ಹುಬ್ಬಳ್ಳಿ: ಹು-ಧಾ ಅವಳಿ ನಗರದ ನಡುವೆ ಕೈಗೊಂಡಿರುವ ಬಿಆರ್‌ಟಿಎಸ್ ಯೋಜನೆಯ ಕಾಮಗಾರಿಯನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಬುಧವಾರ ಪರಿಶೀಲಿಸಿದರು. ಅಲ್ಲದೆ ಬಾಕಿ ಉಳಿದಿರುವ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಇಲ್ಲಿನ ಹೊಸೂರ ಬಸ್ ಟರ್ಮಿನಲ್ನಿಂದ ಧಾರವಾಡದ ಟರ್ಮಿನಲ್ ವರೆಗೆ ಚಿಗರಿ ಬಸ್‌ನಲ್ಲಿ ಪ್ರಯಾಣಿಸಿ ಪರಿಶೀಲನೆ ಮಾಡಿದ ಸಚಿವರು, ಯೋಜನೆ ಆರಂಭವಾಗಿ ವರ್ಷಗಳು ಕಳೆದರೂ ಇನ್ನು ಏಕೆ ಕಾರ್ಯಗತಗೊಳಿಸಲು ಆಗುತ್ತಿಲ್ಲ?. ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಜೊತೆಗೆ ಯೋಜನೆಯು ಸಮರ್ಪಕ ಕಾರ್ಯಗತಗೊಳ್ಳಲು ಇರುವ ಲೋಪ-ದೋಷಗಳನ್ನು ಸರಿಪಡಿಸಬೇಕು ಎಂದರು.
ಎಚ್‌ಡಿಬಿಆರ್‌ಟಿಎಸ್ ಎಂಡಿ ರಾಜೇಂದ್ರ ಚೋಳನ್ ಅವರು, ಹೊಸೂರ ಟರ್ಮಿನಲ್ನಿಂದ ಬಸ್‌ಗಳ ಸಂಚಾರ ಆರಂಭಿಸುವ ಕುರಿತು ಸಮಿತಿ ರಚಿಸಲಾಗಿದೆ. ಸಂಚಾರ ವಿಭಾಗದ ಡಿಸಿಪಿ ಅವರೊಂದಿಗೆ ಸುಗಮ ಸಂಚಾರ ಕೈಗೊಳ್ಳಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಇನ್ನು 15-20 ದಿನಗಳಲ್ಲಿ ಹೊಸೂರ ಟರ್ಮಿನಲ್ದಿಂದ ಹಂತ-ಹಂತವಾಗಿ ದೂರದ ಮಾರ್ಗದ ಬಸ್‌ಗಳ ಸಂಚಾರ ಆರಂಭಿಸಲು ಯೋಜಿಸಲಾಗಿದೆ. ಚಿಗರಿ ಬಸ್‌ಗಳಿಗೆಲ್ಲ ಜಿಪಿಎಸ್ ಅಳವಡಿಸಲಾಗಿದೆ. ಎಟಿಸಿಎಸ್‌ನಿಂದಲೇ ಅವರನ್ನು ನಿಯಂತ್ರಿಸಲಾಗುತ್ತಿದೆ. ಚಾಲಕರಿಗೆ ವೇಗಮೀತಿ, ಸುರಕ್ಷತೆ ಕುರಿತು ಇಲ್ಲಿಂದಲೇ ಸೂಚಿಸಲಾಗುತ್ತಿದೆ ಎಂದರು.
ಇದೇ ವೇಳೆ ಹೊಸೂರ ವೃತ್ತ ತಿರುವಿನಲ್ಲಿನ ರಸ್ತೆ ಪರಿಶೀಲಿಸಿದ ಸಚಿವರು, ವಾಹನಗಳ ಸುಗಮ ಸಂಚಾರಕ್ಕೆ ಈ ತಿರುವಿನಲ್ಲಿ ರಸ್ತೆ ನಿರ್ಮಿಸಬೇಕೆಂದು ಕಳೆದ ಒಂದು ವರ್ಷದಿಂದ ಸೂಚಿಸಿದರು ಇದುವರೆಗೆ ಏಕೆ ನಿರ್ಮಿಸಿಲ್ಲ?. ಪಾಲಿಕೆಯ ಜಾಗವಿದ್ದರು ಅದನ್ನು ಏಕೆ ಬಳಕೆ ಮಾಡಿಕೊಂಡಿಲ್ಲ?. ಕೆಲಸ ಮಾಡಲು ನಿಮಗೆ ಏನು ತೊಂದರೆ? ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ತಡೆಗೋಡೆ ನಿರ್ಮಿಸಿ ರಸ್ತೆ ನಿರ್ಮಿಸಿ. ಅದಕ್ಕೆ ಬೇಗನೆ ನಿರ್ಧಾರ ತೆಗೆದುಕೊಳ್ಳಿ. ಸಿಆರ್‌ಎಫ್ ಅಡಿ ಕೈಗೊಳ್ಳಲಾಗಿರುವ ರಸ್ತೆಗಳ ಕಾಮಗಾರಿಗಳಲ್ಲಿ ಅತಿಕ್ರಮಿತ ಜಾಗಗಳನ್ನು ತೆರವುಗೊಳಿಸಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾದರೆ ಕಾಮಗಾರಿಗಳು ಮುಗಿಯುವುದು ಯಾವಾಗ? ಪದೇ-ಪದೇ ಹೇಳಿಸಿಕೊಳ್ಳುವುದು ಸರಿಯಲ್ಲ ಎಂದು ದಬಾಯಿಸಿದರು. ಆಗ ಅಧಿಕಾರಿಗಳು, ನೀರಿನ ಕೊಳವೆ ಮಾರ್ಗ, ವಿದ್ಯುತ್ ಕಂಬ ಬದಲಾವಣೆ ಸೇರಿದಂತೆ ಎಲ್ಲ ಸಮಸ್ಯೆ ನಿವಾರಣೆಯಾಗಿದೆ. ಇನ್ನು 15-20 ದಿನಗಳಲ್ಲಿ ತಡೆಗೋಡೆ ಹಾಗೂ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದರು.