Advertisement

Hubballi: ಗಬ್ಬೂರಿನಲ್ಲಾಗಲಿ ಸುಸಜ್ಜಿತ ಬಸ್‌ ಶೆಲ್ಟರ್‌

05:05 PM Oct 12, 2023 | Team Udayavani |

ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಕಣ್ಣು ಕುಕ್ಕುವಂತಹ ಬಸ್‌ ಶೆಲ್ಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ನಗರದ ಹೊರವಲಯವಾಗಿರುವ ಗಬ್ಬೂರಿಗೆ ಅಂತಹ ಆದ್ಯತೆ ನೀಡಿಲ್ಲ. ದಿನ ಕಳೆದಂತೆ ಇಲ್ಲಿಂದ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದ್ದು, ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಒಂದು ಸುಸಜ್ಜಿತ ಬಸ್‌ ಶೆಲ್ಟರ್‌ ಅನಿವಾರ್ಯತೆ ನಿರ್ಮಾಣವಾಗಿದೆ.

Advertisement

ನಗರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಮಾರುಕಟ್ಟೆ, ಸಂತೆ ಪ್ರತಿಯೊಂದು ವ್ಯವಸ್ಥೆ ವಿಕೇಂದ್ರೀಕರಣಗೊಳ್ಳುತ್ತಿವೆ. ಇದಕ್ಕೆ
ತಕ್ಕಂತೆ ಅಲ್ಲಿನ ಜನರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಕೆಲಸ. ಹು-ಧಾ ಮಹಾನಗರ ಪಾಲಿಕೆ ಇಂತಹ ಸೌಲಭ್ಯ ಕಲ್ಪಿಸಿ ಅದೆಷ್ಟು ವರ್ಷಗಳು ಕಳೆದಿವೆಯೋ ಗೊತ್ತಿಲ್ಲ.

ಪಾಲಿಕೆ ನಿರ್ಲಕ್ಷéಕ್ಕೆ ಬೇಸತ್ತು ಅದೆಷ್ಟೋ ಸಂಘ ಸಂಸ್ಥೆಗಳು ಅಗತ್ಯ ಇರುವ ಕಡೆಗಳಲ್ಲಿ ಒಂದಿಷ್ಟು ಶೆಲ್ಟರ್‌ಗಳನ್ನು ನಿರ್ಮಿಸಿಕೊಟ್ಟಿವೆ. ಕನಿಷ್ಠ ಪಕ್ಷ ಅಂತಹ ಸಂಘ-ಸಂಸ್ಥೆಗಳು ಗುರುತಿಸಿ ಜನರಿಗೆ ಅನುಕೂಲ ಮಾಡುವ ಕೆಲಸಗಳು ಪಾಲಿಕೆಯಿಂದ ಕೂಡ ನಡೆಯಲಿಲ್ಲ. ಹೀಗಾಗಿ ಅನೇಕ ಕಡೆಗಳಲ್ಲಿ ಜನರು ಬಿಸಿಲು, ಮಳೆಯಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯ ಪಡೆದು ಬಸ್‌ ಹಿಡಿಯುವಂತಹ ಪರಿಸ್ಥಿತಿಯಿದ್ದು, ಗಬ್ಬೂರು ವೃತ್ತದಲ್ಲಿ ಜನರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ.

