ್ಯಗಳಿಂದ ಬರುವವರಿಗೆ ಈ ಹೆಸರು ಪರಿಚಿತವಾಗದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ದಾಂಡೇಲಿ ಎಂದು ನಾಮಕರಣ ಮಾಡಬೇಕೆಂದು ಇದೇ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಮಾಡಲಾಯಿತು.
ನಂತರ ನಿಯೋಗ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಅವರನ್ನು ಅಭಿನಂದಿಸಿತಲ್ಲದೆ, ಹುಬ್ಬಳ್ಳಿ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.
ನಿಯೋಗದಲ್ಲಿ ಮುಖಂಡರಾದ ಅಕ್ರಮ್ ಖಾನ್, ಅಶೋಕ ಪಾಟೀಲ, ಬಲವಂತ ಬೊಮ್ಮನಹಳ್ಳಿ, ಮಹೇಶ ಮೇತ್ರಿ, ಬಾಬಾಜಾನ್, ಅಬ್ದುಲ್ ಬನ್ಸಾರಿ, ರಜಾಕ್ ಭಾಯಿ, ವಸಂತ ಮನ್ನರಿ, ಅಬ್ದುಲ್ ರಜಾಕ್ ಇನ್ನಿತರರಿದ್ದರು.