Advertisement

Hubli; ಅಂಜುಮನ್‌ ಇ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ; ಬಿರುಸಿನ ಮತದಾನ

12:17 PM Feb 18, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಪ್ರತಿಷ್ಠಿತ ಹುಬ್ಬಳ್ಳಿ ಅಂಜುಮನ್‌ ಇ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ತುರುಸಿನ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 8 ಗಂಟೆಯಿಂದ ಇಲ್ಲಿನ ಘಂಟಿಕೇರಿಯ ನೆಹರೂ ಕಾಲೇಜ್ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಮತದಾನ ಆರಂಭವಾಗಿದೆ.

Advertisement

ಕಣದಲ್ಲಿ ನಾಲ್ಕು ಬಣಗಳಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ‌. ಮತದಾನ ಕೇಂದ್ರ ಮುಂಭಾಗದಲ್ಲಿ ನಾಲ್ಕು ಬಣಗಳ ಕೌಂಟರ್ ನಿರ್ಮಿಸಲಾಗಿದ್ದು, ಆಯಾ ಬಣದ ಬೆಂಬಲಿಗರು ಪ್ರಚಾರದಲ್ಲಿ ತೊಡಗಿದ್ದಾರೆ. ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 11 ಗಂಟೆಯವರೆಗೆ 1874 ಮತಗಳ ಚಲಾವಣೆಯಾಗಿವೆ‌. ನಂತರ ಸಂಜೆ 6 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಒಟ್ಟು 40 ಬೂತ್‌ ಗಳಲ್ಲಿ ಮತದಾನ ನಡೆ ಸರ್ಕಾರಿ ಪ್ರೌಢಶಾಲೆಯಲ್ಲಿ 19 ಬೂತ್‌ ಹಾಗೂ ನೆಹರೂ ಕಾಲೇಜಿನಲ್ಲಿ 21 ಬೂತ್‌ ತೆರೆಯಲಾಗಿದೆ.

121 ವರ್ಷಗಳ ಇತಿಹಾಸವಿರುವ ಸಂಸ್ಥೆಯ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಇದೇ ಮೊದಲ ಬಾರಿಗೆ, ನಾಲ್ಕು ಬಣಗಳು ಚುನಾವಣಾ ಕಣದಲ್ಲಿವೆ. ಈ ಹಿಂದೆ ಮೂರು ಬಣಗಳ ನಡುವೆ ಪೈಪೋಟಿ ಇರುತ್ತಿತ್ತು. ಟ್ರ್ಯಾಕ್ಟರ್‌ ಚಿಹ್ನೆಯಡಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬಣ, ಆಟೊ ಚಿಹ್ನೆಯಡಿ ನಿಕಟಪೂರ್ವ ಅಧ್ಯಕ್ಷ ಯೂಸುಫ್‌ ಸವಣೂರು ಬಣ, ಪೆನ್‌ ನಿಬ್‌ ಚಿಹ್ನೆಯಡಿ ಮಜರ್‌ ಖಾನ್‌ ಬಣ ಹಾಗೂ ಹೆಲಿಕಾಪ್ಟರ್‌ ಚಿಹ್ನೆಯಡಿ ಎನ್‌.ಡಿ. ಗದಗಕರ ಬಣ ಸ್ಪರ್ಧೆಯಲ್ಲಿವೆ. ಪ್ರತಿ ಬಣದಲ್ಲಿ 52 ಅಭ್ಯರ್ಥಿಗಳು ಕಣದಲ್ಲಿದ್ದು, ಅಧ್ಯಕ್ಷ ಸ್ಥಾನದ ಮೂವರು ಪಕ್ಷೇತರ ಅಭ್ಯರ್ಥಿಗಳು ಸೇರಿ 211 ಮಂದಿ ಸ್ಪರ್ಧೆಯಲ್ಲಿದ್ದಾರೆ. 11,903 ಮತದಾರರಿದ್ದಾರೆ.

ಸಂಸ್ಥೆಯ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ, ಏಳು ಶಿಕ್ಷಣ ಮಂಡಳಿ ಸದಸ್ಯರು, ನಾಲ್ಕು ಆಸ್ಪತ್ರೆ ಮಂಡಳಿ ಸದಸ್ಯರು, 10 ಪೋಷಕ ಸದಸ್ಯರು ಹಾಗೂ 25 ಸಾಮಾನ್ಯ ಸದಸ್ಯರೆಂದು ಒಟ್ಟು 52 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಒಬ್ಬ ಮತದಾರ ನಾಲ್ಕು ಬಣಗಳಲ್ಲಿರುವ 52 ಮಂದಿಗೆ ಮತ ಚಲಾಯಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next