ಗೊಂದಲದ ಗಬ್ಬೂರು: ಈ ಭಾಗದ ಇದೀಗ ಸಾಕಷ್ಟು ಅಭಿವೃದ್ಧಿಗೊಳ್ಳುತ್ತಿತ್ತು. ಈ ಭಾಗದಲ್ಲಿರುವ ಕಂಪನಿ, ಸಂಸ್ಥೆ,
ಇತರೆಡೆ ಕೆಲಸ ನಿರ್ವಹಿಸುವವರು ಈ ಭಾಗದಲ್ಲಿಯೇ ಆಶ್ರಯ ಕಂಡುಕೊಂಡಿದ್ದಾರೆ. ಹೀಗಾಗಿ ಶಿಗ್ಗಾವಿ, ತಡಸ, ಕುಂದಗೋಳ ಭಾಗಗಳಿಗೆ ಹೋಗುವವರು ಸಾರಿಗೆ ವ್ಯವಸ್ಥೆಗಾಗಿ ಕಾಯುವವರು ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಬಸ್‌ ಚಾಲಕರು ಬಸ್‌ ಗಳನ್ನು ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳುತ್ತಿದ್ದಾರೆ. ಒಂದೇ ವೃತ್ತದಲ್ಲಿ ಎರಡು ಕಡೆ ಬಸ್‌ ತಂಗುದಾಣಗಳಾಗಿವೆ. ನಗರದಿಂದ ಹಳ್ಳಿಗಳಿಗೆ ಹೊರಡುವ ಬಸ್‌ಗಳು ಒಂದೆಡೆ ನಿಲುಗಡೆಯಾದರೆ ದೂರದ ಬಸ್‌ಗಳು ಇನ್ನೊಂದು ಕಡೆ ನಿಲ್ಲುತ್ತಿವೆ. ಎರಡು ಕಡೆಯೂ ಜನರಿಗೆ ನಿಲ್ಲಲು ಒಂದು ಸಣ್ಣ ಆಶ್ರಯವೂ ಇಲ್ಲ. ಹೀಗಾಗಿ ಮಹಿಳೆಯರು, ಮಕ್ಕಳು, ವೃದ್ಧರು ಬಿಸಿಲಿನಲ್ಲಿಯೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳವಿದ್ದರೂ ಶೆಲ್ಟರ್‌ ಇಲ್ಲ: ನಗರದಿಂದ ಆರ್‌ಟಿಒ ಕಚೇರಿಗೆ ಹೋಗುವ ಮಾರ್ಗದ ಎಡಬದಿಯಲ್ಲಿ ಹಿಂದೆ ಅಂಗಡಿ ಮುಂಗ್ಗಟ್ಟುಗಳಿದ್ದವು. ಆದರೆ ಅವು ಅನಧಿಕೃತ ಎನ್ನುವ ಕಾರಣಕ್ಕೆ ತೆರವುಗೊಳಿಸುವ ಕಾರಣಕ್ಕೆ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಬೇಕಾದ ಅಗತ್ಯ ಸ್ಥಳವಕಾಶವಿದ್ದರೂ ಕಾರ್ಯತಗೊಂಡಿಲ್ಲ. ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯರು, ಸ್ಥಳೀಯರು ಪಾಲಿಕೆ, ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇರುವ ಜಾಗದಲ್ಲಿ ಒಂದು ತಾತ್ಕಾಲಿಕ ಶೆಲ್ಟರ್‌ ನಿರ್ಮಿಸಿದರೆ ಬಿಸಿಲು ಮಳೆಯಲ್ಲಿ ಕಾಯುವ ಜನರಿಗೆ ಒಂದಿಷ್ಟು ಅನುಕೂಲವಾದೀತು ಎನ್ನುವುದು ಸ್ಥಳೀಯರ ಅಭಿಪ್ರಾಯ.

Advertisement

ನಿಲುಗಡೆಯ ಗೊಂದಲ: ಪಾಲಿಕೆಯಿಂದಲೋ ಅಥವಾ ಇನ್ನಾವುದೋ ಸಂಘ ಸಂಸ್ಥೆಯ ನೆರವು ಕೋರಿದರೆ ಮುಕ್ತ ಮನಸ್ಸಿನಿಂದ ಜನರ ಅನುಕೂಲಕ್ಕೆ ಶೆಲ್ಟರ್‌ ನಿರ್ಮಿಸಿ ಕೊಡುತ್ತಾರೆ. ಇದರಿಂದ ಸಾರಿಗೆ ಸಂಸ್ಥೆಗಳ ಬಸ್‌ ನಿಲುಗಡೆಗೆ ಅಧಿಕೃತಗೊಳಿಸಿದಂತಾಗುತ್ತದೆ. ಪಾಲಿಕೆಯಿಂದ ಈ ಕೆಲಸವಾದರೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಇಲ್ಲಿನ ನಿಲುಗಡೆ ಬಗ್ಗೆ ಚಾಲನಾ
ಸಿಬ್ಬಂದಿಗೆ ಸೂಚನೆ ನೀಡಲಿದ್ದಾರೆ. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಕೆಟ್ಟ ಪದ್ಧತಿ ಬೆಳೆಯಲಿದೆ. ಬಸ್‌ ಶೆಲ್ಟರ್‌ ನಿರ್ಮಾಣಗೊಂಡು ಬಸ್‌ ನಿಲುಗಡೆ ಅಧಿಕೃತಗೊಂಡರೆ ರಾತ್ರಿ ಈ ವೇಳೆ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು 30-35 ನಿಮಿಷಗಳ ಸಮಯ ಮಾಡಿಕೊಂಡು ಬಸ್‌ ನಿಲ್ದಾಣಕ್ಕೆ
ಹೋಗುವ ಗೋಳು ಹಾಗೂ ಬಸ್‌ ನಿರ್ವಾಹಕರಿಗೆ ದಮ್ಮಯ್ಯ ಅನ್ನುವುದು ಕೂಡ ತಪ್ಪಲಿದೆ.

