Advertisement

ಸಾಮಾನ್ಯ ಸಾರಿಗೆಯಂತಾದ ಚಿಗರಿ ಸೇವೆ

10:30 AM Jan 31, 2019 | |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಅವಳಿ ನಗರದ ಜನತೆಯ ಜೀವನಾಡಿಯಾಗುತ್ತಿದೆ. ಆದರೆ ಇಲ್ಲಿನ ಹಳೇ ಬಸ್‌ ನಿಲ್ದಾಣ ಹಾಗೂ ಮಿತ್ರ ಸಮಾಜದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ತ್ವರಿತ ಸೇವೆ ಎನ್ನುವ ಭಾವನೆ ಇನ್ನೂ ಮೂಡಿಲ್ಲ. ಟಿಕೆಟ್ಗಾಗಿ ಕೌಂಟರ್‌ಗಳ ಮುಂದೆ ಸರದಿಯಲ್ಲಿ ಕಾದು ಬಸ್‌ ಹಿಡಿಯುವಂತಾಗಿದ್ದು, ಈ ಪ್ರಯಾಣಿಕರಿಗೆ ಮಾತ್ರ ತ್ವರಿತ ಸೇವೆ ಬದಲು ಸಾಮಾನ್ಯ ಸಾರಿಗೆಯಂತಾಗಿದೆ.

Advertisement

ಹು-ಧಾ ಅವಳಿ ನಗರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ತ್ವರಿತ ಸಾರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಬಿಆರ್‌ಟಿಎಸ್‌ ಸಾರಿಗೆ ಸೇವೆ ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇ 80 ಬಸ್‌ಗಳು ಪ್ರಾಯೋಗಿಕ ಸಂಚಾರ ಮಾಡುತ್ತಿರುವುದರಿಂದ ಪ್ರಯಾಣಿಕರು ಕೂಡ ಬಿಆರ್‌ಟಿಎಸ್‌ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ನಿತ್ಯ ಸುಮಾರು 50 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇಲ್ಲಿನ ಹಳೇ ಬಸ್‌ ನಿಲ್ದಾಣ ಹಾಗೂ ಮುಂಭಾಗದಲ್ಲಿರುವ ಬಿಆರ್‌ಟಿಎಸ್‌ ಮತ್ತು ಧಾರವಾಡದ ಮಿತ್ರ ಸಮಾಜ ನಿಲ್ದಾಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಸರದಿಯಲ್ಲಿ ನಿಂತು ಟಿಕೆಟ್ ಪಡೆಯುವುದೇ ದೊಡ್ಡ ಕೆಲಸವಾಗಿದೆ.

ಸರದಿ ಅನಿವಾರ್ಯ: ಅವಳಿ ನಗರದ ನಡುವೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ನಿತ್ಯ ಸಂಚರಿಸುವವರಿಗೆ ಈ ಸಮಸ್ಯೆ ಎದುರಾಗಿದೆ. ಟಿಕೆಟ್ ಪಡೆಯುವುದಕ್ಕಾಗಿ 15-20 ನಿಮಿಷ ಸರದಿಯಲ್ಲಿ ನಿಲ್ಲುವಂತಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಕಚೇರಿಗೆ ಹೊರಡುವ ಕಚೇರಿಯಿಂದ ಮನೆಗೆ ಹೋಗುವವರು ಸಂಖ್ಯೆ ಹೆಚ್ಚಿರುವುದರಿಂದ ಉದ್ಯೋಗಿಗಳಿಗೆ ಈ ಸಮಸ್ಯೆ ಎದುರಾಗಿದೆ. ಎರಡೂ ನಿಲ್ದಾಣಗಳಲ್ಲಿ ಕೇವಲ ಎರಡು ಟಿಕೆಟ್ ಕೌಂಟರ್‌ಗಳು ಇರುವುದರಿಂದ ಸಮಸ್ಯೆ ತಲೆದೋರಿದೆ ಎನ್ನುತ್ತಾರೆ ಪ್ರಯಾಣಿಕರು.

