ಹುಬ್ಬಳ್ಳಿ: ಕರ್ನಾಟಕ ರಂಗಭೂಮಿಯ ಪ್ರಭಾವ ದಿಂದ ಮರಾಠಿ ರಂಗಭೂಮಿ ಹುಟ್ಟಿ ಕನ್ನಡ ರಂಗಭೂಮಿ ಯನ್ನು ಮೀರಿ ಬೆಳೆದಿದೆ ಎಂದು ಮಾಜಿ ಮಹಾಪೌರ ಡಾ| ಪಾಂಡುರಂಗ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಳಾಚಾರ್ಯ ಸಕ್ರಿ ಶಾಂತಕವಿ ಟ್ರಸ್ಟ್ ಧಾರವಾಡ, ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕರ್ನಾಟಕ ರಂಗಭೂಮಿ ಅಂದು, ಇಂದು’ ವಿಷಯ ಕುರಿತು
ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ಏಕವ್ಯಕ್ತಿ ಅಭಿನಯ, ಗೊಂಬೆ ಆಟಗಳು ರಂಗಭೂಮಿಗೆ ಅಸ್ಥಿಭಾರ ಹಾಕಿದ ಕಲೆಗಳು. ದೊಡ್ಡಾಟ, ಬಯಲಾಟ, ಕೃಷ್ಣ ಪಾರಿಜಾತ, ರಾಧಾನಾಟ, ಸಂಗ್ಯಾ-ಬಾಳ್ಯಾ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಲೆಗಳು ವೃತ್ತಿ ರಂಗಭೂಮಿ ಬೆಳೆಯಲಿಕ್ಕೆ ಕಾರಣವಾಗಿವೆ ಎಂದರು.
ವೃತ್ತಿ ರಂಗಭೂಮಿ ಸಂಕೀರ್ಣವಾದುದು. ನಾಟಕಕಾರ, ನಾಟಕ ಕಂಪನಿ ಮಾಲೀಕ, ಕಲಾವಿದರು, ಪ್ರೇಕ್ಷಕರು, ಕಥಾವಸ್ತು, ಸಂಗೀತ, ನೃತ್ಯ ರಂಗ ಪರಿಕರಗಳು, ಪ್ರಚಾರ ಇವೆಲ್ಲವುಗಳು ಸಂಸ್ಕೃತಿ ಬದಲಾದಂತೆ ಪರಂಪರೆಯೊಂದಿಗೆ ಹೊಂದಿಕೊಳ್ಳುತ್ತ ವಿವಿಧ ರೂಪದಲ್ಲಿ ಬೆಳೆದು ಬಂದಿದೆ. ಕಲಾವಿದರ ಬದುಕು ಅತಂತ್ರವಾಗಿರುವುದು ಖೇದದ ವಿಷಯ. ನಾಟಕ ಕಂಪನಿಗಳು ಅನಾಥ ಸ್ಥಿತಿಯನ್ನು ಅನುಭವಿಸುತ್ತಿವೆ ಎಂದು ಹೇಳಿದರು.
ಪ್ರೊ| ಕೆ.ಎಸ್. ಕೌಜಲಗಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಸರೋಜಮ್ಮ ಎಚ್.ವಿ., ಪ್ರಗತಿಪರ ರೈತರಾದ ಡಿ.ಟಿ. ಪಾಟೀಲ, ರಂಗ ಸೇವಾಕೃತರಾದ ಮಹಾಬಳೇಶ್ವರ ಯಕ್ಕುಂಡಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕ ವೇದಿಕೆ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಬಿ.ಎಸ್.ಸೊಪ್ಪಿನ, ಡಾ| ಶಾಮಸುಂದರ ಬಿದರಕುಂದಿ, ಬಾಬುರಾವ ಸಕ್ಕರಿ, ಪ್ರೊ| ಎಸ್. ಕೆ. ಆದಪ್ಪನವರ, ಸುನಂದಾ ಬೆನ್ನೂರ, ವಿ.ಜಿ. ಪಾಟೀಲ, ಗದಿಗಯ್ಯ ಹಿರೇಮಠ, ಪಿ.ಬಿ. ಹಿರೇಮಠ ಮೊದಲಾದವರಿದ್ದರು. ಕುಮಾರ ಶಿವಸ್ವಾಮಿ ಹಿರೇಮಠ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಅನಸೂಯಾ ನವಲಗುಂದ ಪ್ರಾರ್ಥಿಸಿದರು. ಡಾ| ಲಿಂಗರಾಜ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿರೂಪಾಕ್ಷ ಕಟ್ಟಿಮನಿ ವಂದಿಸಿದರು.