ಹುಬ್ಬಳ್ಳಿ: ಸಾರ್ವಜನಿಕರ ಬಹುದಿನಗಳ ಬೇಡಿಕೆ ಮೇರೆಗೆ ನಗರದಿಂದ ಬೀದರ್ ಗೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಇದುವರೆಗೆ ಹುಬ್ಬಳ್ಳಿಯಿಂದ ಬೀದರ್ ಗೆ ನೇರವಾಗಿ ಐಷಾರಾಮಿ ಬಸ್ ಸಂಚಾರ ಇರಲಿಲ್ಲ. ಹುಬ್ಬಳ್ಳಿಯಿಂದ ಬೀದರ್‌ಗೆ ಹೋಗುವವರು ಕಲಬುರಗಿ ವರೆಗೆ ಹೋಗಿ ಅಲ್ಲಿಂದ ಮತ್ತೂಂದು ಬಸ್ ಹತ್ತಿ ತಲುಪಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನೇರ ಬಸ್ ಸೌಲಭ್ಯ ಕೋರಿ ಸಾರ್ವಜನಿಕರಿಂದ ಮನವಿಗಳು ಬಂದಿದ್ದವು. ಅದರಂತೆ ಎರಡು ನಗರಗಳ ನಡುವೆ ಹೊಸದಾಗಿ ಸ್ಲಿàಪರ್ ಬಸ್ ಸಂಚಾರ ಆರಂಭಿಸಲಾಗಿದ್ದು, ಇದು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಸ್ ಹುಬ್ಬಳ್ಳಿಯಿಂದ ರಾತ್ರಿ 9:15 ಗಂಟೆಗೆ ಹೊರಟು ನವಲಗುಂದ, ನರಗುಂದ, ವಿಜಯಪುರ (ನಡುರಾತ್ರಿ 1:45), ಕಲಬುರಗಿ (ಬೆಳಗ್ಗೆ 5) ಮಾರ್ಗವಾಗಿ ಮರುದಿನ ಬೆಳಗ್ಗೆ 7:30 ಗಂಟೆಗೆ ಬೀದರ್ ತಲುಪಲಿದೆ. ಬೀದರನಿಂದ ರಾತ್ರಿ 8:45 ಗಂಟೆಗೆ ಹೊರಟು ಕಲಬುರಗಿ (ರಾತ್ರಿ 11:15), ವಿಜಯಪುರ (ತಡರಾತ್ರಿ 2:30) ಮಾರ್ಗವಾಗಿ ಬೆಳಗ್ಗೆ 7 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಪ್ರೋತ್ಸಾಹಕ ಪ್ರಯಾಣ ದರ 910 ರೂ. ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸ್ ಸಂಚಾರಕ್ಕೆ ಚಾಲನೆ
ನಗರದ ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಹುಬ್ಬಳ್ಳಿ-ಬೀದರ್ ನಡುವೆ ನೂತನವಾಗಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರಕ್ಕೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಚಾಲನೆ ನೀಡಿದರು. ವಿಭಾಗೀಯ ಸಂಚಾರ ಅಧಿಕಾರಿ ಎಸ್. ಎಸ್. ಮುಜುಂದಾರ, ವಿಭಾಗೀಯ ತಾಂತ್ರಿಕ ಎಂಜಿನಿಯರ್ ಪ್ರವೀಣ ಈಡೂರ, ಘಟಕ ವ್ಯವಸ್ಥಾಪಕ ಬಸಪ್ಪ ಪೂಜಾರಿ ಇದ್ದರು.