ಹುಬ್ಬಳಿ: ಸರಕಾರಿ ನೌಕರರಿಗೆ ನೀಡುವ ಆರೋಗ್ಯ ಸಂಜೀವಿನಿ ನೀಡದೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬುಧವಾರ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಕಾಯಂ ಪೌರ ಕಾರ್ಮಿಕರು, ಸಿಬ್ಬಂದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರಲ್ಲದೇ ಮಹಾಪೌರರು, ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಕೆಲಸ ಮಾಡುತ್ತಾರೆ. ತೆರಿಗೆ ವಸೂಲಾತಿ, ಸ್ವಚ್ಛತೆ, ನಗರ ಅಭಿವೃದ್ಧಿ ಕಾಮಗಾರಿ, ಕೋವಿಡ್ ನಿಯಂತ್ರಿಸುವ ಕೆಲಸ, ಚುನಾವಣೆ ಕೆಲಸ, ಜನನ ಮತ್ತು ಮರಣ ಪ್ರಮಾಣ ಪತ್ರ ಕೊಡುವುದು ಹೀಗೆ ಹತ್ತಾರು ಕಾರ್ಯ ಮಾಡುತ್ತಿದ್ದಾರೆ. ಪ್ರಮುಖವಾಗಿ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಇಂತಹ ಕಾರ್ಯಗಳಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆಸ್ಪತ್ರೆ ವೆಚ್ಚ ಭರಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ ಸರಕಾರ ಸ್ಥಳೀಯ ಸಂಸ್ಥೆಗಳ ನೌಕರರನ್ನು ಮರೆತಿರುವುದು ಸರಿಯಲ್ಲ ಎಂದರು.
ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರು ಮಾತನಾಡಿ, ಯಾವ ಬೇಡಿಕೆಗೂ ಬೀದಿಗಿಳಿದು ಹೋರಾಟ ಮಾಡಿರಲಿಲ್ಲ. ಆದರೆ ಆರೋಗ್ಯದ ವಿಷಯಕ್ಕಾಗಿ ಹೋರಾಟ ಮಾಡುವ ಅನಿರ್ವಾತೆ ಎದುರಾಗಿದೆ ಎಂದರು.
ಕಾಯಂ ಪೌರ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗಂಗಾಧರ ಟಗರಗುಂಟಿ, ಸರಕಾರ ತಾರತಮ್ಯ ಮಾಡಿರುವುದು ಸರಿಯಲ್ಲ. ಎಲ್ಲಾ ಇಲಾಖೆಗಳಿಗೂ ನೀಡಿದ ಮೇಲೆ ಈ ನೌಕರರು ಮಾಡಿರುವ ತಪ್ಪೇನು. ಕೂಡಲೇ ಸರಕಾರ ತನ್ನ ತಪ್ಪು ತಿದ್ದಿಕೊಂಡು ಸ್ಥಳೀಯ ಸಂಸ್ಥೆಗಳ ನೌಕರರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ನೌಕರರಾದ ಅಶೋಕ ಹಲಗಿ, ರಾಜು ಕೊಲಗೊಂಡ, ಯಲ್ಲಪ್ಪ ಯರಗುಂಟಿ, ಶ್ರೀನಾಥ ಪವಾರ, ಕಾಶಿನಾಥ ಜಾದವ, ರಮೇಶ ಪಾಲಿಮ್, ರಮೇಶ ಸಾಂಬ್ರಾಣಿ, ಸಿ.ಎಂ.ಬೆಳದಡಿ, ಈರಣ್ಣ ಹಂಜಿ, ಸಿ.ಎಸ್. ಜಾಬಿನ್, ಪಿ.ಬಿ.ಶಿವಳ್ಳಿ, ಬಸವರಾಜ ಗುಡಿಹಾಳ, ಎಸ್. ವೈ.ಗಂಗಾವತಿ, ಜಗದೀಶ ಗುಡ್ಡದಕೇರಿ, ಮಂಜುಳಾ ನಾಟೇಕರ, ವಿದ್ಯಾ ಪಾಟೀಲ, ಆರ್.ದೀಪಿಕಾ, ಕೆಂಪಣ್ಣವರ, ರಮೇಶ ರಾಮಯ್ಯನವರು, ಅಶೋಕ ವಂಕರಾಜ ಇನ್ನಿತರರಿದ್ದರು.