Advertisement

ಹುಬ್ಬಳ್ಳಿ ವಿಮಾನನಿಲ್ದಾಣ ಅಭಿವೃದ್ಧಿಕಾಮಗಾರಿ ಮಾಸಾಂತ್ಯಕ್ಕೆ ಸಂಪೂರ್ಣ

12:05 PM Jul 16, 2017 | |

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದಡಿ ಮೇಲ್ದರ್ಜೆಗೇರಿಸುವ ಕಾಮಗಾರಿ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಆಗಸ್ಟ್‌ 15ರ ವೇಳೆಗೆ ದೊಡ್ಡ ವಿಮಾನಗಳ ಹಾರಾಟಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಸಂಸದ ಪ್ರಹ್ಲಾದ ಜೋಶಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು. 

Advertisement

ವಿಮಾನ ನಿಲ್ದಾಣದಲ್ಲಿ ಕೈಗೊಳ್ಳಲಾಗುತ್ತಿರುವ ರನ್‌ವೇ ವಿಸ್ತರಣೆ,ನೂತನ ಟರ್ಮಿನಲ್‌, ಏರ್‌ ಟ್ರಾμಕ್‌ ಕಂಟ್ರೋಲರ್‌ (ಎಟಿಸಿ), ಅಗ್ನಿಶಾಮಕ ನಿಲ್ದಾಣ, ಇಲೆಕ್ಟ್ರಿಕಲ್‌ ಕೊಠಡಿ ಇನ್ನಿತರ ಕಾಮಗಾರಿ ಶನಿವಾರ ವೀಕ್ಷಿಸಿದ ನಂತರ ಇಬ್ಬರು ನಾಯಕರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿಲ್ದಾಣದಲ್ಲಿ 141 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 59 ಕೋಟಿ ರೂ. ವೆಚ್ಚದಲ್ಲಿ ರನ್‌ವೇ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ.

35 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌, ಎಟಿಸಿ, ಅಗ್ನಿಶಾಮಕ ನಿಲ್ದಾಣ, ಇಲೆಕ್ಟ್ರಿಕಲ್‌ ರೂಮ್‌ ಕಟ್ಟಡ ಸೇರಿದಂತೆ ಇನ್ನಿತರೆ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಭಾರತೀಯ ವಿಮಾನಯಾನ ಪ್ರಾಧಿಕಾರದವರಿಗೆ ಐದು ತಿಂಗಳ ಅವಧಿ ನೀಡಲಾಗಿತ್ತು. ಜುಲೈ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು. 

ರನ್‌ವೇ ವಿಸ್ತರಣೆಯಿಂದ ಏರ್‌ ಬಸ್‌, 737 ಬೋಯಿಂಗ್‌ ವಿಮಾನ ಸೇರಿದಂತೆ 180 ಆಸನಗಳ ಸಾಮರ್ಥ್ಯದ ವಿಮಾನಗಳು ಇಳಿಯಲು ಮತ್ತು ಹಾರಾಟ ಮಾಡಲು ಯೋಗ್ಯವಾಗಿದೆ. ಆ ಮೂಲಕ ಎಲ್ಲ ಬಗೆಯ ಹವಾಮಾನದ ವಿಮಾನ ನಿಲ್ದಾಣವಾಗಿ ಪರಿಣಮಿಸಿದೆ. ಅಲ್ಲದೆ ಒಂದೇ ಬಾರಿಗೆ 3 ದೊಡ್ಡ ಗಾತ್ರದ ಹಾಗೂ 4 ಸಣ್ಣ ಗಾತ್ರದ ವಿಮಾನಗಳನ್ನು ನಿಲ್ದಾಣದಲ್ಲಿ ನಿಲ್ಲಿಸಬಹುದಾಗಿದೆ ಎಂದರು. 

ನಿಲ್ದಾಣದಲ್ಲಿ ತುರ್ತು ನಿರ್ಗಮನ ಸೇರಿದಂತೆ ವಿಮಾನಗಳ ಕಾರ್ಯಾಚರಣೆಗೆ ಅಗತ್ಯವಾದ ಬಹುತೇಕ ಕಾಮಗಾರಿಗಳು ಮುಗಿದಿವೆ. ಅಂತಿಮ ಹಂತದ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಜುಲೈ 31ಕ್ಕೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ ಸಂಸತ್‌ ಅಧಿವೇಶನ ನಂತರ ಅಂದರೆ ಆಗಸ್ಟ್‌ 15ರ ಆಸುಪಾಸಿನಲ್ಲಿ ಉದ್ಘಾಟಿಸಲು ಯೋಚಿಸಲಾಗಿದೆ.

Advertisement

ಒಂದು ವೇಳೆ ಐಐಟಿ ಕೇಂದ್ರದ ಉದ್ಘಾಟನೆಯ ದಿನಾಂಕ ನಿಗದಿಯಾದರೆ ಹಾಗೂ ಕಿಮ್ಸ್‌ನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಒಟ್ಟಿಗೆ ಮೂರನ್ನು ಉದ್ಘಾಟಿಸಲು ಚಿಂತನೆ ನಡೆಸಲಾಗಿದೆ. ಸಾಧ್ಯವಾದರೆ ಪ್ರಧಾನ ಮಂತ್ರಿಯವರನ್ನು  ಆಹ್ವಾನಿಸಲಾಗುವುದು ಎಂದರು. 