ಅಧಿಕಾರಿಗಳ ವೈಫ‌ಲ್ಯ: ಇಲ್ಲಿನ ಹಳೇ ಬಸ್‌ ನಿಲ್ದಾಣದಿಂದ ನಿತ್ಯ ಸುಮಾರು 20 ಸಾವಿರ ಪ್ರಯಾಣಿಕರು ಹಾಗೂ ಮಿತ್ರ ಸಮಾಜದಿಂದ ಇದೆ ಪ್ರಮಾಣದ ಪ್ರಯಾಣಿಕರು ಸಂಚರಿಸುತ್ತಾರೆ ಎನ್ನುವ ಅಂಕಿ ಅಂಶಗಳಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ ಎಂದು ಯೋಜನೆ ಪೂರ್ವದ ಸಮೀಕ್ಷೆಯಲ್ಲಿ ಹೇಳುತ್ತದೆ. ಇದಕ್ಕೆ ಪೂರಕವಾಗಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಟಿಕೆಟ್ ಕೌಂಟರ್‌ಗಳ ವ್ಯವಸ್ಥೆ ಮಾಡುವಲ್ಲಿ ವಿಫ‌ಲರಾಗಿದ್ದಾರೆ ಎನ್ನುವ ಅಸಮಾಧಾನ ಜನರದ್ದಾಗಿದೆ.

ಪರ್ಯಾಯ ವ್ಯವಸ್ಥೆಯಾಗಬೇಕು: ಬೆಳಿಗ್ಗೆ ಹಾಗೂ ಸಂಜೆ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಈ ಎರಡೂ ಬಸ್‌ ನಿಲ್ದಾಣಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಉದ್ದನೆಯ ಸರದಿಗೆ ಭಯಗೊಂಡ ಪ್ರಯಾಣಿಕರು ವಾಯವ್ಯ ಸಾರಿಗೆ ಅಥವಾ ಬೇಂದ್ರೆ ಸಾರಿಗೆ ಬಸ್‌ಗಳಿಗೆ ಅನಿವಾರ್ಯವಾಗಿ ಮೊರೆ ಹೋಗುವಂತಾಗಿದೆ. ಹೀಗಾಗಿ ಎರಡೂ ಸಮಯದಲ್ಲಿ ಟಿಕೆಟ್ ಕೌಂಟರ್‌ಗಳೊಂದಿಗೆ ಇಟಿಎಂ ಯಂತ್ರದ ಮೂಲಕ ಸಿಬ್ಬಂದಿಯಿಂದ ಟಿಕೆಟ್ ವಿತರಿಸುವ ಕಾರ್ಯಕ್ಕೆ ಬಿಆರ್‌ಟಿಎಸ್‌ ಅಧಿಕಾರಿಗಳು ಮುಂದಾಗಬೇಕಿದೆ.

Advertisement

ಕಡಿಮೆಯಾಗಿಲ್ಲ ಬೇಡಿಕೆ: ಟಿಕೆಟ್ ಪಡೆಯುವುದಕ್ಕೆ ಹರಸಾಹಸ ಪಡಬೇಕು ಎನ್ನುವ ಕಾರಣಕ್ಕೆ ಪ್ರಯಾಣಿಕರೂ ಇಂದಿಗೂ ವಾಯವ್ಯ ಸಾರಿಗೆ ಹಾಗೂ ಬೇಂದ್ರೆ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಹಳೆ ಬಸ್‌ ನಿಲ್ದಾಣದಿಂದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಕ್ಕೆ ರಸ್ತೆ ದಾಟಿಕೊಂಡು ಹೋಗುವುದು ಪ್ರಮುಖ ಕಾರಣವಾಗಿದ್ದರೆ. ಟಿಕೆಟ್ ಕೌಂಟರ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವುದು ದೊಡ್ಡ ಕೆಲಸವಾಗಿದ್ದರಿಂದ ಹಳೇ ಬಸ್‌ ನಿಲ್ದಾಣದಿಂದ ಹೊರಡುವ ವಾಯವ್ಯ ಸಾರಿಗೆ ಬಸ್‌ಗಳಿಗೆ ಇನ್ನೂ ಬೇಡಿಕೆ ಕಡಿಮೆಯಾದಂತೆ ಕಾಣುತ್ತಿಲ್ಲ.

