ಧಾರವಾಡ/ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮೇ 22ರ ಬೆಳಿಗ್ಗೆ 6:00 ಗಂಟೆಯಿಂದ ಮೇ 24ರ ಬೆಳಿಗ್ಗೆ 6:00 ಗಂಟೆವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿ, ಡಿಸಿ ನಿತೇಶ ಪಾಟೀಲ ಗುರುವಾರ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರು ತುರ್ತು ವೈದ್ಯಕೀಯ ಸೌಲಭ್ಯ ಹೊರತುಪಡಿಸಿ, ಉಳಿದ ಎಲ್ಲ ಅಂಗಡಿ- ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ.
ಇದಲ್ಲದೇ ಮೇ 22-23 ರಂದು ಬೆಳಿಗ್ಗೆ 6:00 ರಿಂದ ಬೆಳಿಗ್ಗೆ 8:00 ಗಂಟೆವರೆಗೆ ಮಾತ್ರ ಹಣ್ಣು-ತರಕಾರಿ, ಹಾಲು ಮಾರಾಟ ಕೇಂದ್ರಗಳಿಗೆ ಅವಕಾಶ ನೀಡಲಾಗಿದೆ. ಸರಕಾರಿ ವಾಹನಗಳಿಗೆ ಮತ್ತು ಕೋವಿಡ್ -19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳಿಗೆ ಈ ಆದೇಶ ಅನ್ವಯಿಸಲ್ಲ. ಅಂತ್ಯಸಂಸ್ಕಾರಕ್ಕೆ ಕೇವಲ 5 ಜನರಿಗೆ ಮಾತ್ರ ಪಾಲ್ಗೊಳ್ಳುವುದಕ್ಕೆ ಈ ಆದೇಶ ಆನ್ವಯ ಆಗದು. ಈ ನಿಯಮಗಳನ್ನು ಸಾರ್ವಜನಿಕರು ಪಾಲಿಸದೇ ಇದ್ದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ಬಹುತೇಕರ ಸಮ್ಮತಿ: ಜಿಲ್ಲಾಧಿಕಾರಿಗಳ ಆದೇಶಕ್ಕೂ ಮುನ್ನ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ವರ್ತಕರು, ಉದ್ದಿಮೆದಾರರು, ವಾಣಿಜ್ಯ ಸಂಘಟನೆಗಳ ಸದಸ್ಯರ ಸಭೆ ನಡೆದಿದ್ದು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಮಾದರಿಯಲ್ಲಿ ಜಿಲ್ಲೆಯಲ್ಲೂ ಸಂಪೂರ್ಣ ಲಾಕ್‌ಡೌನ್ ಮಾಡುವ ಕುರಿತು ಬಹುತೇಕರು ಸಮ್ಮತಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳ, ಸಂಪೂರ್ಣ ಲಾಕ್‌ಡೌನ್ ಅನಿವಾರ್ಯತೆ ಕುರಿತಾಗಿ ಚರ್ಚಿಸಲಾಗಿದ್ದು, ಲಾಕ್‌ಡೌನ್ ಹೇಗಿರಬೇಕು ಎಂಬುದರ ಕುರಿತಾಗಿ ಅನೇಕರು ಸಲಹೆ ನೀಡಿದ್ದಾರೆ.
ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಮಾತನಾಡಿ, ಮುಂದಿನ 15 ದಿನಗಳಿಗೆ ಬೇಕಾಗುವ ಅಗತ್ಯ ಆಹಾರ ಪದಾರ್ಥಗಳು ದಾಸ್ತಾನು ಇದೆ. ಜನರು ಜೀವ ಉಳಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವುದು ಅಗತ್ಯವಿದೆ. ಮೊದಲು ಜನಸಾಮಾನ್ಯರು ಕೂಡ ಖರೀದಿಗೆ ಎಪಿಎಂಸಿಗೆ ಆಗಮಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕಲಾಗಿದೆ. ಕೇವಲ ವ್ಯಾಪಾರಸ್ಥರು ಮಾತ್ರ ಇಲ್ಲಿಗೆ ಬರುತ್ತಿದ್ದಾರೆಂದರು. ಉದ್ಯಮಿ ನಾಗರಾಜ ದಿವಟೆ ಮಾತನಾಡಿ, ಜನರು ಅಗತ್ಯ ವಸ್ತುಗಳ ಖರೀದಿ ನೆಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಜನರ ಜೀವಕ್ಕಿಂತ ದೊಡ್ಡದು ಯಾವುದೂ ಅಲ್ಲ. ಹೀಗಾಗಿ ಮೇ 30ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡುವುದು ಸೂಕ್ತ. ಹಿಂದಿನ ಲಾಕೌಡೌನ್ ಜನರಿಗೆ ಅನುಭವವಿದೆ ಎಂದರು.
