ಮೈಸೂರು: ಎಂಟನೇ ಆವೃತ್ತಿ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಟಿ20 ಪ್ರಶಸ್ತಿಯನ್ನು ಹುಬ್ಬಳ್ಳಿ ಟೈಗರ್ಸ್ ತನ್ನದಾಗಿಸಿಕೊಂಡಿದೆ. ಶನಿವಾರ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಫೈನಲ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ರೋಚಕ 8 ರನ್ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಹುಬ್ಬಳ್ಳಿ 20 ಓವರ್‌ಗೆ 6 ವಿಕೆಟ್‌ಗೆ 152 ರನ್‌ಗಳಿಸಿತ್ತು. 153 ರನ್ ಜಯದ ಗುರಿ ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ ದೇವದತ್ತ ಪಡೀಕ್ಕಲ್ (68 ರನ್) ಏಕಾಂಗಿ ಹೋರಾಟದ ಹೊರತಾಗಿಯೂ ಸೋಲು ಕಂಡಿತು. ಅಭಿಲಾಷ್ ಶೆಟ್ಟಿ (34ಕ್ಕೆ3), ಆದಿತ್ಯ ಸೋಮಣ್ಣ (24ಕ್ಕೆ3) ಹುಬ್ಬಳ್ಳಿ ಜಯದಲ್ಲಿ ಮಿಂಚಿದರು.
ವಿಜೇತ ಹುಬ್ಬಳ್ಳಿ ತಂಡ 10 ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆಯಿತು. ರನ್ನರ್ ಅಪ್ ಬಳ್ಳಾರಿ 5 ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ಸೋಮಣ್ಣ ಬ್ಯಾಟಿಂಗ್ ನೆರವು: ಟಾಸ್ ಗೆದ್ದು ಹುಬ್ಬಳ್ಳಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷೆಗೆ ತಕ್ಕಂತೆ ರನ್ ಹರಿದುಬರಲಿಲ್ಲ. ಇದಕ್ಕೆ ಬಳ್ಳಾರಿ ಬಿಗಿ ಬೌಲಿಂಗ್ ಕಾರಣ. ಹುಬ್ಬಳ್ಳಿ ಪರ ಮಿಂಚಿದ್ದು ಆದಿತ್ಯ ಸೋಮಣ್ಣ. ಆರಂಭಕಾರರಾಗಿ ಬ್ಯಾಟ್ ಹಿಡಿದುಬಂದು 38 ಎಸೆತಗಳಲ್ಲಿ 47 ರನ್ ಗಳಿಸಿದರು. ಇದರಲ್ಲಿ ಯಾವುದೇ ಬೌಂಡರಿಯಿರಲಿಲ್ಲ. ಆದರೆ 2 ಸಿಕ್ಸರ್ ಮಾತ್ರ ಇದ್ದವು. ಬಳ್ಳಾರಿ ಪರ ಕೆ.ಪಿ.ಅಪ್ಪಣ್ಣ 19 ರನ್ ನೀಡಿ 2 ವಿಕೆಟ್ ಕಿತ್ತರು. ಪ್ರಸಿದ್ಧ್ ಕೃಷ್ಣ 20 ರನ್‌ಗೆ 1 ವಿಕೆಟ್ ಕಿತ್ತರು.
ಆದಿತ್ಯ ಸೋಮಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕೃಷ್ಣಪ್ಪ ಗೌತಮ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.