ಎರಡು ಸಮಯದಲ್ಲಿ ಹಳೇ ಬಸ್‌ ನಿಲ್ದಾಣದ ಬಿಆರ್‌ಟಿಎಸ್‌ ಟಿಕೆಟ್ ಕೌಂಟರ್‌ ಮುಂಭಾಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಈ ಟಿಕೆಟ್ ಕೌಂಟರ್‌ಗಳ ಮುಂದೆ ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು.
• ಗಣೇಶ ರಾಠೊಡ್‌,
ಡಿಜಿಎಂ, ಬಸ್‌ ಕಾರ್ಯಾಚರಣೆ

ಸರದಿಯಲ್ಲಿ ನಿಂತು ಟಿಕೆಟ್ ಪಡೆದು ಬಿಆರ್‌ಟಿಎಸ್‌ ಬಸ್‌ಗೆ ನವನಗರಕ್ಕೆ ಹೋಗುವುದು ಹಾಗೂ ವಾಯವ್ಯ ಸಾರಿಗೆ ಅಥವಾ ಬೇಂದ್ರೆ ಬಸ್‌ಗೆ ಹೋಗುವುದು ಒಂದೇ ಸಮಯ ಬೇಕಾಗುತ್ತದೆ. ಟಿಕೆಟ್ಗಾಗಿ ಅರ್ಧ ಗಂಟೆ ಕಾಯುವುದರಿಂದ ನಮಗೇನು ತ್ವರಿತ ಸಾರಿಗೆ ಎಂದೆನಿಸುತ್ತಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೌಂಟರ್‌ಗೆ ಬರುತ್ತಿದ್ದಂತೆ ಪ್ರಯಾಣಿಕರಿಗೆ ಟಿಕೆಟ್ ದೊರೆಯುವಂತಾಗಬೇಕು.
• ಜಿ.ಮಹೇಶ, ಉದ್ಯೋಗಿ

ಹೀಗೂ ಮಾಡಬಹುದಿತ್ತು
ಯಾಣಿಕರಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಹಳೇ ಬಸ್‌ ನಿಲ್ದಾಣದಲ್ಲೇ ಬಿಆರ್‌ಟಿಎಸ್‌ ಟಿಕೆಟ್ ಕೌಂಟರ್‌ಗಳ ವ್ಯವಸ್ಥೆ ಮಾಡಬಹುದಿತ್ತು. ಇದಕ್ಕೆ ಬೇಕಾದ ಅಗತ್ಯ ಸ್ಥಳದ ಅವಕಾಶವಿದೆ. ಇದರಿಂದ ಹಳೇ ಬಸ್‌ ನಿಲ್ದಾಣದಿಂದ ಧಾರವಾಡದತ್ತ ಪ್ರಯಾಣಿಸುವವರು ಇಲ್ಲಿಂದಲೇ ಟಿಕೆಟ್ ಪಡೆದು ಬಿಆರ್‌ಟಿಎಸ್‌ನಲ್ಲಿ ಪ್ರಯಾಣಿಸಲು ಸುಗಮವಾಗುತ್ತದೆ. ಬೆಂಗಳೂರು ಮೆಟ್ರೋದಲ್ಲಿ ಕೂಡ ಇದೇ ವ್ಯವಸ್ಥೆ ಇರುವುದರಿಂದ ಕೆಲವೆಡೆ ಟಿಕೆಟ್ ಕೌಂಟರ್‌ಗಳ ಮುಂಭಾಗದಲ್ಲಿ ಪ್ರಯಾಣಿಕರ ಸಂದಣಿ ಇರಲ್ಲ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next