ವಾರದಲ್ಲಿ ಎರಡು ದಿನ ಬೆಳಿಗ್ಗೆ 6:00 ರಿಂದ 10:00 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಬೇಕು. ಉಳಿದ ಐದು ದಿನ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಬೆಳಿಗ್ಗೆ-ಸಂಜೆ ವೇಳೆ ಗುಂಪಾಗಿ ವಾಕಿಂಗ್ ಹೋಗುವುದು ಹೆಚ್ಚಾಗುತ್ತಿದೆ ಈ ಬಗ್ಗೆಯೂ ಪೊಲೀಸರು ಗಮನ ಹರಿಸಬೇಕು. ಶೇ.70 ಜನ ಈಗಾಗಲೇ ದಿನಸಿ ಖರೀದಿಸಿದ್ದಾರೆ. ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇನ್ನಷ್ಟು ಸಡಿಲಿಕೆ ನೀಡಿದರೆ ಬೀದಿ ಬೀದಿಯಲ್ಲಿ ಶವಗಳನ್ನು ನೋಡಬೇಕಾಗುತ್ತದೆ. ಜೀವ ಇದ್ದರೆ ಮುಂದೆ ಬದುಕು ಕಟ್ಟಿಕೊಳ್ಳಬಹುದು. ಎಷ್ಟು ದಿನ ಸಂಪೂರ್ಣ ಲಾಕ್‌ಡೌನ್ ಮಾಡಬೇಕು ಎಂಬುದನ್ನು ಪೂರ್ವ ನಿರ್ಧರಿಸಿ ಘೋಷಣೆ ಮಾಡಬೇಕು ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ.
ಆದರೆ ಇದೀಗ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಅದಕ್ಕೆ ಬೇಕಾದ ಔಷಧ ಉತ್ಪಾದನೆಯಾಗಿಲ್ಲ. ಮುಂದೆ ಇದು ದೊಡ್ಡ ಸಮಸ್ಯೆ ಉಂಟು ಮಾಡಬಹುದು. ನಮ್ಮಲ್ಲಿ ವೈದ್ಯಕೀಯ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಧಾರವಾಡದಲ್ಲಿ ಇನ್ನೊಂದು ಸಭೆ ಹಾಗೂ ಉಳಿದ ಸಂಘ-ಸಂಸ್ಥೆಗಳ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು. ಎಲ್ಲಾ ಸಾಧಕ- ಬಾಧಕಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು. ಇನ್ನೂ ಕೆಲ ಸಂಘ-ಸಂಸ್ಥೆಗಳ ಪ್ರಮುಖರು ಸಭೆಗೆ ಬರಬೇಕಿತ್ತು. ಎಲ್ಲರ ಅಭಿಪ್ರಾಯ ಪಡೆದು ಮೇ 24ರ ನಂತರ ಜಿಲ್ಲೆಯಲ್ಲಿ ಹೇಗಿರಬೇಕು ಎಂಬುದನ್ನು ನಿರ್ಧರಿಸಬೇಕಿದೆ.
ಅವರವರ ಪ್ರದೇಶದಲ್ಲೇ ಖರೀದಿ ಮಾಡಬೇಕೆನ್ನುವ ನಿರ್ಬಂಧ ಹಾಕಿ ಸೋಂಕು ಹರಡದಂತೆ ತಡೆಗಟ್ಟಬೇಕಿದೆ. ಜಿಲ್ಲೆಯಲ್ಲಿ ಕೈಗೊಳ್ಳುವ ನಿರ್ಧಾರ ಪಕ್ಕದ ಜಿಲ್ಲೆ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಆಯಾಮಗಳಿಂದ ಚಿಂತನೆ, ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ , ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ, ಜಿಪಂ ಸಿಇಒ ಡಾ|ಬಿ.ಸುಶೀಲಾ, ಪಾಲಿಕೆ ಆಯುಕ್ತ ಡಾ|ಸುರೇಶ್ ಇಟ್ನಾಳ, ಉಪವಿಭಾಗಾಧಿಕಾರಿ ಡಾ| ಗೋಪಾಲಕೃಷ್ಣ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಇನ್ನಿತರರಿದ್ದರು.