Advertisement

ಬೈಕ್‌ ಸವಾರರಿಗೆ ಬಸ್ಕಿ ಸಜೆ

11:34 AM Apr 09, 2020 | Team Udayavani |

ಹುಬ್ಬಳ್ಳಿ: ಲಾಕ್‌ಡೌನ್‌ ಇದ್ದರೂ ಅನಗತ್ಯವಾಗಿ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸುತ್ತಿದ್ದ ಸವಾರರನ್ನು ಪೊಲೀಸರು ತಡೆ ಹಿಡಿದು ಬಸ್ಕಿ ಹೊಡೆಸಿದರಲ್ಲದೇ ಲಾಠಿ ರುಚಿ ತೋರಿಸುವ ಮೂಲಕ ಬಿಸಿ ಮುಟ್ಟಿಸಿದರು. ಕಾರು ಮಾಲಕರಿಗೆ ದಂಡ ಹಾಕಿದರು.

Advertisement

ನಗರದ ಬಹುತೇಕ ಪ್ರದೇಶಗಳಲ್ಲಿ ಜನರು ಅನವಶ್ಯಕವಾಗಿ ತಿರುಗುವುದು ಹಾಗೂ ಆಹಾರ, ಉಪಹಾರ ವಿತರಿಸುವ ನೆಪದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಇದನ್ನು ಮನಗಂಡ ಪೊಲೀಸರು ಬುಧವಾರ ಕಿತ್ತೂರ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್‌ ವೃತ್ತ ಸೇರಿದಂತೆ ಇನ್ನಿತರೆಡೆ ಕಾರ್ಯಾಚರಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು ನಿಲ್ಲಿಸಿ ಬಸ್ಕಿ ಹೊಡೆಸಿದರು. ಕೆಲವರಿಗೆ ಲಾಠಿ ರುಚಿ ತೋರಿಸಿದರು. ಕಾರು, ಬೈಕ್‌ಗಳನ್ನು ತಡೆದು ದಂಡ ಹಾಕಿದರು. ವಾಹನ ಜಫ್ತು ಮಾಡಿದರು.

ಪೂರ್ವ ಸಂಚಾರ ಠಾಣೆ ಪಿಎಸ್‌ಐ ಶರಣು ದೇಸಾಯಿ ಓರ್ವ ಕಾರು ಮಾಲಕರನ್ನು ತಡೆದು 2,500ರೂ. ದಂಡ ವಿಧಿಸಿದರು. ಬುಧವಾರದಂದು ಅನಗತ್ಯವಾಗಿ ಓಡಾಡುತ್ತಿದ್ದ ಒಟ್ಟು 153 ದ್ವಿಚಕ್ರ ವಾಹನ ಹಾಗೂ ಕಾರು ಜಫ್ತು ಮಾಡಲಾಗಿದೆ. 186 ಪ್ರಕರಣ ದಾಖಲಿಸಿಕೊಂಡು, 94,300 ರೂ. ದಂಡ ವಸೂಲಿ ಮಾಡಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲೂ ಅನವಶ್ಯಕವಾಗಿ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅವಳಿ ನಗರದಲ್ಲಿ ಒಟ್ಟು 32 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಮನೆ ಬಿಟ್ಟು ಹೊರ ಬಂದವರ ವಾಹನ ಜಫ್ತು ಮಾಡಲಾಗುವುದು. ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಎಸಿಪಿ ಎಸ್‌.ಎಂ. ಸಂದಿಗವಾಡ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next