ಹೊರಗಿನ ಪ್ರದೇಶಗಳ ತಾತ್ಸಾರ: ಕಳೆದ ಒಂದು ವರ್ಷದಿಂದ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಒಂದಿಷ್ಟು ಬಸ್‌ ಶೆಲ್ಟರ್‌ಗಳು ನಿರ್ಮಾಣ ಮಾಡಲಾಗಿದೆ. ಅನುಕೂಲಕ್ಕಿಂತ ಅವುಗಳಿಂದ ಜಾಹಿರಾತು ಆದಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಕೆಲವೆಡೆ ಅಗತ್ಯವಿಲ್ಲದಿದ್ದರೆ ನಿರ್ಮಿಸಲಾಗಿದೆ ಎನ್ನುವ ಆಕ್ಷೇಪಗಳು ಕೂಡ ಇವೆ. ಅದೇನೇ ಇದ್ದರೂ ನಿತ್ಯ ಸಾವಿರಾರು ಜನರಿಗೆ ಇದರಿಂದ ಅನುಕೂಲವಾಗಿದೆ. ಇವುಗಳ ಸ್ಥಾಪನೆಯಿಂದ ಒಂದಿಷ್ಟು ಬಸ್‌ ಶೆಲ್ಟರ್‌ ಕಾಣುವಂತಾಗಿದೆ. ನಗರದಲ್ಲಿ ನೀಡಿದ ಆದ್ಯತೆಯನ್ನು ಹೊರಗಿನ ಪ್ರದೇಶಗಳಲ್ಲಿ ಜನರ ಸಮಸ್ಯೆಗೂ ಸ್ಪಂದಿಸಬೇಕಿದೆ.

ಇಲ್ಲಿನ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಯನ್ನು ಗಮನಿಸಿದ್ದೇವೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ. ಆದರೆ ರಸ್ತೆ ಅಗಲೀಕರಣ, ಫ್ಲೈ ಓವರ್‌ ಬರಲಿದೆ ಎನ್ನುವ ಕಾರಣ ನೀಡುತ್ತಿದ್ದಾರೆ. ಈ ಭಾಗ ಬೆಳೆಯುತ್ತಿರುವುದರಿಂದ ಅಲ್ಲೊಂದು ಶೆಲ್ಟರ್‌ ಅಗತ್ಯವಿದೆ. ಈ ಕುರಿತು ನಮ್ಮ ಶಾಸಕರ ಗಮನಕ್ಕೆ ತಂದು ಅವರಿಂದ ಸ್ಥಳ ಪರಿಶೀಲನೆ ಮಾಡಿಸಿ ಕನಿಷ್ಠ ಪಕ್ಷ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು.
ಅಕ್ಷತಾ ಮೋಹನ ಅಸುಂಡಿ
ಪಾಲಿಕೆ ಸದಸ್ಯರು.

ನಗರ ಪ್ರದೇಶಗಳಲ್ಲಿ ಅಲ್ಲಿಲ್ಲಿ ನಿಂತುಕೊಂಡು ಬಸ್‌ ಹಿಡಿಯಬಹುದು. ಆದರೆ ಇಲ್ಲಿ ಕಡು ಬಿಸಿಲಿನಲ್ಲಿ ನಿಂತುಕೊಂಡೇ ಬಸ್‌ಗೆ ಕಾಯಬೇಕು. ಇದರ ಬದಲಿ ಬಸ್‌ ನಿಲ್ದಾಣಕ್ಕೆ ಹೋಗಬೇಕಾದರೆ ಹಣ, ಸಮಯ ಎರಡೂ ವ್ಯರ್ಥ. ಇದರ ಬದಲಿಗೆ ಒಂದು ಕಡೆ
ಬಸ್‌ ನಿಲುಗಡೆಗೆ ಒಂದು ಸ್ಥಳ ನಿಗದಿ ಮಾಡಿ ಶೆಲ್ಟರ್‌ ನಿರ್ಮಿಸಿದರೆ ಅನುಕೂಲವಾಗುತ್ತದೆ.
ಸುಮಂಗಲಾ ಸೊರಟೂರ, ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next