ವಿಮಾನ ನಿಲ್ದಾಣದಲ್ಲಿ ಈಗಿರುವ ಟರ್ಮಿನಲ್‌ ಕಟ್ಟಡವನ್ನು ಕಾರ್ಗೋವನ್ನಾಗಿ ಪರಿವರ್ತಿಸಲು ಕೇಂದ್ರ ಮತ್ತು ನಾಗರಿಕ ವಿಮಾನಯಾನ ವಿಭಾಗದವರಿಂದ ಪರವಾನಗಿ ಪಡೆಯಲು ಪ್ರಯತ್ನಿಸಲಾಗುವುದು. ವಿಮಾನ ನಿಲ್ದಾಣದ ಉದ್ಘಾಟನೆ ನಂತರ ನಗರದಿಂದ ಮುಂಬಯಿ ಹಾಗೂ  ಬೆಂಗಳೂರಿಗೆ ವಾರದ ಎಲ್ಲ ದಿನಗಳಲ್ಲೂ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಲು ವಿಮಾನಯಾನ ಕಂಪನಿಗಳ ಸಂಬಂಧಪಟ್ಟವರೊಂದಿಗೆ ಪ್ರಗತಿಪರ  ಮಾತುಕತೆಗಳು ನಡೆದಿವೆ ಎಂದರು.

ಬಹಳಷ್ಟು ವಿಮಾನಯಾನ ಕಂಪನಿಯವರ ಬಳಿ ಸಣ್ಣ ಏರ್‌ಕ್ರಾಫ್ಟ್‌ ಗಳಿಲ್ಲ. ಈ ಹಿನ್ನೆಲೆಯಲ್ಲಿ ನಗರದಿಂದ ಬೇರೆ ಸ್ಥಳಗಳಿಗೆ ವಿಮಾನಯಾನ ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿವೆ. ಆರು ಕಂಪನಿಗಳವರು ಇಲ್ಲಿಂದ ವಿಮಾನಯಾನ ಆರಂಭಿಸುವುದಾಗಿ ಹೇಳಿ ಸ್ಥಳೀಯ ವಿಮಾನ ನಿಲ್ದಾಣ ನಿರ್ದೇಶಕರಿಂದಲೂ ಶೆಡ್ನೂಲ್ಡ್‌ ಪರವಾನಗಿ ಪಡೆದಿದ್ದರು. ಆದರೆ ನಂತರ ಕೆಲ ಕಾರಣಾಂತರಗಳಿಂದ ಅವರು ಸೇವೆ ಒದಗಿಸಲಿಲ್ಲ ಎಂದರು.

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಅವಳಿ ನಗರದಲ್ಲಿನ ರಸ್ತೆಗಳ ಅಭಿವೃದ್ಧಿಗೆ 1000 ಕೋಟಿ ರೂ. ಮಂಜೂರು ಮಾಡಿದ್ದಾರೆ. ಇನ್ನು 1000ಕೋಟಿ ರೂ. ಕೊಡಲು ಸಿದ್ಧರಿದ್ದಾರೆ. ಆದರೆ ರಾಜ್ಯ ಸರಕಾರವು ರಸ್ತೆಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯುತ್ತಿಲ್ಲ. ಮುತುವರ್ಜಿ ವಹಿಸುತ್ತಿಲ್ಲ. 

ಬೀದರ ವಿಮಾನ ನಿಲ್ದಾಣ ಸುಧಾರಣೆ ಆಗಿದ್ದು, ವಿಮಾನಗಳ ಹಾರಾಟಕ್ಕೆ ರಾಜ್ಯ ಸರಕಾರವು ಪರವಾನಗಿ ನೀಡುತ್ತಿಲ್ಲ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಜೊತೆಗೆ ಅಭಿವೃದ್ಧಿ ಆಗಬೇಕೆಂಬ ಕನಸೂ ನನಸಾಗುತ್ತಿಲ್ಲ. ರಾಜ್ಯ ಸರಕಾರವು ಬೇಲೇಕೆರೆ ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ,

ಕೇಂದ್ರ ಹಾಗೂ ಸಚಿವ ನಿತಿನ್‌ ಗಡ್ಕರಿ ಅವರ ಮೇಲೆ ಒತ್ತಡ ಹಾಕಿ, ಅದಕ್ಕೆ ಅಗತ್ಯ ಹಣ ಮಂಜೂರು ಮಾಡಿಸಲಾಗುವುದು ಎಂದರು. ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ, ಭಾರತೀಯ ವಿಮಾನಯಾನ ಪ್ರಾಧಿಕಾರ ಜಂಟಿ ಪ್ರಧಾನ ವ್ಯವಸ್ಥಾಪಕ ಸಿವಿಲ್‌ನ ಎ.ಎನ್‌. ಶ್ರೀನಿವಾಸ, ಇಲೆಕ್ಟ್ರಿಕಲ್ಸ್‌ನ ಸಿ. ಮಂಜುನಾಥ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next